'ಸಿಎಂ ಮೇಲೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ..' ಡಿಸಿಎಂ ಡಿಕೆ ಶಿವಕುಮಾರ್!
ನಮ್ಮ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯಪಾಲರು ಮುಡಾ ಕೇಸ್‌ನಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲಿಯೇ ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಸೆ.24): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ 14 ಸೈಟ್ ಪಡೆದುಕೊಂಡ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ರಾಜ್ಯಪಾಲರ ನಿರ್ಧಾರದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ಸಿಎಂ ಸಿದ್ದರಾಮಯ್ಯಗೆ ನಿರಾಸೆಯಾಗಿದೆ. ಮಂಗಳವಾರ ಪ್ರಕರಣದ ಕುರಿತಾಗಿ ತೀರ್ಪು ನೀಡಿದ ಜಸ್ಟೀಸ್ ನಾಗಪ್ರಸನ್ನ ಪೀಠ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಹಾಗೂ ಸಚಿವರು ಸಿಎಂ ಬೆನ್ನ ಹಿಂದೆ ನಿಂತಿದ್ದಾರೆ. ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಮೇಲೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎನ್ನುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ಕಾರ್ಯ್ರಕಮ ಮುಗಿಸಿ ನಾನು ಈಗ ಹೊರಗಡೆ ಬರುತ್ತಿದ್ದೇನೆ. ಕಾರ್ಯಕ್ರಮದಲ್ಲಿ ನಾನು ಸಿಎಂ ಇಬ್ಬರು ಭಾಗಿಯಾಗಿದ್ದೆವು. ಕಾರ್ಯಕ್ರಮ ಕಂಪ್ಲೀಟ್ ಮಾಡಿ ಹೋಗಿ ಅಂತ ಸಿಎಂ ಹೇಳಿದ್ದರು. ಅದರ ಪ್ರಕಾರ ಕಾರ್ಯಕ್ರಮ ಮುಗಿಯೋವರೆಗೂ ಇಲ್ಲಿಯೇ ಇದ್ದೆ. ತೀರ್ಪಿನಲ್ಲಿ ಏನಿದೆ ಅಂತ ಮೊದಲು ತಿಳಿದುಕೊಳ್ಳಬೇಕು. ಒಬ್ಬೊಬ್ಬರು ಒಂದೊಂದು ತರ ಹೇಳೋದನ್ನು ಕೇಳಲು ನಾನು ತಯಾರಿಲ್ಲ. ನನಗೂ ಜವಾಬ್ದಾರಿ ಇದೆ. ನಮ್ಮ ಮುಖ್ಯಮಂತ್ರಿ ಮೇಲೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ನನ್ನ ಮೇಲೆ ಯಾವ ರೀತಿ ಬಿಜೆಪಿ ಅವರು ಷಡ್ಯಂತ್ರ ಮಾಡಿ ಜೈಲಿಗೆ ಕಳಿಸಿದ್ದರು ಅನ್ನೋದು ಎಲ್ಲರಿಗೂ ಗೊತ್ತಿದೆ. ಏನೋ ಭಗವಂತನ ಕೃಪೆಯಿಂದ ನಾನು ಹೊರಗಡೆ ಬಂದೆ. ಜೈಲಿಗೆ ಹೋದ ಕೇಸ್ ಕೂಡ ವಜಾ ಆಗಿದೆ. ಅದೇ ರೀತಿ ಇವತ್ತು ಸಿಎಂ ಹಾಗೂ ಅವರ ಕುಟುಂಬದ ಮೇಲೆ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಯಾವುದೇ ತನಿಖೆಗೆ ಆದೇಶ ಮಾಡಿದ್ದರೂ ಅವರು ಕ್ಲಿನ್ ಆಗಿ ಬರುತ್ತಾರೆ. ಅವರು ಯಾವುದೇ ತಪ್ಪು ಮಾಡಿಲ್ಲ. ಮುಖ್ಯಮಂತ್ರಿಗಳ ಬದ್ದತೆಯ ಬಗ್ಗೆ ನಮಗೆ ನಂಬಿಕೆ ಇದೆ. ನಾವು ಅವರ ಜೊತೆ ಇದ್ದೇವೆ. ಅವರು ರಾಜ್ಯಕ್ಕೆ ನೀಡಿದ ಕಾರ್ಯಕ್ರಮಗಳ ಬಗ್ಗೆ ನಮಗೆ ಗೊತ್ತಿದೆ. ಅವರು ಕೊಟ್ಟ ಕೊಡುಗೆ ಬಿಜೆಪಿಯವರ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಏನೋ ಹಿನ್ನಡೆ ಆಗಿದೆ. ನಾನು ಏನು ವಿಚಾರ ಅಂತ ನೋಡುತ್ತೇನೆ ಎಂದಿದ್ದಾರೆ.
ಸತ್ಯಮೇವ ಜಯತೇ..ಸಂವಿಧಾನದ ಬಗ್ಗೆ ಗೌರವ ಕೊಟ್ಟು ರಾಜೀನಾಮೆ ನೀಡಿ: ಬಿಜೆಪಿ ಆಗ್ರಹ!
ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿರುವ ಬಗ್ಗೆ ಮಾತನಾಡಿದ ಡಿಸಿಎಂ, ರಾಜೀನಾಮೆಯ ಪ್ರಶ್ನೆ ಇಲ್ಲ. ಸಿಎಂ ಏನು ತಪ್ಪು ಮಾಡಿಲ್ಲ. ಅವರು ಯಾವುದೇ ಸ್ಕ್ಯಾಮ್ ನಲ್ಲಿ ಭಾಗಿಯಾಗಿಲ್ಲ. ನಾವು ಅವರ ಕಡೆ ಇದ್ದೇವೆ. ಅವರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
Breaking: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಕ್; ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!