ಇದು ಸತ್ಯ Vs ಸುಳ್ಳಿನ ನಡುವಿನ ಚುನಾವಣೆ: ಮುಖಾಮುಖಿ ಸಂದರ್ಶನದಲ್ಲಿ ಡಿಕೆಶಿ ಹೇಳಿದಿಷ್ಟು...
ಚುನಾವಣೆ ಮೇಲೆ ಈ ಹಗರಣ ಪ್ರಭಾವ ಬೀರುವುದೇ? ಗ್ಯಾರಂಟಿ ಅಲೆ ಹಾಗೂ ಮೋದಿ ಅಲೆಗಳ ಮೇಲಾಟ ಹೇಗೆ ನಡೆದಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
ಎಸ್. ಗಿರೀಶ್ ಬಾಬು
ಬೆಂಗಳೂರು (ಮೇ.05): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಅಂತಿಮ ಚರಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಗ್ಯಾರಂಟಿ ಅಲೆ ನಂಬಿ ಕಾಂಗ್ರೆಸ್ ಹಾಗೂ ಮೋದಿ ಅಲೆ ನಂಬಿ ಬಿಜೆಪಿ ತೀವ್ರ ಹಣಾಹಣಿ ನಡೆಸಿರುವ ಈ ಹಂತದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‌ಡ್ರೈವ್ ಹಗರಣ ಬಹಿರಂಗಗೊಂಡು ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಈ ಹಗರಣದೊಂದಿಗೆ ನೇರಾನೇರ ಸಂಬಂಧವಿಲ್ಲದಿದ್ದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿಗೆ ಇಳಿದಿದ್ದಾರೆ. ಈ ಹಿಕ್ಮತ್ತಿಗೆ ಒಕ್ಕಲಿಗ ನಾಯಕತ್ವದ ಜಟಾಪಟಿಯೂ ಮುಖ್ಯ ಕಾರಣ ಎಂಬಂತೆ ಬಿಂಬಿಸುತ್ತಿದ್ದಾರೆ. ತಮ್ಮ ವಿರುದ್ಧ ಮಾಡಲಾಗುತ್ತಿರುವ ಈ ಆರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆಯೇನು? ಚುನಾವಣೆ ಮೇಲೆ ಈ ಹಗರಣ ಪ್ರಭಾವ ಬೀರುವುದೇ? ಗ್ಯಾರಂಟಿ ಅಲೆ ಹಾಗೂ ಮೋದಿ ಅಲೆಗಳ ಮೇಲಾಟ ಹೇಗೆ ನಡೆದಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
* ಎರಡನೇ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹೇಗಿದೆ ಜನರ ಪ್ರತಿಕ್ರಿಯೆ?
ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ವೇಳೆ ದೊರೆತ ಪ್ರತಿಕ್ರಿಯೆಗಿಂತ ಈಗ ಜನರು ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿದೆ ಎಂಬ ಭಾವನೆ ಜನರಿಗೆ ಬಂದಿರುವುದು ಕಾರಣ. ಹೀಗಾಗಿ ನಮಗೆ ಆತ್ಮವಿಶ್ವಾಸ ಮೂಡಿದೆ. ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಮತ್ತು ನಾವು ಗ್ಯಾರಂಟಿ ಭರವಸೆ ನೀಡಿದ್ದೆವು. ಅದನ್ನು ಜಾರಿಗೊಳಿಸಿದ್ದು ಜನರ ಮೆಚ್ಚುಗೆ ಗಳಿಸಿದೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಭರವಸೆಗಳನ್ನು ನೀಡಿದ್ದಾರೆ. ಇದೇ ವೇಳೆ ಮೋದಿ ಅವರು ಕಳೆದ ಚುನಾವಣೆ ನೀಡಿದ್ದ ಭರವಸೆಗಳು ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ಇದು ಸತ್ಯ ಹಾಗೂ ಸುಳ್ಳಿನ ನಡುವೆ ನಡೆದಿರುವ ಚುನಾವಣೆ. ನಮ್ಮ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಬಿಜೆಪಿ ಕೇವಲ ಭರವಸೆ ನೀಡುವ ಪಕ್ಷ. ನಾವು ನೀಡಿದ ಭರವಸೆಯನ್ನು ಜಾರಿಗೆ ತರುವವರು. ಈ ವ್ಯತ್ಯಾಸ ಜನರಿಗೆ ಅರ್ಥವಾಗಿದೆ.
Lok Sabha Elections 2024: ಕಾಂಗ್ರೆಸ್ ಹೇಡಿ ಪಕ್ಷ: ಪ್ರಧಾನಿ ಮೋದಿ ಹರಿತ ವಾಗ್ದಾಳಿ
* ಪ್ರಜ್ವಲ್ ಪ್ರಕರಣ ಬಳಸಿಕೊಂಡು ನೀವು ಒಕ್ಕಲಿಗ ನಾಯಕತ್ವ ಪಡೆಯುವ ಉದ್ದೇಶ ಹೊಂದಿದ್ದೀರಿ. ಆದರೆ, ಅದು ಭ್ರಮೆ ಅಂತಾರೆ ಕುಮಾರಸ್ವಾಮಿ?
ನಾನು ಯಾವ ಒಕ್ಕಲಿಗ ನಾಯಕನೂ ನಾನು ಆಗಬೇಕಿಲ್ಲ. ಯಾವ ಒಕ್ಕಲಿಗ ನಾಯಕನ ವಿರುದ್ಧವೂ ನಾನು ಹೋಗಿಲ್ಲ. ಇಂತಹ ಚಿಲ್ಲರೆ ರಾಜಕೀಯ ಮಾಡಿ ನಾಯಕನಾಗುವ ಅವಶ್ಯಕತೆ ನನಗೆ ಇಲ್ಲ. ಇಷ್ಟಕ್ಕೂ ಕುಮಾರಸ್ವಾಮಿಯನ್ನು ಚುನಾವಣೆಯಲ್ಲೇ ಸೋಲಿಸಿದ್ದೇನೆ. ದೇವೇಗೌಡರನ್ನು ಕನಕಪುರದಲ್ಲಿ ಸೋಲಿಸಿದ್ದೇವೆ. ಇದಕ್ಕಿಂತ ಇನ್ನೇನ್ರೀ ಬೇಕು?
* ಅಂದರೆ, ಈ ಚುನಾವಣೆಯಲ್ಲಿ ಗ್ಯಾರಂಟಿ ವರ್ಕ್ ಆಗುತ್ತೆ ಅನಿಸುತ್ತಾ?
ಖಂಡಿತಾ ಗ್ಯಾರಂಟಿ ವರ್ಕ್ ಆಗುತ್ತೆ. ಜನಕ್ಕೆ ಉಪಕಾರ ಸ್ಮರಣೆಯಿದೆ. ನಾವು ಗ್ಯಾರಂಟಿ ನೀಡಿದ್ದೇವೆ. ಹೀಗಾಗಿ ಜನ ನಮಗೆ ತುಂಬಾ ಉತ್ತಮವಾಗಿ ರೆಸ್ಪಾನ್ಸ್ ಮಾಡುತ್ತಿದ್ದಾರೆ.
* ಗ್ಯಾರಂಟಿ ಚೆನ್ನಾಗಿ ಆಗಿರಬಹುದು. ಆದರೆ, ಈ ಚುನಾವಣೆ ದೇಶಕ್ಕೆ ಸಂಬಂಧಿಸಿದ್ದು ಅಂತಾರಲ್ಲ ಬಿಜೆಪಿಯವರು?
ದೇಶ ಅಂದರೆ ಜನ ಅಲ್ವ? ಜನಕ್ಕೆ ಏನು ಸಿಗತ್ತೆ ಅನ್ನೋದು ಮುಖ್ಯವಾಗಲ್ವ. ಮೊದಲು ಬದುಕು ಮುಖ್ಯ. ಜನರಿಗೆ ಆರ್ಥಿಕ ಶಕ್ತಿ ಬಂದರೆ ತಾನೇ ದೇಶಕ್ಕೆ ಒಳ್ಳೆಯದು ಆಗೋದು. ಊಟ ಮಾಡಿದ ನಂತರ ತಾನೇ ತಲೆ ಓಡೋದು, ಶಕ್ತಿ ಬರೋದು. ಮೊದಲು ಹೊಟ್ಟೆಗೆ ಹಿಟ್ಟು, ಜೋಳ, ರೊಟ್ಟಿ ಕೊಡಬೇಕು. ಆದಾದ ಮೇಲೆ ತಾನೇ ನನಗೆ ಮಾತನಾಡಲು ಶಕ್ತಿ ಬರೋದು. ಆ ಶಕ್ತಿಯೇ ಇರದಿದ್ದರೆ ಹೇಗೆ? ಜನ ಮುಖ್ಯ ಅಂತಾನೇ ಅಲ್ವ ಈಗ ಬಿಜೆಪಿಯವರು ಕೂಡ ಮೋದಿ ಗ್ಯಾರಂಟಿ ಅಂತ ಶುರು ಮಾಡಿರೋದು
* ಬಿಜೆಪಿ ಗೆದ್ದರೆ ಮೋದಿ ಪ್ರಧಾನಿ, ಕಾಂಗ್ರೆಸ್ ಗೆದ್ದರೆ ಯಾರು ಎಂದು ಪ್ರಶ್ನಿಸುತ್ತಾರಲ್ಲ ಬಿಜೆಪಿಯವರು?
ಯುಪಿಎ ಅಧಿಕಾರಕ್ಕೆ ಬಂದಾಗ ಯಾವ ನಾಯಕತ್ವ ಇತ್ತು? ನೋಡಿ, ನಮ್ಮ ಪಕ್ಷದ್ದು ಕಲೆಕ್ಟಿವ್ ಲೀಡರ್ಶಿಪ್. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಖರ್ಗೆ ಅವರ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಮುಂದುವರೆದಿದೆ. ಈ ಹಿಂದೆ ಸೋನಿಯಾ ಗಾಂಧಿ ಅವರಿಗೆ ಎಲ್ಲರೂ ನಾಯಕತ್ವ ಕೊಟ್ಟಿದ್ದರು. ಆದರೆ, ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿ, ಮನಮೋಹನ್‌ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಹೀಗೆ ಎಲ್ಲವೂ ಕೂಡಿ ಬರಬೇಕು. ಇಷ್ಟಕ್ಕೂ ನಾಯಕತ್ವವನ್ನು ಕಾಂಗ್ರೆಸ್ ಮಾತ್ರ ತೀರ್ಮಾನಿಸುವುದಿಲ್ಲ. ಇದು ಇಂಡಿಯಾ ಒಕ್ಕೂಟದ ತೀರ್ಮಾನವಾಗುತ್ತದೆ.
* ಮೊದಲ ಹಂತದ ಚುನಾವಣೆ ನಂತರ ಬಿಜೆಪಿ ಸ್ಟ್ರಾಟಜಿ ಬದಲಾದಂತಿದೆ. ಸಂಪೂರ್ಣವಾಗಿ ಕರ್ನಾಟಕ ಕೇಂದ್ರೀಕರಿಸಿ ವಾಗ್ದಾಳಿ ನಡೆದಿದೆ?
ದಕ್ಷಿಣ ಭಾರತದಲ್ಲಿ ಬಿಜೆಪಿಯವರಿಗೆ ಎಲ್ಲಿಯೂ ಒಪನಿಂಗ್ ಇಲ್ಲ. ಹೀಗಾಗಿ ತಮ್ಮ ಸೀಟು ಎಷ್ಟು ಹೆಚ್ಚು ಮಾಡಿಕೊಳ್ಳಬಹುದು ಅಂತ ಅವರು ನೋಡುತ್ತಿದ್ದಾರೆ.
* ಹಿಂದುಳಿದವರ ಮೀಸಲು ಕಿತ್ತು ಮುಸ್ಲಿಮರಿಗೆ ನೀಡಲು ಕರ್ನಾಟಕ ಕಾಂಗ್ರೆಸ್ ಫತ್ವಾ ಹೊರಡಿಸಿದೆ ಅಂತಾರೆ ಪ್ರಧಾನಿ ಮೋದಿ
ಅವೆಲ್ಲ ಸುಳ್ಳು.
* ಧರ್ಮಾಧಾರಿತ ಮೀಸಲಾತಿ, ಆಸ್ತಿ ಮುಟ್ಟುಗೋಲು, ಮಾಂಗಲ್ಯದಂತಹ ವಿಚಾರ ಮುಂದಿಟ್ಟುಕೊಂಡು ವಾಗ್ದಾಳಿ ಆರಂಭವಾಗಿದೆ?
ಅವು ಸುಳ್ಳು. ನನಗೆ ಗೊತ್ತಿಲ್ಲದ ವಿಚಾರಗಳು
* ಮುಸ್ಲಿಮರಿಗೆ ಮೀಸಲು ನೀಡಲು ಕಾಂಗ್ರೆಸ್ ಸಂವಿಧಾನ ಬದಲಿಸುತ್ತೆ ಅಂತಾರಲ್ಲ?
ಇವೆಲ್ಲ ಚುನಾವಣೆ ವೇಳೆ ಪ್ರಚಾರಕ್ಕಾಗಿ ಮಾತನಾಡುವ ವಿಚಾರ. ಇದರಲ್ಲಿ ಯಾವುದೇ ತಿರುಳು ಇಲ್ಲ. ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಕಮ್ಯೂನಲೈಸ್ ಮಾಡಲು ನೋಡುತ್ತಾ ಇದ್ದಾರೆ.
* ಕಾಂಗ್ರೆಸ್‌ನವರು ಮಾಂಗಲ್ಯ ಕಿತ್ತುಕೊಳ್ಳುತ್ತಾರೆ ಅಂತಾರೆ
ಹಿಂದೆ ಚಿನ್ನದ ಬೆಲೆ 2400 ರು. ಪ್ರತಿ ಗ್ರಾಂಗೆ ಇತ್ತು. ಅದು ಈಗ ಪ್ರತಿ ಗ್ರಾಂಗೆ 7800 ರು. ಆಗಿದೆ. ತನ್ಮೂಲಕ ಹೆಂಗಸರು ಮಾಂಗಲ್ಯಕ್ಕೆ ಚಿನ್ನ ಕೊಳ್ಳುವ ಶಕ್ತಿಯನ್ನೇ ಬಿಜೆಪಿ ಕಿತ್ತುಕೊಂಡಿದೆ.
* ಪಾಕಿಸ್ತಾನ ಸಚಿವರು ರಾಹುಲ್ ಹೊಗಳಿದ್ದು ಬಿಜೆಪಿಗೆ ಪ್ರಚಾರದ ವಿಷಯವಾಯ್ತು?
ಜಗತ್ತಿನಲ್ಲಿ ಹಲವಾರು ನಾಯಕರು ಇದ್ದಾರೆ. ಈ ನಾಯಕರು ರಾಹುಲ್ ಅವರನ್ನು ಮೆಚ್ಚುತ್ತಾರೆ. ಹೀಗೆ ಮೆಚ್ಚುವುದರಲ್ಲಿ ತಪ್ಪೇನಿದೆ. ಇಷ್ಟಪಡಬೇಡಿ ಅಂತ ಹೇಳಲು ಆಗುತ್ತದೆಯೇ ಅಥವಾ ದ್ವೇಷ ಮಾಡಿ ಅಂತ ಹೇಳಲು ಆಗುತ್ತದೆಯೇ? ದ್ವೇಷ ನಮ್ಮ ಗುಣವಲ್ಲ. ಸಾಮರಸ್ಯ ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ನಾವು ಜಾಗತಿಕವಾಗಿ ಆರ್ಥಿಕ, ಕೃಷಿ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಯಾರನ್ನೂ ದ್ವೇಷಿಸುವುದಿಲ್ಲ.
* ಜೆಡಿಎಸ್ ಸಂಸದ ಪ್ರಜ್ವಲ್ ಪ್ರಕರಣ ರಾಷ್ಟ್ರ ಮಟ್ಟದಲ್ಲೂ ಭಾರಿ ಸದ್ದು ಮಾಡುತ್ತಿದೆ?
ಈ ಪ್ರಶ್ನೆಯನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಕೇಳಬೇಕು.
* ಪ್ರಜ್ವಲ್ ಪೆನ್‌ಡ್ರೈವ್ ಹಿಂದೆ ನೀವಿದ್ದಿರಿ ಅನ್ನೋ ಗುಮಾನಿಯನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರಲ್ಲ?
ಅಲ್ಲ... ನಾನು ಪೆನ್ ಡ್ರೈವ್ ಇಟ್ಕೊಂಡಿದ್ದೆ. ನನಗೆ ಗೊತ್ತಿತ್ತು. ನನ್ನ ಹತ್ತಿರ ಎಲ್ಲ ದಾಖಲೆ ಇತ್ತು ಅಂತ ಹೇಳುತ್ತಿರೋರು ಯಾರು. ಅವರ ಪಕ್ಷದ ನಾಯಕನೇ ಅಲ್ಲವೇ. ಹೀಗಿರುವಾಗ ಇದಕ್ಕೆ ನಾನು ಏಕೆ ಉತ್ತರ ನೀಡಬೇಕು?
* ಅದೇ ಪ್ರಶ್ನೆಯಾಗಿ ಕಾಡುತ್ತಿರುವುದು. ಕುಮಾರಸ್ವಾಮಿ ನಿಮ್ಮ ಮೇಲೆ ಏಕೆ ವಾಗ್ದಾಳಿ ಮಾಡುತ್ತಿದ್ದಾರೆ?
ಅವರಿಗೆ ನಮ್ಮ ಬಗ್ಗೆ ಭಯ. ಅವರ ಬಳಿ ಹುಳುಕುಗಳು ಇವೆಯಲ್ಲ. ಇನ್ನು ನಾವು ಎಲ್ಲವನ್ನು ನೇರವಾಗಿ ಎದುರಿಸುತ್ತೇವೆ. ಅವರ ಬ್ಲಾಕ್‌ಮೇಲ್‌ಗೆ ಹೆದರಿ ಓಡಿಹೋಗುವುದಿಲ್ಲವಲ್ಲ. ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್, ನೋ ಸ್ಟ್ರಾಂಗ್ ನೋ ಎನಿಮಿಸ್. ಕಣ್ಣ್ರೀ...
* ಘಟನೆಯ ಸಂತ್ರಸ್ತೆಯರನ್ನು ಸುಪರ್ದಿಯಲ್ಲಿಟ್ಟುಕೊಂಡಿದ್ದಾರೆ. ಪ್ರಜ್ವಲ್ ಚಾಲಕನನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಅಂತ ನಿಮ್ಮ ಮೇಲೆ ನೇರ ಆರೋಪ ಮಾಡಿದ್ದಾರೆ?
ಪಾಪ... ಅವರು ಏನನ್ನಾದರೂ ಮಾತನಾಡಲಿ ಬಿಡಿ.
* ನನ್ನ ಕೆಣಕಿದ್ದಾರೆ. ಸುಮ್ಮನೆ ಬಿಡಲ್ಲ ಅಂತಾರೆ ಕುಮಾರಸ್ವಾಮಿ?
ಕುಮಾರಸ್ವಾಮಿ ತಮ್ಮ ಬಳಿ ಏನೇನು ಇದೆಯೋ ಅದೆಲ್ಲವನ್ನು ಪ್ರಯೋಗ ಮಾಡಲಿ. ನಾನು ಎಲ್ಲವನ್ನೂ ನೋಡಿ ಆಗಿದೆ. ನನ್ನ ಹೆಂಡ್ತಿ ಮೇಲೆ ಕೇಸು. ನನ್ನ ತಮ್ಮನ ಮೇಲೆ ಕೇಸು. ನನ್ನ ಮೇಲೆ ಕೇಸು ಎಲ್ಲಾ ಆಗಿದೆ. ಆ ದೇವೇಗೌಡರ ಮನೆಯಲ್ಲಿ ದೊಡ್ಡಣ್ಣ ಒಬ್ಬ ಇದ್ದಾರೆ. ಬಾಲಕೃಷ್ಣ ಅಂತ. ಅವರ ಕಚೇರಿಯಿಂದಲೇ ನನ್ನ ಮೇಲೆ ಕೇಸು ಹಾಕಿಸಿದ್ದರು. ದೂರು ರಿಜಿಸ್ಟರ್ ಅವರ ಕಚೇರಿಯಿಂದಲೇ ಆಗಿತ್ತು. ನಾನು ಹೋಗಲಿ ಬಿಡು ಅಂತ ಅದನ್ನೆಲ್ಲ ಮರೆತಿದ್ದೆ. ಈಗ ಅದನ್ನೆಲ್ಲ ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಮಾಡಲಿ, ಅವರು ಏನ್ ಬೇಕಾದರೂ ಮಾಡಲಿ...
* ಪ್ರಜ್ವಲ್ ವಿಚಾರ ಚುನಾವಣೆ ಮೇಲೆ ಪರಿಣಾಮ ಬೀರತ್ತಾ?
ಅದನ್ನು ಬಿಜೆಪಿಯವರನ್ನು ಕೇಳಿ. ಇಷ್ಟಕ್ಕೂ ಬಿಜೆಪಿಯವರು ಪ್ರಜ್ವಲ್ ವಿಚಾರ ಏಕೆ ಮಾತನಾಡುತ್ತಿಲ್ಲ? ಅಮಿತ್ ಶಾ ಒಬ್ಬರು ಈ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಡಿಸ್‌ವೋನ್ ಮಾಡಿದ್ದು ಬಿಟ್ಟರೆ ಬೇರೆ ಯಾರೂ ಮಾತನಾಡಿಲ್ಲ. ಎಲ್ಲರೂ ಕೂಡ ಸಂತೋಷದಿಂದ ಇದ್ದಾರೆ. ಅಷ್ಟೇ ಅಲ್ಲ. ಕುಮಾರಸ್ವಾಮಿ ಅವರು ಕೂಡ ಮೊದಲು ಆ ವಿಚಾರದ ಬಗ್ಗೆ ಡಿಸ್ ವೋನ್ ಮಾಡಿದ್ದರು. ನಮಗೂ ರೇವಣ್ಣ ಕುಟುಂಬಕ್ಕೂ ಸಂಬಂಧ ಇಲ್ಲ.ನಮ್ಮ ಕುಟುಂಬ ಬೇರೆ ಹಾಗೂ ಅವರ ಕುಟುಂಬ ಬೇರೆ ಅಂತ ಹೇಳಿದ್ದರು. ಈಗ ಏಕೆ ಮತ್ತೆ ಮಾತನಾಡುತ್ತಿದ್ದಾರೆ.
* ಪ್ರಜ್ವಲ್ ಸಹೋದರ ಸೂರಜ್ ನಿಮ್ಮನ್ನು ಭೇಟಿ ಮಾಡಿದ್ದರಂತಲ್ಲ?
ಹೌದು, ಸೂರಜ್ ರೇವಣ್ಣ ನನ್ನ ಭೇಟಿ ಮಾಡಿದ್ದರು. ತಮ್ಮ ದುಃಖ ದುಮ್ಮಾನಗಳನ್ನು ನನ್ನ ಬಳಿ ಹೇಳಿಕೊಂಡಿದ್ದರು. ಅದೆನ್ನೆಲ್ಲ ನಾನು ಸಾರ್ವಜನಿಕವಾಗಿ ಏಕೆ ಹೇಳಲಿ
* ಕ್ಷೇತ್ರಕ್ಕೆ ಅನುದಾನ ಕೇಳಲು ಹೋಗಿದ್ದೆ, ಅಷ್ಟೆ ಅಂತ ಸೂರಜ್ ಈಗ ಸ್ಪಷ್ಟನೆ ನೀಡಿದ್ದಾರೆ?
ಪಾಪ.. ಅವರು ಹೇಳಬಹುದು. ನಾವು ಖಾಸಗಿಯಾಗಿ ಮಾತನಾಡಿದ್ದೇವೆ. ಅದನ್ನು ಇಲ್ಲಿ ಯಾಕೆ ಹೇಳಬೇಕು. ಅವು ಕುಟುಂಬದ ವಿಚಾರ.
* ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪರಿಣಾಮ ಏನಾಗಬಹುದು?
ಬಿಜೆಪಿ-ಜೆಡಿಎಸ್ ಎಷ್ಟು ದಿನ ಒಟ್ಟಿಗೆ ಇರುತ್ತಾರೋ ಅಷ್ಟು ನಮಗೆ ಒಳ್ಳೆಯದು.
* ಮೋದಿ ಅವರು ನಿಮ್ಮ ಸಹೋದರನ ವಿರುದ್ಧ ದೇಶ ವಿಭಜಕ ಅಂತ ದೂರಿದ್ದರು?
ರಾಜಕೀಯ ಕಾರಣಕ್ಕಾಗಿ ಮೋದಿ ಸುಳ್ಳು ಹೇಳುತ್ತಾರೆ. ನಾವು ಕಾಂಗ್ರೆಸ್‌ನವರು ದೇಶ ವಿಭಜನೆ ಬಗ್ಗೆ ಮಾತನಾಡೋದಿಲ್ಲ. ಒಬ್ಬ ಸಂಸದರಾಗಿ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಸುರೇಶ್ ಮಾತನಾಡಿದ್ದರೆಯೇ ಹೊರತು ದೇಶ ವಿಭಜನೆ ಬಗ್ಗೆ ಏನೂ ಮಾತನಾಡಿಲ್ಲ.
* ಲೋಕಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ಸಿಎಂ ಬದಲಾಗ್ತಾರೆ. ಡಿಸಿಎಂ ಅವರೇ ಸಿಎಂ ಆಗ್ತಾರೆ ಅಂತ ಮೋದಿ ಹೇಳಿದ್ದಾರಲ್ಲ?
ಮೋದಿ ಮಾತನಾಡಿದ್ದಕ್ಕೆ ನಾನು ತಲೆಕೆಡಿಸಿಕೊಳ್ಳಲು ಹೋಗೋದಿಲ್ಲ. ಕರ್ನಾಟಕದಲ್ಲಿ ಈಗ ಸಿದ್ದರಾಮಯ್ಯ ಸಿಎಂ. ನಾನು ಡೆಪ್ಯುಟಿ ಸಿಎಂ.
* ಅಧಿಕಾರ ಹಸ್ತಾಂತರ ವಿಚಾರದ ಗುಲ್ಲು ಇತ್ತಲ್ಲ. ಅದನ್ನೇ ಮೋದಿ ಹೇಳಿದ್ದಾರೆ?
ಅಧಿಕಾರದ ವಿಚಾರವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತೆ. ನರೇಂದ್ರ ಮೋದಿ ನಮ್ಮ ಹೈಕಮಾಂಡ್ ಅಲ್ಲ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಮ್ಮ ಹೈಕಮಾಂಡ್.
* ಈ ಚುನಾವಣೆಯಲ್ಲಿ ಸಚಿವರ ಸಾಧನೆ ಪರಾಮರ್ಶೆ ನಡೆಯುತ್ತೆ ಅಂದಿದ್ದಾರೆ ಉಸ್ತುವಾರಿ ಸುರ್ಜೇವಾಲಾ?
ಹೈಕಮಾಂಡ್ ಎಲ್ಲರಿಗೂ ಅಕೌಂಟಬಿಲಿಟಿ ಫಿಕ್ಸ್ ಮಾಡಬೇಕಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನನಗೂ ಜವಾಬ್ದಾರಿ ನೀಡಿದ್ದರಲ್ಲ. ಅದೇ ರೀತಿ ಸಚಿವರಿಗೂ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಸಂತ್ರಸ್ತರಿಗೆ ನೆರವಾಗಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ
* ಅಂದರೆ, ಸರಿಯಾಗಿ ಚುನಾವಣೆಯಲ್ಲಿ ಕೆಲಸ ಮಾಡದಿದ್ದರೆ ಬದಲಾವಣೆ ಸಾಧ್ಯತೆ ಇದೆ ಅಂತಾನ?
ಅದು ನನಗೆ ಗೊತ್ತಿಲ್ಲ. ನೀವು ಅದನ್ನು ಸುರ್ಜೇವಾಲಾ ಅವರನ್ನೇ ಕೇಳಬೇಕು.
* ಹೋಗಲಿ, ರಾಜ್ಯದಲ್ಲಿ ಎಷ್ಟು ಸ್ಥಾನಗಳನ್ನು ಕಾಂಗ್ರೆಸ್ ಪಡೆಯಬಹುದು?
ಎರಡು ಹಂತ ಸೇರಿ 20 ಸೀಟು ಗೆಲ್ಲುವ ವಿಶ್ವಾಸವಿದೆ.