ಬೇರೆ ಪಕ್ಷದಿಂದ ಹಾರಿದವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೊರಟಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ಮೂಡಿಗೆರೆ (ಏ.21) : ಬೇರೆ ಪಕ್ಷದಿಂದ ಹಾರಿದವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೊರಟಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಟೀಕಿಸಿದರು.

ಗುರುವಾರ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಏರ್ಪಡಿಸಿದ್ದ ಬಿಜೆಪಿ ಸಮಾವೇಶ(BJP Convention)ದಲ್ಲಿ ಅಭ್ಯರ್ಥಿ ದೀಪಕ್‌ ದೊಡ್ಡಯ್ಯ ಪರ ಮತಯಾಚಿಸಿ ಮಾತನಾಡಿದರು. ಎಚ್‌.ಡಿ. ಕುಮಾರಸ್ವಾಮಿ ಅವರು ವಿಶ್ವನಾಥ್‌ ಹಳ್ಳಿಹಕ್ಕಿ(Vishwanath hallihakki) ಅವರನ್ನು ಜೆಡಿಎಸ್‌(JDS)ಗೆ ಕರೆತಂದು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರು. ಆದರೆ ಕೆಲವೇ ದಿನದಲ್ಲಿ ಅವರ ಬುದ್ದಿ ತೋರಿಸಿದ್ದು ಮರೆತಿದ್ದಾರೆ. ಅದೇ ರೀತಿ ಎಂ.ಪಿ.ಕುಮಾರಸ್ವಾಮಿ(MP Kumaraswamy) ಕೂಡ ಕೆಲವೇ ದಿನದಲ್ಲಿ ತಮ್ಮ ಬುದ್ಧಿ ತೋರಿಸಲಿದ್ದಾರೆ. ಎಂಪಿಕೆ ಅವರು ಧರ್ಮಸ್ಥಳದಲ್ಲಿ ತಾನು ಬಿಜೆಪಿ ಬಿಟ್ಟು ಹೋಗುವುದಿಲ್ಲವೆಂದು ಪ್ರಮಾಣ ಮಾಡಿದ್ದರೂ ಜೆಡಿಎಸ್‌(JDS)ಗೆ ಸೇರ್ಪಡೆಗೊಂಡಿದ್ದಾರೆ. ದೇವರಿಗೆ ದೋಖಾ ಮಾಡಿದ ಅವರು, ಇನ್ನು ಜೆಡಿಎಸ್‌ಗೆ ದೊಖಾ ಮಾಡದೇ ಇರುವರೇ? ಬಿಜೆಪಿ ಅವರಿಗೆ ನೀಡಿದ ಸ್ಥಾನ, ಮಾನದ ಋುಣ ತೀರಿಸಲು 3 ಜನ್ಮ ಎತ್ತಿದರೂ ಸಾಧ್ಯವಿಲ್ಲ. ಎಂಪಿಕೆ ಕಳ್ಳಾಟ ಜನರಿಗೆ ಗೊತ್ತಿದೆ. ಹಿಂದುತ್ವ, ರಾಷ್ಟ್ರ ಉಳಿಯಬೇಕೆಂದರೆ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಸಿಟಿ ರವಿ, ಬೊಮ್ಮಾಯಿ ವಿರುದ್ಧ ಯಾರಾಗ್ತಾರೆ ಕೈ ಅಭ್ಯರ್ಥಿ: ಕುತೂಹಲ ಹುಟ್ಟಿಸಿದ ಕಾಂಗ್ರೆಸ್ 4ನೇ ಪಟ್ಟಿ

ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಮಾತನಾಡಿ, ಎಂ.ಪಿ.ಕುಮಾರಸ್ವಾಮಿ ಅವರ ಪಕ್ಷ ವಿರೋ​ಧಿ ಚಟುವಟಿಕೆ, ಕಾರ್ಯಕರ್ತರ ಕಡೆಗಣನೆ, ಕೇಂದ್ರದ ಚುನಾವಣೆ ಸಮೀಕ್ಷೆಯಿಂದ ಅವರಿಗೆ ಟಿಕೆಟ್‌ ಕೈ ತಪ್ಪಿದೆ ಹೊರತು ಯಾವ ಕೈವಾಡವೂ ಇಲ್ಲ. ಎಂಪಿಕೆ ಅನುಕಂಪ ಗಿಟ್ಟಿಸಲು, ದಲಿತವೆಂಬ ಕಾರಣಕ್ಕೆ ಸವಾರಿ ಮಾಡುತ್ತಿದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ದಲಿತರು ಬಿಟ್ಟರೆ ಬೇರೆ ಯಾರಿಗೂ ಟಿಕೆಟ್‌ ನೀಡಲು ಸಾಧ್ಯವಿಲ್ಲವೆಂಬದು ಎಲ್ಲರಿಗೂ ತಿಳಿದಿದೆ.

ಬಣಕಲ್‌ನಲ್ಲಿ ಶಾಮಣ್ಣ ಜಿಪಂ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಲು ಪ್ರಯತ್ನಿಸಿದರು. ಜಿಪಂ ಚುನಾವಣೆಗೆ ವಕೀಲ ಸಿದ್ದಯ್ಯ ಹಾಗೂ ದೀಪಕ್‌ ದೊಡ್ಡಯ್ಯ ನಿಂತಾಗ ಅವರೆಲ್ಲಿ ಬೆಳೆದು ಬಿಡುತ್ತಾರೋ ಎಂಬ ಕಾರಣಕ್ಕೆ ಎಂಪಿಕೆ ಅವರನ್ನು ಸೋಲಿಸಲು ಕಾರಣರಾದರು. ಹಾಗಾದರೆ ದಲಿತ ವಿರೋಧಿ ​ಎಂದು ಯಾರನ್ನು ಕರೆಯಬೇಕು? ಎಂದು ಹೇಳಿದರು.

ಅಭ್ಯರ್ಥಿ ದೀಪಕ್‌ ದೊಡ್ಡಯ್ಯ ಮಾತನಾಡಿ, ತಾನು ಗೆದ್ದರೆ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು, ನಾಯಕರು, ಕ್ಷೇತ್ರದ ಜನತೆಗೆ ನೋವಾಗದಂತೆ 24 ಗಂಟೆ ಸೇವೆ ಮಾಡುತ್ತೇನೆ. ಇದಕ್ಕೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.

ಸಿ.ಟಿ.ರವಿ ಲಿಂಗಾಯುತ ವಿರೋಧಿ ಹೇಳಿಕೆ ವೈರಲ್: ಡ್ಯಾಮೇಜ್ ಬಿಜೆಪಿ ಪರದಾಟ

ಇದಕ್ಕೂ ಮುನ್ನ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಬಿಜೆಪಿ ಕಚೇರಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಉದ್ಘಾಟಿಸಿದರು. ಅಭ್ಯರ್ಥಿ ದೀಪಕ್‌ ದೊಡ್ಡಯ್ಯ ಅವರು ಚುನಾವಣಾಧಿ​ಕಾರಿ ಕಚೇರಿಗೆ ತೆರಳಿ 2 ನೇ ನಾಮಪತ್ರ ಸಲ್ಲಿಸಿದರು. ತದ ನಂತರ ಸಾವಿರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶಿಸಿದರು.

ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯ ಮಿಥಿಲೇಶ್‌ ಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ತಾಲೂಕು ಅಧ್ಯಕ್ಷ ಜೆ.ಎಸ್‌.ರಘು, ಮುಖಂಡರಾದ ಹಳಸೆ ಶಿವಣ್ಣ, ಕೆಂಜಿಗೆ ಕೇಶವ್‌, ಶೇಷಗಿರಿ ಕಳಸ, ದಿನೇಶ್‌ ಆಲ್ದೂರು, ದೇವರಾಜುಶೆಟ್ಟಿ, ಪ್ರೇಮ್‌ಕುಮಾರ್‌, ಬಿ.ಎನ್‌.ಜಯಂತ್‌ ಮತ್ತಿತರರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.