ಡಿಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಅಂಡ್ ಟೀಂ ಕಾರಣ: ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಸೋಲಲು ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ಕಾರಣ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದರು.
ತುಮಕೂರು (ಜೂ.8): ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಸೋಲಲು ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ಕಾರಣ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರಿಯಬೇಕು ಇದಕ್ಕಾಗಿ ಒಂದು ತಂಡ ಕೆಲಸ ಮಾಡುತ್ತಿದೆ. ಆ ಅಹಿಂದ ಟೀಂ ಮತ್ತು ಸಿದ್ದರಾಮಯ್ಯ ಸೇರಿ ಡಿಕೆ ಸುರೇಶ್ ಅವರನ್ನ ಸೋಲಿಸಿದ್ದಾರೆ ಎಂದು ಆರೋಪಿಸಿದರು.
'ಡಿಕೆ ಸುರೇಶ್‌ರಂತೆ ಯಾರೂ ಕೆಲಸ ಮಾಡಿಲ್ಲ; ಜನ ಯಾಕೆ ಕಠಿಣ ನಿಲುವು ತಗೊಂಡ್ರೋ ಗೊತ್ತಿಲ್ಲ': ಎಸ್‌ಟಿಎಸ್ ಬೇಸರ
ಲೋಕಸಭಾ ಚುನಾವಣೆಗೆ ತಿಂಗಳ ಮೊದಲೇ ಹೇಳಿದ್ದೇನೆ, ಡಿಕೆ ಸುರೇಶರನ್ನ ಸೋಲಿಸಲು ಮೈತ್ರಿ ಪಕ್ಷ ಅಭ್ಯರ್ಥಿ ಬೇಕಾಗಿಲ್ಲ. ಸತೀಶ್ ಜಾರಕಿಹೊಳಿ, ಡಾ ಪರಮೇಶ್ವರ, ರಾಜಣ್ಣ, ಸಿದ್ದರಾಮಯ್ಯ ಇಷ್ಟು ಜನ ಸೇರಿ ಡಿಕೆ ಸುರೇಶ್ ಅವರನ್ನ ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸ್ತಾರೆ ಅಂತಾ. ಆದರೆ ಅದಕ್ಕಿಂತ ಹೆಚ್ಚಿನ ಮತಗಳಿಂದ ಸೋಲಿಸಿದ್ದಾರೆ. ಇದೀಗ ನಾನು ಹೇಳಿದ ಮಾತು ನಿಜವಾಗಿದೆ. ಇದು ಸಿದ್ದರಾಮಯ್ಯ ಅಂಡ್ ಟೀಂ ಸಂಚಿನ ಒಂದು ಭಾಗ. ಏಕೆಂದರೆ ಡಿಕೆ ಶಿವಕುಮಾರ ಮುಂದೆ ಮುಖ್ಯಮಂತ್ರಿ ಆಗಬಾರದು ಎಂಬ ಉದ್ದೇಶ ಇದರ ಹಿಂದೆ ಕೆಲಸ ಮಾಡಿದೆ. ಈ ಚುನಾವಣೆಯಲ್ಲಿ ಡಿಕೆ ಸುರೇಶ್‌ರನ್ನ ಸೋಲಿಸಿದರೆ ಡಿಕೆ ಶಿವಕುಮಾರ ಅವರ ನೈತಿಕವಾಗಿ ಕುಸಿಯುತ್ತಾರೆ ಅಂತಾ ಹೀಗೆ ಮಾಡಿದ್ದಾರೆ ಎಂದರು.
ಜೆಡಿಎಸ್ -ಬಿಜೆಪಿ ಮೈತ್ರಿಯಿಂದ ಸೋಲಾಯ್ತಾ ಡಿಕೆ ಸುರೇಶ್ ಹೇಳಿದ್ದೇನು?
ಮುಂದೆ ಡಿಕೆ ಶಿವಕುಮಾರ ಮುಖ್ಯಮಂತ್ರಿ ಆಗೊಲ್ಲ, ಈ ಸರ್ಕಾರನೂ ಉಳಿಯೊಲ್ಲ. ಇಲ್ಲಿಂದಲೇ ರಾಜಕೀಯ ಧ್ರುವೀಕರಣ ಪ್ರಾರಂಭ ಆಗುತ್ತೆ. ಸಿಎಂ ಸ್ಥಾನಕ್ಕಾಗಿ ಈಗಾಗಲೇ ಅಧಿಕಾರಕ್ಕೆ ಬಂದಾಗಿಂದ ಮುಸುಕಿನ ಗುದ್ದಾಟ ನಡೆದಿತ್ತು. ಇದೀಗ ಡಿಕೆ ಸುರೇಶ್ ಸೋಲು ಮೂಲಕ ಇಷ್ಟು ದಿನ ನಡೆದ ಒಳಜಗಳ ಬಹಿರಂಗವಾಗಿ ನಡೆಯಲಿದೆ. ಅದರ ಪ್ರಾರಂಭದ ಲಕ್ಷಣವೆಂಬಂತೆ ಈಗಾಗಲೇ ಬೆಳಗಾವಿ ಕಾಂಗ್ರೆಸ್ ನಾಯಕರಲ್ಲಿ ಕಿತ್ತಾಟ ಶುರುವಾಗಿದೆ. ಇಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಸೋಲಿನಿಂದ ಕೂಡ ಒಳಜಗಳ ಶುರುವಾಗಿ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಭವಿಷ್ಯ ನುಡಿದರು.