ಸತ್ಯಮೇವ ಜಯತೇ..ಸಂವಿಧಾನದ ಬಗ್ಗೆ ಗೌರವ ಕೊಟ್ಟು ರಾಜೀನಾಮೆ ನೀಡಿ: ಬಿಜೆಪಿ ಆಗ್ರಹ!
ಮುಡಾ ಕೇಸ್‌ನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೊತ್ ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿರುವ ಸಿದ್ದರಾಮಯ್ಯ, ತೀರ್ಪಿನ ವಿವರಗಳ ಅಧ್ಯಯನ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಸೆ.24): ಮುಡಾ ಕೇಸ್‌ನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೊತ್ ತಮ್ಮ ವಿರುದ್ಧ ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಹೈಕೋರ್ಟ್‌ನ ಜಸ್ಟೀಸ್ ನಾಗಪ್ರಸನ್ನ ಪೀಠ ವಜಾ ಮಾಡಿದೆ. ಇದರ ಬೆನ್ನಲ್ಲಿಯೇ ಕೆಳಹಂತದ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರ ಮುಡಾ ಕೇಸ್ ವಿಚಾರದ ಕಾನೂನು ಪ್ರಕ್ರಯೆ ಸರಾಗವಾಗಿ ನಡೆಯಲಿದೆ. ಇದರ ನಡುವೆ ಹೈಕೋರ್ಟ್ ನೀಡಿರುವ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧರಾಮಯ್ಯ ನಿರ್ಧಾರ ಮಾಡಿದ್ದು, ತೀರ್ಪಿನ ವಿವರ ಸಂಪೂರ್ಣವಾಗಿ ಬಂದ ಬಳಿಕ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದರ ನಡುವೆ ರಾಜ್ಯ ಬಿಜೆಪಿ ಸಿಎಂ ಸಿದ್ಧರಾಮಯ್ಯ ಅವರ ನೈತಿಕತೆಯ ಬಗ್ಗೆಯೇ ಪ್ರಶ್ನೆ ಎತ್ತಿದ್ದು, ಸಂವಿಧಾನದ ಬಗ್ಗೆ ಗೌರವ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬನ್ನಿ ಎಂದು ಆಗ್ರಹಿಸಿ ಟ್ವೀಟ್ ಮಾಡಿದೆ.
Breaking: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಕ್; ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!
'ಜಯತೆ, ಜಯತೆ, ಸತ್ಯಮೇವ ಜಯತೆ!! ದಲಿತರ ಭೂಮಿಯನ್ನು ಅಕ್ರಮವಾಗಿ ಕಬಳಿಸಿ, ಬಡವರ ಪಾಲಿಗೆ ಸೇರಬೇಕಾಗಿದ್ದ ಸೈಟುಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದ ಸಿಎಂ ಸಿದ್ಧರಾಮಯ್ಯ ಅವರ ವಿರುದ್ದ ಹೈಕೋರ್ಟ್ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಘನತೆವೆತ್ತ ರಾಜ್ಯಪಾಲರ ಮೇಲೆ ಕೀಳು ಮಟ್ಟದ ರಾಜಕೀಯಕ್ಕೆ ಕಾಂಗ್ರೆಸ್ ನ ನಾಯಕರು ಮುಂದಾಗಿದ್ದರು. ಆದರೆ ನ್ಯಾಯಾಲಯ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದು, ಭ್ರಷ್ಟರಿಗೆ ಭಾರತದಲ್ಲಿ ಜಾಗವಿಲ್ಲ ಎಂಬುದನ್ನು ಪುನರುಚ್ಛರಿಸಿದೆ. ಸಿದ್ದರಾಮಯ್ಯ ಅವರಿಗೆ ಈ ನೆಲದ ಕಾನೂನಿನ ಬಗ್ಗೆ, ಸಂವಿಧಾನದ ಬಗ್ಗೆ , ನ್ಯಾಯಾಲಯದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಭಂಡತನವನ್ನು ಮುಂದುವರೆಸದೆ, ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಬಿಜೆಪಿ ಹೇಳಿದೆ.
ಮುಡಾ ಹಗರಣ: ನಮ್ಮ ತಂದೆ ತಪ್ಪು ಮಾಡಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ: ಡಾ ಯತೀಂದ್ರ ಸಿದ್ದರಾಮಯ್ಯ
'ಬಡವರ ನಿವೇಶನ ಕಬಳಿಸಿ, ಲಜ್ಜೆಬಿಟ್ಟು ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಿರುವ ಸಿದ್ದರಾಮಯ್ಯ,ನವರೇ ಒಂದು ಕ್ಷಣವೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಇಂದು ತಾವು ಉಳಿಸಿಕೊಂಡಿಲ್ಲ. ರಾಜೀನಾಮೆ ನೀಡಿ, ತನಿಖೆ ಎದುರಿಸಿ. ನೀವು ಕಟ್ಟಿರುವ ಸುಳ್ಳಿನ ಸಾಮ್ರಾಜ್ಯ ಸಂಪೂರ್ಣ ಕುಸಿದಿದೆ ಇನ್ನು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ..' ಎಂದು ಬಿಜೆಪಿ ಕರ್ನಾಟಕ ಮತ್ತೊಂದು ಟ್ವೀಟ್ ಮಾಡಿದೆ.