ಕುತೂಹಲ ಕೆರಳಿಸಿದ ರಾಯರಡ್ಡಿ ಔತಣಕೂಟ: ರಾಜ್ಯ ರಾಜಕೀಯ ಭಾರೀ ಸದ್ದು..!
ಕೊಪ್ಪಳ ನಗರದ ಮಹಾವೀರ ಕಲ್ಯಾಣ ಮಂಟಪದಲ್ಲಿ ಆ.12ರಂದು ಮಧ್ಯಾಹ್ನ ಪಕ್ಷಾತೀತವಾಗಿ ಔತಣಕೂಟ ಹಮ್ಮಿಕೊಂಡ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ. ಇದಕ್ಕಾಗಿ ಅವರು ತಮ್ಮ ಕಾರ್ಯಕರ್ತ ಬಂಧುಗಳು ಸೇರಿದಂತೆ ಇತರೆ ಪಕ್ಷದಲ್ಲಿರುವ ತಮ್ಮ ಆತ್ಮೀಯರು, ಅದರಲ್ಲೂ ವಿಶೇಷವಾಗಿ ಅಧಿಕಾರಿ ವರ್ಗದವರಿಗೆ ಆಹ್ವಾನ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಆ.11): ಕಾಂಗ್ರೆಸ್ಸಿನ ಪಕ್ಷದ ಶಾಸಕಾಂಗ ಸಭೆ ಕರೆಯುವಂತೆ ಬರೆದ ಪತ್ರಕ್ಕೆ ರುಜು ಹಾಕುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕೊಪ್ಪಳ ನಗರದಲ್ಲಿ ಹಮ್ಮಿಕೊಂಡಿರುವ ಔತಣಕೂಟ ಈಗ ರಾಜಕೀಯ ಪಡಸಾಲೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಹಲವು ಚರ್ಚೆ, ಊಹಾಪೋಹಕ್ಕೆ ಕಾರಣವಾಗಿದೆ.
ಕೊಪ್ಪಳ ನಗರದ ಮಹಾವೀರ ಕಲ್ಯಾಣ ಮಂಟಪದಲ್ಲಿ ಆ.12ರಂದು ಮಧ್ಯಾಹ್ನ ಪಕ್ಷಾತೀತವಾಗಿ ಔತಣಕೂಟ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಅವರು ತಮ್ಮ ಕಾರ್ಯಕರ್ತ ಬಂಧುಗಳು ಸೇರಿದಂತೆ ಇತರೆ ಪಕ್ಷದಲ್ಲಿರುವ ತಮ್ಮ ಆತ್ಮೀಯರನ್ನು ಆಹ್ವಾನಿಸಿದ್ದಾರೆ. ವಿಶೇಷವಾಗಿ ಅಧಿಕಾರಿ ವರ್ಗದವರನ್ನು ಆಹ್ವಾನಿಸಿದ್ದಾರೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 153 ಗ್ರಾಮಗಳಿಗೂ ಸುತ್ತಾಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈಗ ಔತಣಕೂಟ ಹಮ್ಮಿಕೊಂಡಿದ್ದಾರೆ.
ಅನ್ನಭಾಗ್ಯ ಸಿದ್ದರಾಮಯ್ಯರ ಅಚ್ಚುಮೆಚ್ಚಿನ ಕಾರ್ಯಕ್ರಮ: ಶಾಸಕ ಬಸವರಾಜ ರಾಯರಡ್ಡಿ
ರಾಜಕೀಯ ರೆಕ್ಕೆ-ಪುಕ್ಕ:
ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಇದುವರೆಗೂ ಶಾಸಕರಾದಾಗಲೆಲ್ಲ ಔತಣಕೂಟಗಳನ್ನು ಯಲಬುರ್ಗಾ ಅಥವಾ ಕುಕನೂರಿನಲ್ಲಿ ನಡೆಸಿಕೊಂಡು ಬಂದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಲಬುರ್ಗಾ ಶಾಸಕರಾಗಿ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಔತಣಕೂಟ ಹಮ್ಮಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಅವರು ಶಾಸಕಾಂಗ ಸಭೆ ಕರೆಯುವಂತೆ ಬರೆದ ಪತ್ರಕ್ಕೆ ರುಜು ಹಾಕಿದ ಮೇಲೆ ರಾಜ್ಯಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಪಕ್ಷಾತೀತವಾಗಿ ಔತಣಕೂಟ ಏರ್ಪಡಿಸಿರುವುದು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ನಾನಾ ಚರ್ಚೆಗೆ ಇಂಬು ನೀಡಿದೆ.
ಈ ನಡುವೆ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸಿರುವ ಬೆನ್ನಲ್ಲೇ ರಾಯರಡ್ಡಿ ಔತಣಕೂಟ ಏರ್ಪಡಿಸಿರುವುದು ಹಾಗೂ ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಔತಣಕೂಟಕ್ಕೆ ಕೇವಲ ಕ್ಷೇತ್ರದ ರಾಜಕೀಯ ಪ್ರತಿನಿಧಿಗಳು, ಕಾರ್ಯಕರ್ತರು, ಪಕ್ಷದವರಿಗೆ ಅಷ್ಟೇ ಸೀಮಿತವಾಗಿಲ್ಲ. ಜಿಲ್ಲೆಯ ರಾಜಕೀಯ ನಾಯಕರನ್ನು ಮತ್ತು ವ್ಯಾಪಾರಸ್ಥರನ್ನು, ಉದ್ಯಮಿಗಳನ್ನು ಆಹ್ಮಾನಿಸಿದ್ದಾರೆ. ತಮಗೆ ಆತ್ಮೀಯರಾಗಿರುವವರೆಲ್ಲರನ್ನೂ ಆಹ್ವಾನಿಸಿದ್ದಾರೆ ಎನ್ನಲಾಗುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೆಲ ಸಚಿವರನ್ನು ಅಖಾಡಕ್ಕೆ ಇಳಿಸಲು ಮುಂದಾಗಿದೆ. ಹಾಗಂತ ಶಾಸಕ ಬಸವರಾಜ ರಾಯರಡ್ಡಿ ಸಚಿವರೇನೂ ಆಗಿಲ್ಲ. ಆದರೆ, ಅವರೇನಾದರೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನುವುದು ಈಗ ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.
Party Rounds: ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ..!
ಅದರಲ್ಲೂ ಬಸವರಾಜ ರಾಯರಡ್ಡಿಗೆ ರಾಜ್ಯ ರಾಜಕಾರಣಕ್ಕಿಂತ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಹೆಚ್ಚಿರುವುದರಿಂದ ಈ ಚರ್ಚೆ ಮುನ್ನೆಲೆಗೆ ಬರಲು ಕಾರಣವಾಗಿದೆ. ಈ ರೀತಿಯ ಔತಣಕೂಟ ಏರ್ಪಡಿಸುವ ಮೂಲಕ ರಾಜಕೀಯ ಒತ್ತಡ ಹಾಕುವ ತಂತ್ರವೂ ಇರಬಹುದು ಎಂದು ಸಹ ಹೇಳಲಾಗುತ್ತಿದೆ.
ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಕೇವಲ ಔತಣಕೂಟ ಮಾತ್ರ ಇರುತ್ತದೆ. ಇದೊಂದು ಸೌಹಾರ್ದ ಕೂಟವಾಗಿದೆ. ಇಲ್ಲಿ ವೇದಿಕೆಯೂ ಇರುವುದಿಲ್ಲ. ಭಾಷಣವೂ ಇರುವುದಿಲ್ಲ. ಪ್ರತಿ ಬಾರಿಯೂ ಶಾಸಕನಾದಾಗ ಮಾಡುತ್ತಾ ಬಂದಿದ್ದೇನೆ. ಈ ಬಾರಿ ಎಲ್ಲರಿಗೂ ಅನುಕೂಲವಾಗಲಿ ಎಂದು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದೇನೆ. ಇದಕ್ಕೆ ವಿಶೇಷ ರಾಜಕೀಯ ಅರ್ಥ ಕಲ್ಪಿಸಬೇಡಿ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.