ರಾಜ್ಯ ಸರ್ಕಾರದ ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚಾಗಿದ್ದು, ಕೃಷ್ಣಬೈರೇಗೌಡ ನೇತೃತ್ವದಲ್ಲಿ ಹಲವು ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿದ್ದಾರೆ. ಮತ್ತೊಂದೆಡೆ, ಬೇಳೂರು ಗೋಪಾಲಕೃಷ್ಣ ಕೂಡ 30 ಶಾಸಕರೊಂದಿಗೆ ದೆಹಲಿಗೆ ತೆರಳುವುದಾಗಿ ಹೇಳಿದ್ದು, ಸಚಿವ ಸ್ಥಾನಕ್ಕಾಗಿ ತಮ್ಮ ಹಕ್ಕನ್ನು ಮಂಡಿಸಲಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆಯ ಚರ್ಚೆಯನ್ನು ತೀವ್ರಗೊಳಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚಾಗಿದ್ದು, ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಐದು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ತೆರಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ಮುಂದಿನ ವಾರ ಮತ್ತೊಂದು ತಂಡ ದೆಹಲಿಗೆ ತೆರಳಲಿದ್ದು, ಸಂಪುಟ ಪುನಾರಚನೆಗೆ ಮತ್ತಷ್ಟು ಒತ್ತಡ ಹಾಕಲಿದೆ ಎಂದು ತಿಳಿದು ಬಂದಿದೆ. ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಶ್ರೀನಿವಾಸ್ ಮಾನೆ, ಶಾಸಕ ಯಾಸಿರ್ ಖಾನ್ ಪಠಾಣ್, ಖನೀಜ್ ಫಾತಿಮಾ ಅವರು ದೆಹಲಿಗೆ ತೆರಳಿದ್ದಾರೆ. ಪ್ರಿಯಕೃಷ್ಣ ಅವರು ದೆಹಲಿಗೆ ತೆರಳಿರುವುದಾಗಿ ಹೇಳುತ್ತಿದ್ದರೂ ಖಚಿತಗೊಂಡಿಲ್ಲ.

ಈ ಹಿಂದೆ ಅಶೋಕ್‌ ಪಟ್ಟಣ್‌ ಸೇರಿ ಹಲವು ಶಾಸಕರು ದೆಹಲಿಗೆ ತೆರಳಿ ಸುರ್ಜೇವಾಲಾ ಭೇಟಿಯಾಗಿದ್ದರು. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಅಗತ್ಯದ ಬಗ್ಗೆ ಪ್ರತಿಪಾದಿಸಲಿದ್ದಾರೆ. ಜತೆಗೆ ಸಂಪುಟ ಪುನಾರಚನೆ ವೇಳೆ ತಮ್ಮ ಹೆಸರನ್ನೂ ಪರಿಗಣಿಸುವಂತೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಿಯೋಗದಲ್ಲಿ ಯಾರ್‍ಯಾರು?

ಶಾಸಕರಾದ ರಿಜ್ವಾನ್ ಅರ್ಷದ್, ಶ್ರೀನಿವಾಸ್ ಮಾನೆ, ಶಾಸಕ ಯಾಸಿರ್ ಖಾನ್ ಪಠಾಣ್, ಖನೀಜ್ ಫಾತಿಮಾ, ಪ್ರಿಯಕೃಷ್ಣ

ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ

ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದು, ಇದೇ ತಿಂಗಳು ಮೇ 27ರಂದು 30 ಶಾಸಕರು ದೆಹಲಿ ಪ್ರವಾಸ ಮಾಡುತ್ತೇವೆ. ಹೈಕಮಾಂಡ್ ಭೇಟಿಯಾಗಿ ನಮ್ಮ ಹಕ್ಕು ಮಂಡನೆ ಮಾಡುತ್ತೇವೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷ ಅವರು ಅಧಿಕಾರ ಅನುಭವಿಸಿದ್ದಾರೆ. ಈಗ ನಮಗೆ ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ವಿಚಾರವನ್ನು ಹೈಕಮಾಂಡ್‌ ನಾಯಕರು ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಸಚಿವ ಸ್ಥಾನ ಕೊಟ್ಟರೆ ಖುಷಿ, ನಾನು ದೆಹಲಿಗೆ ಹೋಗಲ್ಲ: ಸಂಗಮೇಶ್ವರ

ಶಿವಮೊಗ್ಗ: ಭದ್ರಾವತಿ ಬಿಟ್ಟು ಎಲ್ಲಿಗೂ ಹೋಗಿಲ್ಲ. ಸಚಿವ ಸ್ಥಾನ ನೀಡುವುದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಬಿಟ್ಟಿದ್ದು. ಅವರಾಗಿಯೇ ಅಧಿಕಾರ ಕೊಟ್ಟರೆ ತಗೆದುಕೊಳ್ಳೂತ್ತೇನೆ, ಇಲ್ಲದಿದ್ದರೆ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ ಎಂದು ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನದ ಮೇಲೆ ನನಗೆ ಸಚಿವ ಸ್ಥಾನ ಕೊಡುವುದಿದ್ದರೆ ಕೊಡಲಿ. ಕೊಟ್ಟರೆ ಸಂತೋಷ. ಕ್ಷೇತ್ರದ ಜನ ಸಚಿವರಾಗಲಿ ಎಂದು ಬಯಸುತ್ತಿದ್ದಾರೆ. ಆದರೆ, ಮೇಲಿನವರು ಕಣ್ಣು ಬಿಡಬೇಕಲ್ಲ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಎರಡು ಸಲ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ. ಭದ್ರಾವತಿಗೆ ಬಂದಾಗ ಸಿಎಂ, ಡಿಸಿಎಂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು ಎಂದರು.