ಬೆಳಗ್ಗೆ 8ಕ್ಕೆ ದಿಲ್ಲಿಯಿಂದ ಬಂದು ಹೊಸ ರೇಷ್ಮೆ ಪಂಚೆ, ಅಂಗಿ ಧರಿಸಿ ಬ್ಯುಸಿ, ವಿಧಾನಸೌಧದ ಮೆಟ್ಟಿಲುಗಳಿಗೆ ಶಿರಬಾಗಿ ನಮಸ್ಕರಿಸಿ ಪ್ರವೇಶಿಸಿದ ಡಿಸಿಎಂ. 

ಬೆಂಗಳೂರು(ಮೇ.21): ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಬೆಳಗ್ಗಿನಿಂದಲೂ ಲವಲವಿಕೆಯಿಂದ ಬಿಡುವಿಲ್ಲದಂತೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರು ಸದಾಶಿವನಗರದ ಮನೆಗೆ ತೆರಳಿ ನಿತ್ಯಕರ್ಮಗಳನ್ನು ಪೂರೈಸಿಕೊಂಡ ಬಳಿಕ ಮನೆ ದೇವರಿಗೆ ಪೂಜೆ ಸಲ್ಲಿಸಿದರು. ಹೊಸ ರೇಷ್ಮೆ ಪಂಚೆ, ಶರ್ಚ್‌ ಧರಿಸಿ ಹೊರಬಂದ ಅವರು, ಅದಾಗಲೇ ಮನೆಯ ಸುತ್ತಮುತ್ತ ನೆರೆದಿದ್ದ ಅಭಿಮಾನಿಗಳು, ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಿಗೆ ನಗುಮುಖದಿಂದಲೇ ಕೈಬೀಸಿ ಶುಭ ಕೋರಿದರು.

ಕಾಂಗ್ರೆಸ್‌ 5 ಗ್ಯಾರಂಟಿ ಈಡೇರಿಕೆಗೆ, ಸಾಲದ ಬಡ್ಡಿಗಿಂತ ಕಡಿಮೆ ಹಣ ಸಾಕು: ಸಿಎಂ ಸಿದ್ದರಾಮಯ್ಯ

ಸದಾಶಿವನಗರದ ಮನೆ ಸುತ್ತಮುತ್ತ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಇದ್ದರೂ ಅನೇಕ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಡಿ.ಕೆ.ಶಿವಕುಮಾರ್‌ ಪರವಾಗಿ ಘೋಷಣೆ ಕೂಗಿ ನೂತನ ಉಪಮುಖ್ಯಮಂತ್ರಿಗೆ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸುತ್ತಿದ್ದ ದೃಶ್ಯಕಂಡು ಬಂತು.

ಆನಂತರ ದೇವನಹಳ್ಳಿಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ ಅವರು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಆತ್ಮೀಯವಾಗಿ ಹೂಗುಚ್ಛ ನೀಡಿ ಬರಮಾಡಿಕೊಂಡರು.

ಪೂರ್ವಸಿದ್ಧತೆ ಪರಿಶೀಲನೆ:

ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರೇಷ್ಮೆ ಪಂಚೆ, ಶರ್ಚ್‌ ಧರಿಸಿಯೇ ಕ್ರೀಡಾಂಗಣಕ್ಕೆ ಬಂದಿದ್ದ ಡಿ.ಕೆ.ಶಿವಕುಮಾರ್‌ ಅವರು, ಕಾರ್ಯಕ್ರಮಕ್ಕೆಂದು ಹೊರ ರಾಜ್ಯಗಳಿಂದ ಆಗಮಿಸಿದ ವಿವಿಧ ಪಕ್ಷಗಳ ನಾಯಕರ ಬಳಿಗೆ ಸ್ವತಃ ತೆರಳಿ ಯೋಗಕ್ಷೇಮ ವಿಚಾರಿಸಿಕೊಂಡು ಗಮನ ಸೆಳೆದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಹಿರಿಯ ನಟ ಕಮಲ್‌ಹಾಸನ್‌, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ ಹಲವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್‌ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

ಖುದ್ದಾಗಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆಂದು ಸಿದ್ಧಪಡಿಸಿದ್ದ ವೇದಿಕೆಯನ್ನು ಪರಿಶೀಲಿಸಿದರು. ವಿವಿಧ ಜಿಲ್ಲೆಗಳಿಂದ ಬಂದ ಪಕ್ಷದ ಮುಖಂಡರನ್ನು ಸಂತಸದಿಂದಲೇ ಮಾತನಾಡಿಸಿದರು. ಸಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿ, ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಸಂಚಾರಿ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕಂಡುಬಂತು.

ಶಕ್ತಿ ಕೇಂದ್ರಕ್ಕೆ ನಮಸ್ಕಾರ:

ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂಟು ಮಂದಿ ಸಚಿವರೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರು, ಸಿದ್ದರಾಮಯ್ಯ ಅವರು ಮುಖ್ಯದ್ವಾರದ ಮೂಲಕ ವಿಧಾನಸೌಧದ ಒಳಗೆ ಪ್ರವೇಶಿಸುತ್ತಿದ್ದಂತೆ ಶಕ್ತಿಕೇಂದ್ರದ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿ ಒಳಗೆ ಪ್ರವೇಶಿಸಿದರು. ಸ್ಥಳದಲ್ಲೇ ಇದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರುಗಳನ್ನು ಸ್ವಾಗತಿಸಿದರು.