ಜೆಡಿಎಸ್‌ ಈಗ ಇದೆಯೇ? ಇದ್ದರೆ ಎಲ್ಲಿದೆ?: ಡಿಸಿಎಂ ಡಿಕೆಶಿ ವ್ಯಂಗ್ಯ

‘ರಾಜ್ಯದಲ್ಲಿ ಸುಮಾರು ಐದಾರು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ನೇರಾ-ನೇರ ಸ್ಪರ್ಧೆ ಇತ್ತು. ಆದರೆ ಈಗ ಜೆಡಿಎಸ್‌ ಪಕ್ಷ ಎಲ್ಲಿದೆ? ಅಸಲಿಗೆ ಜೆಡಿಎಸ್ ಪಕ್ಷ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಬೇಕಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

DCM DK Shivakumar Slams On JDS Party At Bengaluru gvd

ಬೆಂಗಳೂರು (ಮಾ.16): ‘ರಾಜ್ಯದಲ್ಲಿ ಸುಮಾರು ಐದಾರು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ನೇರಾ-ನೇರ ಸ್ಪರ್ಧೆ ಇತ್ತು. ಆದರೆ ಈಗ ಜೆಡಿಎಸ್‌ ಪಕ್ಷ ಎಲ್ಲಿದೆ? ಅಸಲಿಗೆ ಜೆಡಿಎಸ್ ಪಕ್ಷ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಬೇಕಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ‘ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕುಟುಂಬದವರೇ ಬಿಜೆಪಿ ಸೇರುತ್ತಿದ್ದಾರೆ. ಹೀಗಾಗಿ ಜೆಡಿಎಸ್‌ ನೆಚ್ಚಿಕೊಂಡಿದ್ದ ಜೆಡಿಎಸ್‌ನವರು ಭವಿಷ್ಯ ಹುಡುಕುತ್ತಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಸಾಕಷ್ಟು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದು, ಸ್ಥಳೀಯ ಮಟ್ಟದಲ್ಲೇ ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಸೂಚಿಸಲಾಗಿದೆ’ ಎಂದೂ ಹೇಳಿದರು.

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಬೆಳಗಾವಿ ಸ್ಪರ್ಧೆಗೆ ಒಪ್ಪಿಗೆ: ಜಗದೀಶ್‌ ಶೆಟ್ಟರ್‌

ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರ, ಜೆಡಿಎಸ್‌ ಕಾರ್ಯಕರ್ತರೂ ಮುಂದಿನ ರಾಜಕೀಯ ಭವಿಷ್ಯವನ್ನು ನೋಡುತ್ತಾರಲ್ಲವೇ? ನಮ್ಮ ಗತಿ ಏನು ಎಂದು ದಳದ ಕಾರ್ಯಕರ್ತರು ನಮ್ಮ ಪಕ್ಷದ ನಾಯಕರ ಸಂಪರ್ಕ ಮಾಡುತ್ತಿದ್ದಾರೆ. ನಾನು ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಾಯಕ. ನಮ್ಮ ಚುನಾವಣಾ ಅಭ್ಯರ್ಥಿಯ ಘೋಷಣೆಯೂ ಆಗಿದೆ. ನಾವು ಸಹ ತಯಾರಿ ಮಾಡಿಕೊಳ್ಳಬೇಕಲ್ಲವೇ? ಎಂದು ಪರೋಕ್ಷವಾಗಿ ಬಿಜೆಪಿ-ಜೆಡಿಎಸ್‌ ನಾಯಕರನ್ನು ಸೆಳೆಯುವ ಸುಳಿವು ನೀಡಿದರು.

ಜೆಡಿಎಸ್‌ ಪಕ್ಷ ಇದೆಯೇ?: ಡಿ.ಕೆ.ಸುರೇಶ್ ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದಿರುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ‘ಮೊದಲು ಅವರ ಪಕ್ಷದ ಪರಿಸ್ಥಿತಿ ಬಗ್ಗೆ ಮಾತನಾಡಲಿ. ಜೆಡಿಎಸ್‌ ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ಮೊದಲು ಹೇಳಲಿ. ಆನಂತರ ಪ್ರಬಲ ಅಭ್ಯರ್ಥಿ ಬಗ್ಗೆ ಮಾತನಾಡಲಿ’ ಎಂದು ತಿರುಗೇಟು ನೀಡಿದರು. ಬೆಂಗಳೂರು ಅರಮನೆ ಜಾಗದ ವಿವಾದದ ಬಗ್ಗೆ ಕೇಳಿದಾಗ, ಜಾಗ ವಿವಾದದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿತ್ತು. ಇತ್ತೀಚಿನ ಬೆಳವಣಿಗೆಯ ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಇಲ್ಲ. 

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಆಗಿದ್ದ ವೇಳೆ ತೀರ್ಮಾನವಾಗಿದ್ದ ವಿಚಾರವಿದು. ನ್ಯಾಯಲಯದ ಆದೇಶದಂತೆ ನಾವು ನಡೆದುಕೊಳ್ಳಬೇಕು. ಅಧಿಕಾರಿಗಳು ಖುದ್ದಾಗಿ ನ್ಯಾಯಲಯಕ್ಕೆ ಹಾಜರಾಗಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಮಾತನಾಡುತ್ತೇನೆ ಎಂದಷ್ಟೇ ಹೇಳಿದರು. ಸಿಎಎಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುತ್ತೀರಾ ಎಂಬ ಪ್ರಶ್ನೆಗೆ, ಇದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಮತ್ತು ಇತರೇ ನಾಯಕರ ಬಳಿ ಚರ್ಚೆ ಮಾಡಿದ ನಂತರ ಮಾತನಾಡುತ್ತೇನೆ ಎಂದರು.

ಒಮ್ಮತದಿಂದ ಅಭ್ಯರ್ಥಿ ಪಟ್ಟಿ ನಿರ್ಧಾರ: ಕಾಂಗ್ರೆಸ್ ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ವಿಚಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದಿಂದ ಅಭ್ಯರ್ಥಿ ಪಟ್ಟಿ ನಿರ್ಧಾರವಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಚುನಾವಣೆ ಸಮಿತಿ (ಸಿಇಸಿ) ಸಭೆ ಸೋಮವಾರಕ್ಕೆ ಮುಂದೂಡಿಕೆಯಾಗಿರುವ ಬಗ್ಗೆ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿದ್ದಾರೆ. ಅವರು ವೈದ್ಯರಿಂದ ಸಮಯ ಪಡೆದಿದ್ದ ಕಾರಣ ಇಲ್ಲಿಗೆ ಆಗಮಿಸಿದ್ದಾರೆ ಎಂದರು.

ಬಿಎಸ್‌ವೈ ಸಿಎಂ ಆಗಲು ಸಂಸದ ಸಿದ್ದೇಶಣ್ಣ ಕಾರಣ: ಆರ್.ಅಶೋಕ

ಬಿಎಸ್‌ವೈ ಪೋಕ್ಸೋ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ: ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ತಡವಾಗಿ ಸುದ್ದಿ ತಿಳಿಯಿತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಸರ್ಕಾರದಲ್ಲಿ ಸಮರ್ಥ ಗೃಹಮಂತ್ರಿಯಾಗಿ ಪರಮೇಶ್ವರ್ ಅವರು ಇದ್ದಾರೆ. ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿದರು.

Latest Videos
Follow Us:
Download App:
  • android
  • ios