ಚಳ್ಳಕೆರೆ ಮಾಜಿ ಶಾಸಕ ಡಿ.ಸುಧಾಕರ್ ಅವರ ನಿಧನದಿಂದ ಅವರ ಕುಟುಂಬದ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ದಾನ-ಧರ್ಮಕ್ಕೆ ಹೆಸರಾದ ಜೈನ್ ಕುಟುಂಬದ ಕುಡಿಯಾದ ಇವರು, ಚಿಕ್ಕಪ್ಪ ಎನ್.ಜಯಣ್ಣರ ಹಾದಿಯಲ್ಲಿ ರಾಜಕೀಯ ಪ್ರವೇಶಿಸಿ, 2004-2008ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಅವರ ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಚಿತ್ರಣ ಇಲ್ಲಿದೆ.
ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಲ್ಲಿ ಡಿ.ಸುಧಾಕರ್ ಮನೆತನಕ್ಕೆ ದೊಡ್ಡ ಹೆಸರಿದೆ. ಮೊದಲಿನಿಂದಲೂ ಈ ಕುಟುಂಬ ದಾನ-ಧರ್ಮಗಳಿಗೆ ಎತ್ತಿದ ಕೈ. ಇವರ ತಂದೆ ದಶರಥಯ್ಯ ಮೂಲ ವ್ಯವಹಾರಸ್ಥರು. ಇವರ ಚಿಕ್ಕಪ್ಪ ಎನ್.ಜಯಣ್ಣ, ಚಳ್ಳಕೆರೆ ಕ್ಷೇತ್ರದಲ್ಲಿ ಎರಡು ಬಾರಿಗೆ ಶಾಸಕರಾಗಿದ್ದವರು. ಎನ್.ಜಯಣ್ಣ ಎಂದರೆ ಇಡೀ ಕ್ಷೇತ್ರದಲ್ಲಿ ಬಡವರ ಪರ ಎಂಬ ಖ್ಯಾತಿ ಗಳಿಸಿದವರು. ಸಾಮಾನ್ಯ ಕ್ಷೇತ್ರವಾಗಿದ್ದ ಚಳ್ಳಕೆರೆಯಲ್ಲಿ 1978ರಿಂದ 1983ರವರೆಗೆ ನಂತರ 1989ರಿಂದ 1994ರವರೆಗೆ ಶಾಸಕರಾಗಿದ್ದವರು.ಡಿ.ಸುಧಾಕರ್ ಅವರಿಗೆ ಒಬ್ಬಳು ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಪುತ್ರ ಸುಹಾಸ್ ಮತ್ತು ಪುತ್ರಿ ಸ್ಫೂರ್ತಿ ಇಬ್ಬರಿಗೂ ವಿವಾಹ ಮಾಡಿರುವ ಸುಧಾಕರ್, ಎಂದಿಗೂ ರಾಜಕಾರಣಕ್ಕೆ ಪತ್ನಿ ಹರ್ಷಿಣಿ ಸುಧಾಕರ್ ಮತ್ತು ಮಕ್ಕಳನ್ನು ಪರಿಚಯಿಸಿದವರಲ್ಲ. ಬಹುಶಃ ಇವರ ನಿಧನದ ನಂತರ ಇವರ ಕುಟುಂಬದ ರಾಜಕಾರಣ ಕೊನೆಗೊಳ್ಳುವುದಾ ಎಂಬ ಪ್ರಶ್ನೆ ಈಗ ಎದುರಾಗಿದೆ.

ಡಿ.ಸುಧಾಕರ್ ಕುಟುಂಬ
ಇವರ ಕುಟುಂಬ ಮೂಲತಃ ವ್ಯವಹಾರಸ್ಥರಾಗಿದ್ದರಿಂದ ಗೊಮ್ಮಟೇಶ್ವರ ಬಸ್ ಇಟ್ಟಿದ್ದರು. ಈ ಭಾಗದಲ್ಲಿ ಗೊಮ್ಮಟೇಶ್ವರ ಬಸ್ಸು ಒಂದು ಕಾಲದಲ್ಲಿ ಬಲು ಫೇಮಸ್ಸು. ದಶರಥಯ್ಯ-ಕಾಂಚನ್ ಮಾಲ ದಂಪತಿಗೆ ಏಳು ಜನ ಮಕ್ಕಳು. ಅವರಲ್ಲಿ 6 ಗಂಡು ಮಕ್ಕಳು, ಒಬ್ಬರು ಹೆಣ್ಣುಮಗಳು. ಇವರ ಸಹೋದರರಾದ ಶಾಂತಕುಮಾರ್, ಮಹಾವೀರಪ್ಪ ನಿಧನರಾಗಿದ್ದು. ಇದೀಗ ಡಿ.ಸುಧಾಕರ್ ವಿಧಿವಶರಾಗಿದ್ದಾರೆ.
ಅಣ್ಣ ಶಾಂತಕುಮಾರ್ ಹೆಸರಿನಲ್ಲಿ ಅವರ ನೆನಪಿಗಾಗಿ ಚಳ್ಳಕೆರೆಯ ವಿಠಲ ನಗರದಲ್ಲಿ ಒಳಾಂಗಣ ಕ್ರೀಡಾಂಗಣದ ರೀತಿಯಲ್ಲಿ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಮಾಡಿದ್ದಾರೆ. 2004ರಿಂದ 2008ರವರೆಗೆ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಡಿ.ಸುಧಾಕರ್, ದಿನಾಲೂ ಮುಂಜಾನೆ ಇದೇ ಒಳಾಂಗಣ ಕ್ರೀಡಾಂಗಣದಲ್ಲಿ ಶೆಟಲ್ ಕಾಕ್ ಆಡುತ್ತಿದ್ದರು.
ಚಿಕ್ಕಪ್ಪನ ರಾಜಕೀಯ
ಚಳ್ಳಕೆರೆ ಕ್ಷೇತ್ರ ಸಾಮಾನ್ಯ ಕ್ಷೇತ್ರದಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೇಲೆ ಹಿರಿಯೂರಿನ ರಾಜಕಾರಣಕ್ಕೆ ಒಗ್ಗಿಕೊಂಡಿದ್ದ ಇವರು ಈ ಕ್ರೀಡಾಂಗಣದಲ್ಲಿ ಆಟ ಆಡುವುದನ್ನು ನಿಲ್ಲಿಸಿದ್ದರು. ಸಹೋದರರ ಪೈಕಿ ಎಲ್ಲರಿಗಿಂತಲೂ ಕಿರಿಯರಾಗಿದ್ದ ಇವರು ರಾಜಕಾರಣದಲ್ಲಿ ಆಸಕ್ತಿ ಇದ್ದ ಕಾರಣ ಜೈನ್ ಮನೆತನದಲ್ಲಿ ಇವರ ಚಿಕ್ಕಪ್ಪ ಶಾಸಕರಾದ ಮೇಲೆ ಅವರ ಹಾದಿಯನ್ನೆ ಮುಂದುವರಿಸಿದ್ದರು.


