ದಾವಣಗೆರೆ ಇತಿಹಾಸ ದೊಡ್ಡದಲ್ಲದಿದ್ದರೂ, ಇಲ್ಲಿನ ಜನರ ಇತಿಹಾಸ ದೊಡ್ಡದು ಎಂಬುದಕ್ಕೆ ಭಾನುವಾರ ಇಹಲೋಕ ತ್ಯಜಿಸಿದ, ಜೀವಂತ ದಂತಕಥೆಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರಂತಹ ಅನೇಕ ಸಾಧಕರೇ ಸಾಕ್ಷಿ.
ನಾಗರಾಜ ಎಸ್. ಬಡದಾಳ್
ದಾವಣಗೆರೆ (ಡಿ.15): ದಾವಣಗೆರೆ ಇತಿಹಾಸ ದೊಡ್ಡದಲ್ಲದಿದ್ದರೂ, ಇಲ್ಲಿನ ಜನರ ಇತಿಹಾಸ ದೊಡ್ಡದು ಎಂಬುದಕ್ಕೆ ಭಾನುವಾರ ಇಹಲೋಕ ತ್ಯಜಿಸಿದ, ಜೀವಂತ ದಂತಕಥೆಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರಂತಹ ಅನೇಕ ಸಾಧಕರೇ ಸಾಕ್ಷಿ. ರಾಜನಹಳ್ಳಿ, ಚಿಗಟೇರಿ, ಮಾಗಾನಹಳ್ಳಿ, ಅಜ್ಜಂಪುರ ಶೆಟ್ಟರು, ಬ್ರಹ್ಮಪ್ಪ ತವನಪ್ಪನವರು ಹೀಗೆ ಹಲವಾರು ಕುಟುಂಬಗಳು ದಶಕಗಳ ಹಿಂದೆ ದಾವಣಗೆರೆಗೆ ಕಾಯಕಲ್ಪ ನೀಡಿದರೆ, ಕಳೆದ 3-4 ದಶಕದಿಂದ ಶಾಮನೂರು ಶಿವಶಂಕರಪ್ಪ ನೂತನ ಜಿಲ್ಲೆಯಾದ ದಾವಣಗೆರೆಗೆ ಹೊಸ ಭಾಷ್ಯ ಬರೆದವರು.
ಎಲ್ಲ ಊರುಗಳಿಗೂ ಅವುಗಳದ್ದೇ ಆದ ಶ್ರೇಷ್ಠ ಇತಿಹಾಸ, ಗಟ್ಟಿ ಹಿನ್ನೆಲೆ ಇರುತ್ತದೆ. ಆದರೆ, ದೌಣಿ ಕಟ್ಟುವ ಸ್ಥಳವಾಗಿದ್ದ ದಾವಣಗೆರೆ ಸಣ್ಣದಾಗಿ ಹುಟ್ಟಿಕೊಂಡ ಇಲ್ಲಿನ ಜನರ ಸಾಧನೆಯಿಂದಲೇ ಬೆಳೆಯುತ್ತಾ ಬಂದ ಊರಾಗಿದೆ. ದಾನಿಗಳು, ಆಸ್ತಿಕರ, ವಿವಿಧ ಮಠಗಳ ನೆಲೆವೀಡಾದ ದಾವಣಗೆರೆ ವಾಣಿಜ್ಯ, ಕೈಗಾರಿಕಾ ನಗರಿಯೆಲ್ಲಾ ಆಗಿದ್ದು ಕಾಲನ ಹೊಡೆತಕ್ಕೆ ಸಿಕ್ಕಿ ಊರಿನ ಕಥೆ ಮುಗಿಯಿತು ಎನ್ನುವಷ್ಟರಲ್ಲೇ ವಿದ್ಯಾನಗರಿಯಾಗಿ ತಲೆಎತ್ತಿ ನಿಂತಿದೆ. ಈ ಸಾಧನೆಯಲ್ಲಿ ಬಹುಪಾಲು ವಾಮನಮೂರ್ತಿ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅವಿಸ್ಮರಣೀಯವಾಗಿದೆ.
ತಮ್ಮ 94ನೇ ವಯಸ್ಸನಲ್ಲೂ ಯುವಕರೂ ನಾಚುವಂತಹ ಅದ್ಭುತ ಸ್ಮರಣಶಕ್ತಿ, ವಾಗ್ಬಾಣದಂತಹ ಚುಟುಕು ಮಾತುಗಳು, ಸದಾ ಮಿಂಚು ಹೊರಹೊಮ್ಮಿಸುವಂತಹ ತೀಕ್ಷ್ಣ ಕಣ್ಣುಗಳ ಶಾಮನೂರು ಶಿವಶಂಕರಪ್ಪ ಅವರ ಜೀವನೋತ್ಸಾಹ ಎಲ್ಲರಿಗೂ ಸ್ಫೂರ್ತಿಯಾಗಿತ್ತು. ಮಧ್ಯ ಕರ್ನಾಟಕದ ದಾವಣಗೆರೆಯೆಂಬ ತೇಜಿ ಮಂದಿಯ ಊರು ಇಂದು ನಾಗಾಲೋಟದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದರೆ ಅದರಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಮಕ್ಕಳ ಕೊಡುಗೆಯೂ ಇದ್ದೇ ಇರುತ್ತದೆ. ಇದಕ್ಕೆ ಈಗ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನರ ಪಾತ್ರವೂ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.
ವಿದ್ಯಾ ಸಂಸ್ಥೆಗಳು-ಕಾರ್ಖಾನೆಗಳು: ತಮ್ಮದೇ ನೇತೃತ್ವದ ಬಾಪೂಜಿ ವಿದ್ಯಾಸಂಸ್ಥೆ, ತಮ್ಮ ಹಾಗೂ ಮಕ್ಕಳ ಒಡೆತನದ ಸಕ್ಕರೆ ಕಾರ್ಖಾನೆ, ಮಿಲ್‌ಗಳಲ್ಲಿ ಸಾವಿರಾರು ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಚಿದ್ದಾರೆ. ಶಾಮನೂರು ಶಿವಶಂಕರಪ್ಪ ಮತ್ತು ಮಕ್ಕಳು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದರು. ಅಷ್ಟೇ ಅಲ್ಲ, ತಮ್ಮದೇ ನೇತೃತ್ವದ ಬಾಪೂಜಿ ವಿದ್ಯಾಸಂಸ್ಥೆಯಲ್ಲೂ ಸಾಕಷ್ಟು ಜನರಿಗೆ ಉದ್ಯೋಗ ನೀಡಿದರೆ, ಕಾರ್ಮಿಕರ ಮಕ್ಕಳಿಗೆ ಮಾನವೀಯತೆಯ ದೃಷ್ಟಿಯಿಂದ ಶಿಕ್ಷಣಕ್ಕೂ ಅನುವು ಮಾಡಿಕೊಟ್ಟಿದ್ದಾರೆ. ಎಲ್ಲ ಜಾತಿ, ಜನಾಂಗ, ವೃತ್ತಿ ಬಾಂಧವರ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗಲು ಎಸ್.ಎಸ್. ಜನಕಲ್ಯಾಣ ಟ್ರಸ್ಟ್ ಮೂಲಕ ವಿದ್ಯಾರ್ಥಿ ವೇತನ ನೀಡಲು ಸುಮಾರು ಏಳೆಂಟು ಕೋಟಿ ರು.ಗಳನ್ನು ಠೇವಣಿಯನ್ನೂ ಇಟ್ಟ ಮಾನವೀಯ ಕಳಕಳಿಯ ವ್ಯಕ್ತಿತ್ವ ಶಾಮನೂರು ಶಿವಶಂಕರಪ್ಪ ಅವರದ್ದಾಗಿದೆ.
2008ರಿಂದ 2023ರವರೆಗೂ ಅಜೇಯ ಅಭ್ಯರ್ಥಿ!: ಓರ್ವ ಸಾಮಾನ್ಯ ವರ್ತಕ, ರೈತ ಕುಟುಂಬದ ಹಿನ್ನೆಲೆಯ ಶಾಮನೂರು ಶಿವಶಂಕರಪ್ಪ ಅಸಾಮಾನ್ಯ ಸಾಧಕನಾಗಿ ಬೆಳೆದು ನಿಂತಿದ್ದು ಯಾವುದೇ ಸಿನಿಮಾಗಿಂತಲೂ ಕಡಿಮೆಯೇನಿಲ್ಲ. ನಗರಸಭೆ ಸದಸ್ಯರಾಗಿ ರಾಜಕೀಯ ಜೀವನವನ್ನು ಆರಂಭಿಸಿ, ಹಂತ ಹಂತವಾಗಿ ಶಾಮನೂರು ಶಿವಶಂಕರಪ್ಪ ಅವರು ಮಾಡಿದ ಸೇವೆ, ಸಾಧನೆ, ಕೆಲಸಗಳೆಲ್ಲವೂ ಸಾಧನೆಯಾಗಿಯೇ ಉಳಿದಿವೆ. ದಾವಣಗೆರೆ ದಕ್ಷಿಣ ಕ್ಷೇತ್ರ ರಚನೆಯಾದ 2008ರಿಂದ 2023ರವರೆಗೆ ನಡೆದ ನಾಲ್ಕೂ ಚುನಾವಣೆಯಲ್ಲೂ ಶಾಮನೂರು ಅಜೇಯ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್‌ನ ಅಭೇಧ್ಯ ಕೋಟೆಯಾಗಿ 2008, 2013, 2018 ಹಾಗೂ 2023ರ ಚುನಾವಣೆಯಲ್ಲಿ ಯುವ, ಮಧ್ಯ ವಯಸ್ಕ ಅಭ್ಯರ್ಥಿಗಳನ್ನು, ಪ್ರಬಲ ಬಿಜೆಪಿಯನ್ನು ದಾವಣಗೆರೆ ದಕ್ಷಿಣ ಕ್ಷೇತದಲ್ಲಿ ತಲೆ ಎತ್ತದಂತೆ ನೋಡಿಕೊಂಡವರು ಶಾಮನೂರು ಶಿವಶಂಕರಪ್ಪ. ಕ್ಷೇತ್ರ ಪುನರ್ ವಿಂಗಡಣೆಗೆ ಮುನ್ನ 1994ರಲ್ಲಿ ದಾವಣಗೆರೆ ಕ್ಷೇತ್ರದ ಶಾಸಕರಾಗಿ ಮೊದಲ ಸಲ ಆಯ್ಕೆಯಾದ ಶಾಮನೂರು ಶಿವಶಂಕರಪ್ಪ ಅವರಲ್ಲಿ ದೊಡ್ಡ ರಾಜಕೀಯದ ಕನಸು ಆಗಲೇ ಗರಿಗೆದರಿತ್ತು. 1997ರಿಂದ 1999ರವರೆಗೆ ದಾವಣಗೆರೆ ಲೋಕಸಭಾ ಸದಸ್ಯರಾಗಿಯೂ ಪ್ರತಿನಿಧಿಸಿದ್ದರು. 2008ರಲ್ಲಿ ಕ್ಷೇತ್ರ ಪುನರ್ವಿಂಗಣೆಯ ನಂತರ ನಡೆದ 2008, 2013, 2018 ಹಾಗೂ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೆಚ್ಚಿನ ಜಟ್ಟಿಯಾಗಿ ದಕ್ಷಿಣವನ್ನು ಅಜೇಯ ಅಭ್ಯರ್ಥಿಯಾಗಿ ತಮ್ಮ 93ನೇ ವಯಸ್ಸಿನಲ್ಲೂ ಗೆದ್ದು, ಕೈವಶ ಮಾಡಿಟ್ಟುಕೊಂಡಿದ್ದ ಶಾಮನೂರು ಶಿವಶಂಕರಪ್ಪನವರು.
ರಾಜ್ಯದಲ್ಲಿ ಲಾಟರಿ ನಿಷೇಧ ಮಾಡಿಸಿದ್ದರು
ತಮ್ಮ ಎದುರೇ ಒಬ್ಬ ಮಗ ಜಿಲ್ಲಾ ಪರಿಷತ್ ಅಧ್ಯಕ್ಷನಾದಾಗ, ಮತ್ತೊಬ್ಬ ಮಗ ಕಿರಿಯ ವಯಸ್ಸಿನಲ್ಲೇ ಸಚಿವನಾದಾಗ ಸಂಭ್ರಮಿಸಿದ್ದ ಶಾಮನೂರು ಶಿವಶಂಕರಪ್ಪ ಮಾತ್ರ ಸಚಿವರಾಗಿ ಇಡೀ ದೇಶದ ಗಮನ ಸೆಳೆಯವಂತ ಸಾಧನೆ ಮಾಡಿದವರು. ಸಿಂಗಲ್ ನಂಬರ್ ಲಾಟರಿ, ಲಾಟರಿ ಪಿಡುಗು ರಾಜ್ಯದಲ್ಲಿ ಬಡ, ಮಧ್ಯಮ ವರ್ಗದ ಕುಟುಂಬ, ಶ್ರೀಮಂತ ಕುಟುಂಬಗಳ ನೆಮ್ಮದಿ ಕಸಿದುಕೊಂಡು, ಬೀದಿಗೆ ತಳ್ಳುವಂತಹ ವಾತಾವರಣವಿದ್ದಾಗ ವಿಧಾನ ಸಭೆಯಲ್ಲಿ ಲಾಟರಿ ನಿಷೇಧದ ಬಗ್ಗೆ ಮೊದಲು ಧ್ವನಿ ಎತ್ತಿದ್ದ ಶಾಮನೂರು ಶಿವಶಂಕರಪ್ಪ ರಾಜ್ಯದಲ್ಲಿ ಲಾಟರಿ ನಿಷೇಧ ಮಾಡಿಸಿದ್ದರು. ಆ ಮೂಲಕ ಬಡ ಮಹಿಳೆಯೊಬ್ಬಳಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡ ಛಲಗಾರರೂ ಹೌದು. ಅಂತಹ ಹಿರಿಯ ನಾಯಕನ ಅಗಲಿಕೆಯಿಂದಾಗಿ ದಾವಣಗೆರೆ ಜೀವಂತ ದಂತಕಥೆಯೊಂದು ಕಥೆಯಾಗಿ ಉಳಿಯುವಂತಾಗಿದೆ.


