ಕರ್ನಾಟಕದ ಸಾಂಖ್ಯಿಕ ಮತ್ತು ಯೋಜನಾ ಸಚಿವ ಡಿ. ಸುಧಾಕರ್ ಅವರು ಅನಾರೋಗ್ಯದಿಂದಾಗಿ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 'ಬಡವರ ಬಂಧು' ಎಂದೇ ಜನಪ್ರಿಯರಾಗಿದ್ದರು ಮತ್ತು ಸಹಕಾರ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದರು.

ಬೆಂಗಳೂರು: ಕರ್ನಾಟಕ ರಾಜ್ಯದ ಸಾಂಖ್ಯಿಕ ಮತ್ತು ಯೋಜನಾ ಸಚಿವರಾಗಿದ್ದ ಡಿ. ಸುಧಾಕರ್ ಅವರು ಭಾನುವಾರ ಬೆಳಗಿನ ಜಾವ 3.15 ಗಂಟೆಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

Add Asianetnews Kannada as a Preferred SourcegooglePreferred

ಡಿ. ಸುಧಾಕರ್ ಅವರ ನಿಧನದಿಂದ ರಾಜ್ಯ ರಾಜಕೀಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಜನಪರ ನಾಯಕನಾಗಿ ಗುರುತಿಸಿಕೊಂಡಿದ್ದ ಅವರು ಬಡವರ ಪರ ಕಾಳಜಿ ವಹಿಸಿದ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದರು. ಹಿರಿಯೂರು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜಕೀಯಕ್ಕೆ ಚಿಕ್ಕಪ್ಪನೇ ಪ್ರೇರಣೆ

1961ರ ಮಾರ್ಚ್ 28ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಜನಿಸಿದ ಸುಧಾಕರ್ ಅವರು ತಮ್ಮ ಪ್ರಾಥಮಿಕ ಹಾಗೂ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಚಿತ್ರದುರ್ಗದಲ್ಲೇ ಪೂರ್ಣಗೊಳಿಸಿದರು. ನಂತರ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದರು. ಪದವಿ ಶಿಕ್ಷಣದ ನಂತರ ಅವರು ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಂಡರು. ಅವರ ರಾಜಕೀಯ ಪ್ರವೇಶಕ್ಕೆ ಕುಟುಂಬ ಹಿನ್ನೆಲೆ ಪ್ರಮುಖ ಕಾರಣವಾಗಿತ್ತು. ಅವರ ಚಿಕ್ಕಪ್ಪ ಎನ್. ಜಯಣ್ಣ ಅವರು ಚಳ್ಳಕೆರೆ ಕ್ಷೇತ್ರದ ಶಾಸಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸುಧಾಕರ್ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿಯನ್ನು ಡಿ.ಸುಧಾಕರ್ ವಹಿಸಿಕೊಂಡಿದ್ದರು.

ರಾಜಕೀಯ ಜೀವನದ ಬೆಳವಣಿಗೆ

ಡಿ. ಸುಧಾಕರ್ ಅವರು 2004ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುತ್ತಿದ್ದಂತೆ ಅವರು ಸಾಮಾನ್ಯ ಕ್ಷೇತ್ರವಾದ ಹಿರಿಯೂರು ಕಡೆಗೆ ತನ್ನ ರಾಜಕೀಯ ಸ್ಥಾನವನ್ನು ಬದಲಿಸಿದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ ಬಿಎಸ್‌. ಯಡಿಯೂರಪ್ಪ ಅವರ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದರು.

2013ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾದ ಅವರು, 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡರು. ಆದರೆ 2023ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾಂಖ್ಯಿಕ ಮತ್ತು ಯೋಜನಾ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.

ಸಹಕಾರ ಕ್ಷೇತ್ರದಲ್ಲಿ ಸಾಧನೆ

ರಾಜಕೀಯದ ಜೊತೆಗೆ ಸಹಕಾರ ಕ್ಷೇತ್ರದಲ್ಲೂ ಅವರು ಮಹತ್ವದ ಪಾತ್ರ ವಹಿಸಿದ್ದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಸಹಕಾರ ಸಂಘಗಳ ಮೂಲಕ ಸಾವಿರಾರು ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

ಜನಪ್ರಿಯ ನಾಯಕ

ಚಳ್ಳಕೆರೆ ಹಾಗೂ ಹಿರಿಯೂರು ಕ್ಷೇತ್ರಗಳಲ್ಲಿ ಜೈನ ಸಮುದಾಯದ ಮತದಾರರ ಸಂಖ್ಯೆ ಅತಿ ಕಡಿಮೆ ಇದ್ದರೂ, ಇತರ ಸಮುದಾಯಗಳ ವಿಶ್ವಾಸವನ್ನು ಗಳಿಸುವ ಮೂಲಕ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಡವರ ನೆರವಿಗೆ ಸದಾ ಸಿದ್ಧರಾಗಿದ್ದ ಕಾರಣ ಅವರಿಗೆ "ಬಡವರ ಬಂಧು" ಎಂಬ ಹೆಸರೂ ದೊರಕಿತ್ತು.

ಡಿ. ಸುಧಾಕರ್ ಅವರು ಶ್ರೀಮತಿ ಹರ್ಷಿಣಿ ಅವರೊಂದಿಗೆ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದು, ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಈಗ ತಮ್ಮ 65ನೇ ವರ್ಷದಲ್ಲಿ ಕುಟುಂಬವನ್ನು ಅಗಲಿದ್ದಾರೆ.