*  ಕಾರ್ಯಾದೇಶ ಇಲ್ಲದೇ ಕಾಮಗಾರಿ; ತನಿಖೆಗೆ ನಡೆಯಲಿ*  ಶೇ.40 ಕಮಿಷನ್‌ ಎಂಬುದು ಸುಳ್ಳಿನ ಆರೋಪಗಳು, ನಾನು ಒಪ್ಪೋದಿಲ್ಲ*  ರಾಜಿನಾಮೆ ಕೇಳುವುದು ಸ್ವಾಭಾವಿಕ, ನಾವೇ ವಿಪಕ್ಷ ಜಾಗದಲ್ಲಿದ್ದರೂ ನಾವೂ ಅದನ್ನೇ ಮಾಡುತ್ತಿದ್ದೆವು 

ಚಿಕ್ಕಮಗಳೂರು(ಏ.14):  ಕಾಮಗಾರಿಯ ಕಾರ್ಯಾದೇಶ ಇಲ್ಲದೇ ಕೆಲಸ ಏಕೆ, ಹೇಗೆ ಮಾಡಿದರು ಎಂಬ ಬಗ್ಗೆ ನಿಪ್ಪಕ್ಷಪಾತವಾಗಿ ಸಮಗ್ರ ತನಿಖೆಯಾಗಲಿ. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ಕ್ರಮ ಆಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.40 ಕಮಿಷನ್‌(40% Commission) ಎಂಬುದು ಸುಳ್ಳಿನ ಆರೋಪಗಳು. 40ರಷ್ಟು ಕಮಿಷನ್‌ ನೀಡಿದರೆ ಕಳ್ಳ ಬಿಲ್‌ ಬರೆಯುವನು ಮಾತ್ರ ಮಾಡಬೇಕು. ಕೆಲಸ ಮಾಡಲು ಸಾಧ್ಯದೇ ಇಲ್ಲ. ರಾಜ್ಯ, ದೇಶದಲ್ಲಿ ಭ್ರಷ್ಟಾಚಾರವನ್ನು(Corruption) ಬಿತ್ತಿ ಬೆಳೆಸಿದ್ದು ಕಾಂಗ್ರೆಸ್‌ ಪಕ್ಷ. ಅವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಅದೆಲ್ಲಾ ಸುಳ್ಳಿನ ಸಂಗತಿ. ನಾನು ಒಪ್ಪುವುದಿಲ್ಲ ಎಂದರು.
ಇಂದಿನ ಸಿಮೆಂಟ್‌, ಕಬ್ಬಿಣ, ಡಾಂಬರ್‌ ದರದಲ್ಲಿ ಎಸ್‌.ಆರ್‌. ದರಕ್ಕೆ ಕೆಲಸ ಮಾಡುವುದು ಕಷ್ಟಇರಬೇಕಾದರೆ ಶೇ.40 ಕಮಿಷನ್‌ ಕೊಟ್ಟು ಕೆಲಸ ಮಾಡುತ್ತಾರೆ ಎಂಬುದು ಹಾಸ್ಯಾಸ್ಪದ ಸಂಗತಿ. ಕಾಂಗ್ರೆಸ್‌ ಮೇಲೆ ಶೇ.10 ಕಮಿಷನ್‌ ಆರೋಪ ಬಂದಾಗ ಅದನ್ನು ಮರೆಮಾಚಲು ಶೇ.40 ಎಂದು ಶುರು ಮಾಡಿ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಸಂಚು ರೂಪಿಸುತ್ತಿದ್ದಾರೆ ಎಂದರು.

'ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿಸುವವರು, ತಲೆ ಒಡೆದಾಗ ಯಾಕೆ ಕನಿಕರ ತೋರಿಸಲಿಲ್ಲ'

ಈ ಹಿಂದೆ ಆತ ಪತ್ರ ಬರೆದಾಗ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಅವರ ಕೈಲಿ ಮಾತನಾಡಿ, ಈ ಬಗ್ಗೆ ಕೇಳಿದ್ದೆ. ವರ್ಕ್ ಆರ್ಡರ್‌ ತೆಗೆದು ಕೊಂಡಿಲ್ಲ. ಒಪ್ಪಿಗೆ ಪತ್ರ ಪಡೆದಿಲ್ಲ. ಕೆಲಸ ಮಾಡಿದ್ದೇನೆಂದು ಹೇಳುತ್ತಾನೆ. ವರ್ಕ್ ಆರ್ಡರ್‌ ಇಲ್ಲದೇ ಹೇಗೆ ಹಣ ಪಾವತಿಸುವುದು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ನನ್ನ ಗಮನಕ್ಕೆ ತಂದಿದ್ದರು. ಕೆಲವೊಮ್ಮೆ ಸ್ಥಳಿಯವಾಗಿ ಜನರ ಪ್ರೀತಿ ಗಳಿಸುವ ಉತ್ಸಾಹದಲ್ಲಿ ಜಾತ್ರೆಯಂಥ ಕೆಲಸ ಮಾಡಿರುವ ಸಾಧ್ಯತೆಗಳಿದೆ. ಆದರೆ, ಸರ್ಕಾರದ ನಿಯಮದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ವರ್ಕ್ ಆರ್ಡರ್‌ ಇಲ್ಲದೇ ಬಿಲ್‌ ಪಾವತಿಸಲು ಸಾಧ್ಯತೆ ಇಲ್ಲ. ಆತ ಯಾರ ಮಾತು ಕೇಳಿ ಕೆಲಸ ಮಾಡಿದ್ದಾನೆ ಎಂಬುದು ತನಿಖೆ ನಂತರ ಗೊತ್ತಾಗಬೇಕಿದೆ. ಕೋಟ್ಯಂತರ ರು. ಕೆಲಸವನ್ನು ಯಾರೋ ಪೀಸ್‌ ವರ್ಕ್ ಕೊಟ್ಟು ಕೆಲಸ ಮಾಡಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜೀನಾಮೆ ಕೇಳುವುದು ಸ್ವಾಭಾವಿಕ. ನಾವು ವಿಪಕ್ಷದ ಜಾಗದಲ್ಲಿದ್ದರೂ ನಾವೂ ಅದನ್ನೇ ಮಾಡುತ್ತಿದ್ದೆವು. ಅದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಹಾಗೂ ಸ್ವತಃ ಕೆ.ಎಸ್‌. ಈಶ್ವರಪ್ಪ ಅವರಿದ್ದಾರೆ. ವಯಸ್ಸು ಮತ್ತು ಅನುಭವದಲ್ಲಿ ನಮಗಿಂತಲೂ ಹಿರಿಯರಿದ್ದಾರೆ. ಕೆಲವೊಮ್ಮೆ ಸಾರ್ವಜನಿಕವಾಗಿ ಬರುವ ಪರ್‌ಸ್ಪೆಷನ್‌ನಿಂದ ಮುಕ್ತರಾಗುವುದಕ್ಕಾದರೂ ಸಾರ್ವಜನಿಕ ಜೀವನದಲ್ಲಿ ಅನಿವಾರ್ಯವಾಗಿ ತಲೆಕೊಡಬೇಕಾದ ಸಂದರ್ಭ ಬರುತ್ತದೆ. ಸಾರ್ವಜನಿಕ ಸಂಶಯ ದೂರಗೊಳಿಸಲು ಮುಖ್ಯಮಂತ್ರಿ, ಈಶ್ವರಪ್ಪ ಅವರು ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ ಅವರು, ಮೇಲ್ನೋಟಕ್ಕೆ ಪರಿಶೀಲಿಸಿದಾಗ ಈಶ್ವರಪ್ಪನವರ ಪಾತ್ರ ಕಂಡುಬಂದಿಲ್ಲ. ತನಿಖೆ ಮೂಲಕವೇ ಯಾರು ಆರೋಪಿ, ಯಾರು ನಿರಾಪರಾಧಿ ಎನ್ನುವುದು ಪತ್ತೆಯಾಗಲಿ ಎಂದರು.

ಭ್ರಷ್ಟಾಚಾರ ವಿಷಯದಲ್ಲಿ ಪ್ರಧಾನಿ ಮೋದಿ ಶೂನ್ಯಸಹನೆ

ಪ್ರಧಾನಿ ಮೋದಿ(Narendra Modi) ಅವರು ಝೀರೋ ಟಾಲರೆನ್ಸ್‌ ಇಟ್ಟುಕೊಂಡಿದ್ದಾರೆ. ಭ್ರಷ್ಟಾಚಾರ ವಿಷಯದಲ್ಲಿ ಶೂನ್ಯಸಹನೆ. ಕಾಂಗ್ರೆಸ್ಸಿಗರ ಬಳಿ ಯಾವುದಾದರೂ ಸಾಕ್ಷ್ಯಾಧಾರಗಳು, ದಾಖಲೆಗಳಿದ್ದರೆ ಸಂಬಂಧಪಟ್ಟತನಿಖಾ ಏಜೆನ್ಸಿ ಮುಂದೆ ತರಲಿ ಎಂದು ಸಿ.ಟಿ. ರವಿ ಹೇಳಿದರು.

Karnataka Politics: ಅಲ್‌ ಖೈದಾ ಮತ್ತು ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್: ಸಿ.ಟಿ.ರವಿ

ತನಿಖಾ ಏಜೆನ್ಸಿ(Investigative Agency) ಮೇಲೆ ವಿಶ್ವಾಸ ಇಲ್ಲದಿದ್ದರೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ. ಯಾರನ್ನು ತನಿಖೆ ನಡೆಸದೇ ಗಲ್ಲಿಗೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ತನಿಖೆ ನಡೆಸದೇ ಗಲ್ಲಿಗೆ ಏರಿಸಬಹುದೆಂದಾದರೆ ಕಾಂಗ್ರೆಸ್ಸಿನ ಬಹಳ ಜನ ಖಾಲಿಯಾಗಿರುತ್ತಿದ್ದರು. ಅವರೆಲ್ಲಾ ತನಿಖೆ ಎದುರಿಸುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ತನಿಖೆ ನಡೆಯುತ್ತಿದೆ. ಅದಕ್ಕೂ ಮುನ್ನಾ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾ? ತನಿಖೆಯಲ್ಲಿ ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳಬಹುದು. ಸ್ವತಃ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬೇಲ್‌ನಲ್ಲಿದ್ದಾರೆ. ಕೋರ್ಟು, ಕಾನೂನು ಇಲ್ಲದಿದ್ದಲ್ಲಿ ನೇರವಾಗಿ ಕ್ರಮ ಜರುಗಿಸಲು ಸಾಧ್ಯವಾ? ಯಾವ ಕಾಯ್ದೆಯಲ್ಲಿ, ಕಾನೂನಿನಲ್ಲಿ ನೇರವಾಗಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಲಿ, ಆಗ ತೆಗೆದುಕೊಳ್ಳುತ್ತೇವೆ ಎಂದರು.