ಶಾಸಕರು ಮರ್ಯಾದೆಯಿಂದ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು: ಡಿಕೆಶಿ
ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಯಾರೂ ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡಬಾರದು. ಶಾಸಕರು ಮರ್ಯಾದೆಯಿಂದ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು. ಸೋಲಿಗೆ ಎಲ್ಲಿ ತಪ್ಪಾಗಿದೆ ಎಂದು ಎಲ್ಲರೂ ಕುಳಿತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ದಾವಣಗೆರೆ(ಜೂ.11): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲೀಡ್ ಕೊಡಿಸದ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಥವಾ ಅಂತಹ ಸಚಿವರನ್ನು ವಜಾಗೊಳಿಸಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಅವರು ಕಾಂಗ್ರೆಸ್‌ಗೆ ಒತ್ತಾಯಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಡಿಸದ ಸಚಿವರ ರಾಜೀನಾಮೆ ಪಡೆದು ಹೊಸಬರಿಗೆ ಅವಕಾಶ ಕಲ್ಪಿಸಲಿ. ನಮಗೆ ಪಕ್ಷ ಮುಖ್ಯವೇ ಹೊರತು, ವ್ಯಕ್ತಿಗಳಲ್ಲ ಎಂದು ವರಿಷ್ಠರನ್ನು ಆಗ್ರಹಿಸಿದರು.
ಡಿಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಅಂಡ್ ಟೀಂ ಕಾರಣ: ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ
ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಲೀಡ್ ಕೊಡಿಸದ ಸಚಿವರನ್ನು ವಜಾ ಮಾಡಿ. ಯಾರು ಲೀಡ್ ಕೊಡಿಸಿದ್ದಾರೋ ಅಂಥವರಿಗೆ ಸಚಿವ ಸ್ಥಾನ ನೀಡಬೇಕು. ಇಷ್ಟೊಂದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಸಾವಿರಾರು ಕೋಟಿ ರು. ಖರ್ಚು ಮಾಡಿದರೂ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಪಕ್ಷ ವಿಫಲವಾಗಿದೆ. ಸಚಿವರು ತಮ್ಮ ಕ್ಷೇತ್ರಗಳಲ್ಲೇ ಪಕ್ಷಕ್ಕೆ ಮತ ಕೊಡಿಸಿಲ್ಲ ಎಂದ ಅವರು, ದಾವಣಗೆರೆಯಲ್ಲಿ ಸಚಿವರು ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸದಿದ್ದರೂ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಂಪುಟ ಪುನಾರಚನೆ ಆಗಲಿ: ರಾಜ್ಯ ಸಂಪುಟ ಪುನಾರಚನೆ ಆಗಬೇಕು. ಲೀಡ್ ಕೊಡಿಸದ ಸಚಿವರ ಜಾಗಕ್ಕೆ ಹೊಸಬರಿಗೆ ಅವಕಾಶ ಮಾಡಿಕೊಟ್ಟರಷ್ಟೇ ಪಕ್ಷ ಬೆಳೆಯುತ್ತದೆ. ಲೀಡ್ ಕೊಡಿಸದ ಸಚಿವರು ತಮ್ಮ ವೈಫಲ್ಯ ಒಪ್ಪಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಅವರಿಂದ ರಾಜೀನಾಮೆ ಪಡೆಯಬೇಕು. ಒಂದು ವೇಳೆ ಅಂಥ ಸಚಿವರಿಂದ ರಾಜೀನಾಮೆ ಪಡೆಯದಿದ್ದರೆ ಮತದಾರರಿಗೆ ತಪ್ಪು ಸಂದೇಶ ಹೋಗುತ್ತದೆ. ಇಂಥವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳದಿದ್ದರೆ ಯಾರು ಏನೂ ಮಾಡುವುದಿಲ್ಲವೆಂಬ ಮನೋಭಾವ ಮೂಡುತ್ತದೆ. ನಾನು ಬೇರೆಯವರ ಬಗ್ಗೆ ಮಾತನಾಡುತ್ತಿಲ್ಲ. ಗ್ಯಾರಂಟಿ ಕೊಟ್ಟರೂ ಪಕ್ಷದ ಹಿನ್ನಡೆಗೆ ಕಾರಣರಾದ ಸಚಿವರು ರಾಜೀನಾಮೆ ನೀಡಬೇಕೆಂದು ಹೇಳುತ್ತಿದ್ದೇನೆ ಅಷ್ಟೆ ಎಂದು ಹೇಳಿದರು..
ಬಾಯ್ಕುಚ್ಚಿಕೊಂಡಿರಿ
ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಯಾರೂ ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡಬಾರದು. ಶಾಸಕರು ಮರ್ಯಾದೆಯಿಂದ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು. ಸೋಲಿಗೆ ಎಲ್ಲಿ ತಪ್ಪಾಗಿದೆ ಎಂದು ಎಲ್ಲರೂ ಕುಳಿತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.