ದೆಹಲಿ ವಿಧಾನಸಭಾ ಚುನಾವಣೆ : RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪತ್ರ ಬರೆದ ಕೇಜ್ರಿವಾಲ್
ದೆಹಲಿ ಚುನಾವಣೆ ಹತ್ತಿರವಿರುವಾಗ, ಕೇಜ್ರಿವಾಲ್ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಬಿಜೆಪಿ ವಿರುದ್ಧ ಎರಡು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಯ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಬಿಜೆಪಿ ವಿರುದ್ಧ ಎರಡು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಮಾಡಿದ ತಪ್ಪುಗಳನ್ನು ನೀವು ಬೆಂಬಲಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ ಅರವಿಂದ್ ಕೇಜ್ರಿವಾಲ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಾಗಲೇ ಅರವಿಂದ್ ಕೇಜ್ರಿವಾಲ್ ಬರೆದ ಈ ಪತ್ರ ರಾಷ್ಟ್ರ ರಾಜಧಾನಿಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ವರದಿಯಂತೆ ದೆಹಲಿಯಲ್ಲಿ ಜನರ ಮತ ಗಳಿಸಲು ಬಿಜೆಪಿ ಆರ್‌ಎಸ್‌ಎಸ್‌ನ ಬೆಂಬಲವನ್ನು ಕೇಳಲಿದೆ ಎಂದಿದೆ. ಹಾಗಿದ್ರೆ ಆರ್‌ಎಸ್‌ಎಸ್ ಹಾಗೂ ಮೋಹನ್ ಭಾಗವತ್ ಅವರು ಬಿಜೆಪಿ ಕೆಲ ದಿನಗಳಿಂದ ನಡೆಸುತ್ತಿರುವ ಎಲ್ಲಾ ತಪ್ಪು ಕೆಲಸಗಳನ್ನು ಬೆಂಬಲಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ಬಿಜೆಪಿ ದೆಹಲಿಯಲ್ಲಿ ಬಹಿರಂಗವಾಗಿ ಮತಗಳನ್ನು ಖರೀದಿ ಮಾಡುತ್ತಿದೆ. ಅಲ್ಲದೇ ಕೇಸರಿ ಪಕ್ಷವೂ ದೊಡ್ಡ ಸಂಖ್ಯೆಯಲ್ಲಿ ಪೂರ್ವಂಚಲಿ ಹಾಗೂ ದಲಿತ ವೋಟುಗಳನ್ನು ಡಿಲೀಟ್ ಮಾಡಿದೆ. ಬಿಜೆಪಿಯ ಇಂತಹ ಚಟುವಟಿಕೆಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ ಎಂದು ಅರವಿಂದ್ ಕೇಜ್ರಿವಾಲ್ ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಬಿಜೆಪಿ ಇಂತಹ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂಬುದನ್ನು ಆರೆಸ್ಸೆಸ್ ಮುಖ್ಯಸ್ಥರು ನಂಬುತ್ತಾರೆಯೇ ಎಂದು ಕೇಜ್ರಿವಾಲ್ ಕೇಳಿದ್ದಾರೆ.
ಆದರೆ ಬಿಜೆಪಿ ಕೇಜ್ರಿವಾಲ್ ಆರೋಪಕ್ಕೆ ತಿರುಗೇಟು ನೀಡಿದ್ದು, ಅಕ್ರಮ ವಲಸಿಗರಾದ ರೋಹಿಂಗ್ಯಾಗಳು ಹಾಗೂ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳಿಗೆ ಕೇಜ್ರಿವಾಲ್ ಹಾಗೂ ಎಎಪಿಯೂ ದೆಹಲಿಯಲ್ಲಿ ವಾಸ ಮಾಡುವುದಕ್ಕೆ ಸಹಾಯ ಮಾಡಿದೆ. ಅವರಿಗೆ ದಾಖಲೆಗಳು ಹಾಗೂ ಹಣ ನೀಡಿ ಮುಂದಿನ ಚುನಾವಣೆಯಲ್ಲಿ ತಮ್ಮ ಮತಬ್ಯಾಂಕ್ ಮಾಡಲು ಮುಂದಾಗಿದ್ದಾಎ ಎಂದು ಬಿಜೆಪಿ ಆರೋಪಿಸಿದೆ. ಈ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಭಾರೀ ಜಟಾಪಟಿ ನಡೆಯುತ್ತಿದೆ. 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಮುಂದಿನ ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಡೆಯಲಿದೆ.