Karnataka Politics: ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹಗಲುಗನಸು ಕಾಣ್ತಿದೆ: ಸಿ.ಟಿ.ರವಿ
* ಸಂತೋಷ ಆತ್ಮಹತ್ಯೆ ಹಿಂದೆ ಅನೇಕ ಅನುಮಾನಗಳು ಕಾಡುತ್ತಿವೆ
* ಬಿಜೆಪಿ ಕೋಮುವಾದ ರಾಜಕಾರಣ ಮಾಡಲ್ಲ
* ಸಿದ್ದರಾಮಯ್ಯ ಶಾದಿ ಭಾಗ್ಯ ತಂದರು. ಆದರೂ ಅವರು ಜಾತ್ಯತೀತ
ವಿಜಯಪುರ(ಏ.16): ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ಸಿನವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ವ್ಯಂಗ್ಯವಾಡಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah),ಡಿ.ಕೆ.ಶಿವಕುಮಾರ(DK Shivakumar) ಸೇರಿದಂತೆ ಹಲವು ಕಾಂಗ್ರೆಸ್(Congress) ನಾಯಕರು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Election) ಬಿಜೆಪಿ(BJP) ಮತ್ತೆ ಅಧಿಕಾರಕ್ಕೆ ಬರಲಿದೆ. ನೀತಿ, ನಿಯತ್ತು ಇರುವಂತಹ ಬಿಜೆಪಿಯನ್ನು ರಾಜ್ಯದ ಜನರು ಬೆಂಬಲಿಸುತ್ತಾರೆ. ಹಾಗಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ಭವಿಷ್ಯ ನುಡಿದರು.
'ಭ್ರಷ್ಟಾಚಾರ ವಿಷಯದಲ್ಲಿ ಪ್ರಧಾನಿ ಮೋದಿ ಶೂನ್ಯ ಸಹನೆ'
ಈಶ್ವರಪ್ಪನವರ(KS Eshwarappa) ರಾಜೀನಾಮೆಯನ್ನು ಸ್ವಾಗತಿಸುತ್ತೇನೆ. ನೈತಿಕ ಹೊಣೆ ಹೊತ್ತು ಈಶ್ವರಪ್ಪನವರು ರಾಜೀನಾಮೆ ನೀಡಿದ್ದಾರೆ. ಎಲ್.ಕೆ.ಆಡ್ವಾಣಿ ಅವರ ಮೇಲೆ ಆರೋಪ ಬಂದಾಗ ಅವರೂ ರಾಜೀನಾಮೆ ನೀಡಿದ್ದರು ಎಂದರು.
ಸಂತೋಷ ಪಾಟೀಲ(Santosh Patil) ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ತನಿಖೆ ನಂತರ ಸತ್ಯ ಹೊರಗೆ ಬರುತ್ತದೆ. ಸಂತೋಷ ಪಾಟೀಲ ಆತ್ಮಹತ್ಯೆಗೆ ಉಡುಪಿಯನ್ನೇ ಆಯ್ಕೆ ಮಾಡಿಕೊಂಡಿರುವುದು ಯಾಕೆ ಎಂಬ ಸಂಶಯ ಮೂಡುತ್ತಿದೆ. ಅಲ್ಲಿ ಲಾಡ್ಜ್‌ನಲ್ಲಿ ಅವನೊಂದು ರೂಮ್ ಮಾಡಿಕೊಂಡಿದ್ದಾನೆ. ಉಳಿದವರು ಬೇರೆ ರೂಮ್ ಮಾಡಿಕೊಂಡಿದ್ದಾರೆ. ಇದು ಕೂಡ ಸಂಶಯ ಹುಟ್ಟು ಹಾಕಿದೆ. ಈ ರೀತಿ ಅನೇಕ ಅನುಮಾನಗಳು ಕಾಡುತ್ತಿವೆ. ಸಮಗ್ರ ತನಿಖೆ ನಂತರ ಸತ್ಯ ಹೊರಬರಲಿದೆ ಎಂದರು.
ಭ್ರಷ್ಟಾಚಾರವನ್ನು ಹೆಮ್ಮರವಾಗಿ ಮಾಡಿದ್ದು ಕಾಂಗ್ರೆಸ್. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದನ್ನು ನಾನು ಒಪ್ಪುವುದಿಲ್ಲ. ಶೇ.40ರಷ್ಟು ಕಮಿಷನ್ ಕೊಟ್ಟು ಕೆಲಸ ಮಾಡುವುದು ಅಸಾಧ್ಯದ ಮಾತು. ಕೆಂಪಣ್ಣ ಅವರು ಯಾರದೋ ಪ್ರಚೋದನೆಯಿಂದ ಇಂತಹ ಆರೋಪ ಮಾಡಿದ್ದಾರೆ ಎಂದು ಹೇಳಿದರು.
Chikkamagaluru: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಪಾತ್ರ ಕಂಡುಬಂದಿಲ್ಲ: ಸಿ.ಟಿ.ರವಿ
ಕಾಂಗ್ರೆಸ್ಸಿನವರು ಕೇವಲ ಆರೋಪ ಮಾಡುತ್ತಿದ್ದಾರೆ. ಯಾವುದೇ ದಾಖಲೆ ತೋರಿಸುತ್ತಿಲ್ಲ. ಆದ್ದರಿಂದ ಅವರ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದ ಅವರು, ಭ್ರಷ್ಟಾಚಾರ ಪಿತಾಮಹ ಕಾಂಗ್ರೆಸ್ ಪಕ್ಷ. ಪ್ರಾಮಾಣಿಕರಾಗಿದ್ದರೆ ಡಿ.ಕೆ.ಶಿವಕುಮಾರ ಅವರು ಜಾಮೀನಿನ ಮೇಲೆ ಏಕೆ ಹೊರಗೆ ಬಂದರು? ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ ಕಾಂಗ್ರೆಸ್ಸಿನವರ ಬಾಯಲ್ಲಿ ಭ್ರಷ್ಟಾಚಾರದ(Corruption) ಮಾತು ಬರುತ್ತಿವೆ ಎಂದು ಟೀಕಿಸಿದರು.
ಬಿಜೆಪಿ ಕೋಮುವಾದ ರಾಜಕಾರಣ ಮಾಡಲ್ಲ. ಮೋದಿ(Narendra Modi) ಅವರು ಯಾವುದೇ ಸರ್ಕಾರಿ ಯೋಜನೆಗಳನ್ನು ಜಾತಿ ಆಧಾರದ ಮೇಲೆ ತಂದಿಲ್ಲ. ಸಿದ್ದರಾಮಯ್ಯ ಶಾದಿ ಭಾಗ್ಯ ತಂದರು. ಆದರೂ ಅವರು ಜಾತ್ಯತೀತ. ಮೋದಿ ಮಾತ್ರ ಕೋಮುವಾದಿ(Communalist) ಎಂದು ಟೀಕಿಸುತ್ತಿದ್ದಾರೆ ಎಂದರು. ಬೆಲೆ ಏರಿಕೆಗೆ ಚೀನಾ ವೈರಸ್, ರಷ್ಯಾ ಮತ್ತು ಉಕ್ರೇನ್ ಯುದ್ಧ ಕಾರಣವಾಗಿದೆ. ಜಗತ್ತು ಆರ್ಥಿಕವಾಗಿ ಕುಗ್ಗಿ ಹೋಗಿದ್ದರೂ ನಾವು ಉಚಿತ ವ್ಯಾಕ್ಸಿನೇಶನ್ ನೀಡಿದ್ದೇವೆ ಎಂದರು.