ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಡರಾತ್ರಿವರೆಗೆ ಕಾಂಗ್ರೆಸ್ ನಾಯಕರು ಮತ್ತು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಗೆಲುವಿಗೆ ರಣತಂತ್ರ ಹೆಣೆದರು. 

ದಾವಣಗೆರೆ (ಏ.4): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಕಾವೇರುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ಗುರುವಾರ ತಡರಾತ್ರಿವರೆಗೆ ಕಾಂಗ್ರೆಸ್ ನಾಯಕರು, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸುದೀರ್ಘ ಸಭೆ ನಡೆಸಿದರು. ಇದರೊಂದಿಗೆ ಪಕ್ಷದ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಗುರುವಾರ ದಿನವಿಡೀ ಪ್ರಚಾರ, ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿಕೆಶಿ, ಚುನಾವಣಾ ಕೆಲಸದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಮಾತುಗಳನ್ನಾಡಿದರು.

ಚುನಾವಣೆಗಾಗಿ ನಮ್ಮೆಲ್ಲಾ ಕಾರ್ಯಕರ್ತರು ಕಿಂಚಿತ್ತೂ ಧಣಿಯದೇ, ಅತ್ಯಂತ ಉತ್ಸಾಹದಿಂದ ಪಕ್ಷದ ಕಾರ್ಯದಲ್ಲಿ ತೊಡಗಿರುವ ಬದ್ದತೆಯು ಹೆಮ್ಮೆ ಮೂಡಿಸುತ್ತಿದೆ. ಬೂತ್ ಗೆದ್ದರೆ ರಾಜ್ಯವನ್ನೇ ಗೆದ್ದಂತೆ ಎಂಬ ಮಾತಿಗೆ ಪೂರಕವಾಗಿ ನೀವೆಲ್ಲರೂ ಕೆಲಸ ಮಾಡುತ್ತಿರುವ ನಮ್ಮ ಕೈಪಡೆಯ ಶ್ರಮವೇ ಅಭ್ಯರ್ಥಿ ಸಮರ್ಥನ ಗೆಲುವಿಗೆ ಶ್ರೀರಕ್ಷೆ ಎಂಬುದಾಗಿ ಉತ್ಸಾಹ ಮೂಡಿಸಿದರು.

ನಮ್ಮೆಲ್ಲಾ ಕಾರ್ಯಕರ್ತರ ಒಗ್ಗಟ್ಟು ಮತ್ತು ಸಂಘಟನಾ ಸಕ್ತಿ ವಿಜಯದ ಸಂಕೇತವಾಗಿದೆ ಎಂಬುದಾಗಿ ಡಿ.ಕೆ.ಶಿವಕುಮಾರ ಹೇಳಿದರು. ಗುರುವಾರ ಮಧ್ಯರಾತ್ರಿವರೆಗೆ ನಡೆದ ಪಕ್ಷದ ಸಭೆಯ ಬಗ್ಗೆ ಟ್ವೀಟರ್‌ನಲ್ಲಿ ಫೋಟೋ ಸಮೇತ ಹಾಕಿ, ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವ ಕೆಲಸವನ್ನೂ ಡಿ.ಕೆ.ಶಿವಕುಮಾರ ಮಾಡಿದ್ದಾರೆ.

ಎಸ್ಸೆಸ್ ಗಣೇಶ ನಿವಾಸಕ್ಕೆ ಡಿಕೆ:

ದಿವಂಗತ ಶಾಮನೂರು ಶಿವಶಂಕರಪ್ಪನವರ ದ್ವಿತೀಯ ಪುತ್ರ, ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಹ್ಯಾರೀಸ್‌, ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಸೇರಿದಂತೆ ಕಾಂಗ್ರೆಸ್ ನಾಯಕರು ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ, ಸುಮಾರು ಹೊತ್ತು ಚರ್ಚಿಸಿದರು. ನಂತರ ಎಸ್ಸೆಸ್ ಗಣೇಶ, ರೇಖಾ ಗಣೇಶ, ಪುತ್ರ ಅಭಿಜಿತ್ ಜಿ.ಶಾಮನೂರು ಇತರರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಸನ್ಮಾನಿಸಿ ಗೌರವಿಸಿದರು. ಮಾತುಕತೆ ವಿವರಗಳು ಬಹಿರಂಗವಾಗಿಲ್ಲವಾದರೂ, ಪಕ್ಷದ ಪ್ರಚಾರ, ಕಾಂಗ್ರೆಸ್ ಚಟುವಟಿಕೆಗಳಲ್ಲಿ ತೊಡಗುವಂತೆ ಗಣೇಶರಿಗೆ ಡಿಕೆಶಿ ಹೇಳಿದ್ದಾರೆನ್ನಲಾಗಿದೆ.