ಖಾನಾಪುರದ ಶಾಸಕ ವಿಠ್ಠಲ ಹಲಗೆಕರ್, ಗಣಿತ ಮೇಷ್ಟ್ರಾಗಿ ಒಂದು ರೂಪಾಯಿ ಶುಲ್ಕದಿಂದ ಸಾವಿರಾರು ಕೋಟಿಯ ಸ್ವಸಹಾಯ ಸಂಘ ಕಟ್ಟಿದವರು. ಅಧಿಕಾರವಿದ್ದರೂ ಅವರ ಪತ್ನಿ ಅಂಗನವಾಡಿ ಶಿಕ್ಷಕಿಯಾಗಿ, ಸಹೋದರರು ಗಾರೆ ಕೆಲಸಗಾರರಾಗಿ ಸ್ವತಃ ಇವರು ರೈತರಾಗಿ ಮುಂದುವರಿದಿದ್ದು, ಇವರ ಸರಳ ಜೀವನ ಸಮಾಜಕ್ಕೆ ಪ್ರೇರಣೆಯಾಗಿದೆ.

ಖಾನಾಪುರದ ಶಾಸಕ ವಿಠ್ಠಲ ಹಲಗೆಕರ್ ಅವರ ಬದುಕಿನ ಅಪರೂಪದ ಹಾದಿಯನ್ನು ಏಷಿಯಾನೆಟ್ ಸುವರ್ಣನ್ಯೂಸ್ ಹಿರಿಯ ವರದಿಗಾರ ರವಿ ಶಿವರಾಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಲೇಖನದ ಮೂಲಕ ಅನಾವರಣಗೊಳಿಸಿದ್ದಾರೆ.

ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ವಿಲಾಸಿ ಕಾರುಗಳು, ಬಿಳಿ ಬಟ್ಟೆಯ ಪಟಾಲಂ ಮತ್ತು ಅಬ್ಬರದ ಪ್ರಚಾರ. ಆದರೆ ಇವೆಲ್ಲದರ ನಡುವೆ, 'ಸರಳ' ಎಂಬ ಶಬ್ದಕ್ಕೆ ಹೊಸ ಅರ್ಥ ನೀಡುತ್ತಿರುವ ವ್ಯಕ್ತಿ ಖಾನಾಪುರದ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ್. ಇವರನ್ನು ಕೇವಲ 'ಸರಳ' ಎನ್ನುವುದಕ್ಕಿಂತ ಸಮಾಜಕ್ಕೆ 'ಪ್ರೇರಣಾದಾಯಿ' ಎನ್ನುವುದೇ ಹೆಚ್ಚು ಸೂಕ್ತ.

ಒಂದು ರೂಪಾಯಿ ಟ್ಯೂಷನ್ ಫೀಸಿನಿಂದ ಸಾವಿರ ಕೋಟಿಯ ಸಂಸ್ಥೆಯವರೆಗೆ!

ವಿಠ್ಠಲ ಹಲಗೆಕರ್ ಅವರು ಮೂಲತಃ ಗಣಿತದ ಮೇಷ್ಟ್ರು (M.Sc). ಶಿಕ್ಷಕ ವೃತ್ತಿಯಲ್ಲಿದ್ದಾಗ ಅವರು ಸಂಜೆ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದರು. ಆಶ್ಚರ್ಯವೆಂದರೆ, ಅವರು ಪಡೆಯುತ್ತಿದ್ದ ಶುಲ್ಕ ತಿಂಗಳಿಗೆ ಕೇವಲ ಒಂದು ರೂಪಾಯಿ! ಆ ಒಂದೊಂದು ರೂಪಾಯಿಯನ್ನು ಒಗ್ಗೂಡಿಸಿ ಸ್ವಸಹಾಯ ಸಂಘಕ್ಕೆ ನೀಡಿ, ಇಂದು ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ 'ಮಹಾಲಕ್ಷ್ಮಿ ಸ್ವಸಹಾಯ ಸಂಘ'ವನ್ನು ಕಟ್ಟಿ ಬೆಳೆಸಿದ್ದಾರೆ. ಗಣಿತದ ಮೇಷ್ಟ್ರು ಹಾಕಿದ ಆ ಲೆಕ್ಕಾಚಾರ ಇಂದು ಸಾವಿರಾರು ಕುಟುಂಬಗಳಿಗೆ ಆಧಾರವಾಗಿದೆ.

ಶಾಸಕನ ಪತ್ನಿಯಾದರೂ ಇಂದಿಗೂ ಇವರೇ 'ಅಂಗನವಾಡಿ ಟೀಚರ್'

ಸಾಮಾನ್ಯವಾಗಿ ಪತಿ ಅಧಿಕಾರಕ್ಕೆ ಬರುತ್ತಿದ್ದಂತೆ ಪತ್ನಿಯರ ಜೀವನಶೈಲಿ ಬದಲಾಗುತ್ತದೆ. ಆದರೆ ವಿಠ್ಠಲ ಅವರ ಪತ್ನಿ ರುಕ್ಮಿಣಿ ಇಂದಿಗೂ ತೋಪಿನಕಟ್ಟಿ ಗ್ರಾಮದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮಗೆ ಮಕ್ಕಳಿಲ್ಲ ಎಂಬ ನೋವನ್ನು ನುಂಗಿ, ಆ ಊರಿನ ಎಲ್ಲ ಮಕ್ಕಳನ್ನು ತಮ್ಮದೇ ಮಕ್ಕಳೆಂದು ಪ್ರೀತಿಸುತ್ತಾ ಆಟ ಪಾಠ ಕಲಿಸುತ್ತಿದ್ದಾರೆ. ಶಾಸಕರ ಮಡದಿಯಾಗಿ ಸವಲತ್ತುಗಳ ಹಿಂದೆ ಬೀಳದೆ, ಇಂದಿಗೂ ಕಾಯಕದಲ್ಲಿ ತೊಡಗಿರುವ ಇವರ ನಡೆ ಅಪ್ರತಿಮ.

ತಮ್ಮಂದಿರು ಗಾರೆ ಕೆಲಸಗಾರರು, ಶಾಸಕರು ಇಂದಿಗೂ ರೈತರು!

ಇಂದಿನ ರಾಜಕಾರಣದಲ್ಲಿ ಕುಟುಂಬದವರು ಕೂಡಾ ಪವರ್ ತೋರಿಸುವ ಕಾಲವಿದು. ಆದರೆ ಹಲಗೆಕರ್ ಅವರ ಇಬ್ಬರು ಸಹೋದರರು ಇಂದಿಗೂ ಗಾರೆ ಕೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಸ್ವತಃ ಶಾಸಕ ವಿಠ್ಠಲ ಹಲಗೆಕರ್ ಅವರು ಕೂಡಾ ಅಧಿವೇಶನಕ್ಕೆ ಹೋಗುವ ಮೊದಲು, ಬೆಳಿಗ್ಗೆ 9 ಗಂಟೆಯವರೆಗೆ ಹೊಲದಲ್ಲಿ ಆಳಿನಂತೆ ದುಡಿದು ನಂತರವೇ ಸದನಕ್ಕೆ ಬರುತ್ತಾರೆ. ಅಧಿಕಾರ ತಲೆಗೆ ಏರದೇ ಮಣ್ಣಿನ ಗುಣ ಮರೆಯದ ನಿಜವಾದ ರೈತ ಇವರು.

ವಿರೋಧಿಗಳ ಬ್ಯಾಗ್ ಹೊತ್ತು ಬರುವ ಮಕ್ಕಳಿಗೆ ಮೇಷ್ಟ್ರ ಪ್ರೀತಿ

ಖಾನಾಪುರದಲ್ಲಿ ಇವರು ನಡೆಸುವ ಶಾಂತಿನಿಕೇತನ ಸಿಬಿಎಸ್ಇ ಶಾಲೆಯಲ್ಲಿ ಅನೇಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಲ್ಲಿಗೆ ಬರುವ ಕೆಲವು ಮಕ್ಕಳು ರಾಜಕೀಯ ಪ್ರತಿಸ್ಪರ್ಧಿ ಅಂಜಲಿ ನಿಂಬಾಳ್ಕರ್ ಅವರ ಭಾವಚಿತ್ರವಿರುವ ಬ್ಯಾಗ್ ಧರಿಸಿ ಬರುತ್ತಾರೆ. ಇದನ್ನು ಕಂಡವರು ಪ್ರಶ್ನಿಸಿದಾಗ ಹಲಗೆಕರ್ ಅವರು ನೀಡಿದ ಉತ್ತರ ಮಾರ್ಮಿಕವಾಗಿತ್ತು: 'ಪಾಪ ಮಕ್ಕಳಿಗೇನು ಗೊತ್ತು? ಅವರಿಗೆ ಬ್ಯಾಗ್ ಸಿಕ್ಕ ಖುಷಿ ಅಷ್ಟೇ, ಅಲ್ಲಿ ಯಾರ ಫೋಟೋ ಇದ್ದರೆ ಏನು ಬಿಡಿ' ಎನ್ನುವ ಮೂಲಕ ತಮ್ಮ ವಿಶಾಲ ಮನೋಭಾವ ಮೆರೆದಿದ್ದಾರೆ.

ಸಿದ್ಧಾಂತ ಮೀರಿದ ಮುಗ್ಧತೆ ಮತ್ತು ಮಾನವೀಯತೆ

ಸಚಿವೆಯೊಬ್ಬರ ಬಳಿಗೆ ಅಂಗನವಾಡಿ ಕಾರ್ಯಕರ್ತರ ನಿಯೋಗವನ್ನು ಕರೆದುಕೊಂಡು ಹೋದಾಗ, ಆ ನಿಯೋಗದಲ್ಲಿದ್ದವರೆಲ್ಲಾ ಕಮ್ಯುನಿಸ್ಟ್ ಸಿದ್ಧಾಂತದ ಫಾಲೋವರ್ಸ್ ಎಂದು ಗೊತ್ತಿದ್ದೂ ಹಲಗೆಕರ್ ಅವರ ಪತ್ನಿ ರುಕ್ಮಿಣಿ ಅವರಿಗೆ ಸಹಾಯ ಮಾಡಿದ್ದರು. ತಾನು ಬಿಜೆಪಿ ಶಾಸಕನ ಪತ್ನಿ ಎಂಬ ಹಮ್ಮು ಬಿಟ್ಟು, ಸಮಸ್ಯೆ ಪರಿಹಾರವಾಗಲಿ ಎಂಬ ಮುಗ್ಧತೆಯಿಂದ ಎಲ್ಲರನ್ನೂ ಸಮಾನವಾಗಿ ಕಂಡಿದ್ದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಂದು ದೊಡ್ಡ ಬದಲಾವಣೆಯಂತೆ ಕಾಣುತ್ತದೆ.

ಮಾಡರ್ನ್ ಯುಗದ 'ಡಿಜಿಟಲ್' ಗುರು

ಹಲಗೆಕರ್ ಅವರು ಹಳೆಯ ಸಂಪ್ರದಾಯದ ವ್ಯಕ್ತಿಯಂತೆ ಕಂಡರೂ, ವ್ಯವಹಾರದಲ್ಲಿ ಆಧುನಿಕರು. ಅವರ ಜೇಬಿನಲ್ಲಿ ಹಣವಿರುವುದಿಲ್ಲ, ಬದಲಾಗಿ ಯಾವಾಗಲೂ 'ಗೂಗಲ್ ಪೇ' ಆನ್ ಇರುತ್ತದೆ! ಭ್ರಷ್ಟಾಚಾರರಹಿತ, ಜನಸ್ನೇಹಿ ರಾಜಕಾರಣಕ್ಕೆ ಇವರು ಮಾದರಿ. ಚುನಾವಣೆ ಸಮಯದಲ್ಲಿ ಮತ ಕೇಳಲು ಬಡವರ ಮನೆಗೆ ಹೋಗಿ, ಗೆದ್ದ ಮೇಲೆ ಮುಖ ತಿರುಗಿಸುವವರ ನಡುವೆ ವಿಠ್ಠಲ ಹಲಗೆಕರ್ ಭರವಸೆಯ ಬೆಳಕಾಗಿ ಕಂಡಿದ್ದಾರೆ.