ಡಿ.ಕೆ. ಶಿವಕುಮಾರ್‌ ನನಗೆ ದೆಹಲಿಯಿಂದ ಬಿಜೆಪಿ ನಾಯಕರ ಕಾಲ್ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ನೊಳಗೆ ಡಿಕೆಶಿಗೆ ಭಧ್ರತೆ ಇಲ್ಲ ಎನ್ನುವುದು ಅರ್ಥವಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಹೇಳಿದರು.

ಹಾಸನ (ಅ.17): ತಮ್ಮ ಪಕ್ಷದೊಳಗೇ ತಮ್ಮ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿರುವುದರಿಂದ ಡಿ.ಕೆ. ಶಿವಕುಮಾರ್‌ ನನಗೆ ದೆಹಲಿಯಿಂದ ಬಿಜೆಪಿ ನಾಯಕರ ಕಾಲ್ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ನೊಳಗೆ ಡಿಕೆಶಿಗೆ ಭಧ್ರತೆ ಇಲ್ಲ ಎನ್ನುವುದು ಅರ್ಥವಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಹೇಳಿದರು.

ನಗರದ ಹಾಸನಾಂಬೆ ದೇವಾಲಯದ ಹೊರಭಾಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಅವರಿಗೆ ದೆಹಲಿಯಿಂದ ಕಾಲ್ ಬಂದಿದ್ದರೆ, ಆಗಲೇ ಹೇಳಬೇಕಿತ್ತು, ಅದನ್ನು ತಕ್ಷಣವೇ ಸ್ಪಷ್ಟಪಡಿಸಬೇಕಾಗಿತ್ತು. ಈಗ ಕಾಂಗ್ರೆಸ್ ಒಳಗೆ ಅವಕಾಶ ತಪ್ಪುವ ಆತಂಕದಿಂದ ಈ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಜಕಾರಣಿಗಳ ಮಾತು ಯಾವಾಗಲೂ ಸತ್ಯ ಇರಲ್ಲ, ಕೆಲವೊಮ್ಮೆ ತಮ್ಮ ಅನುಕೂಲಕ್ಕಾಗಿ ಸುಳ್ಳು ಹೇಳುತ್ತಾರೆ. ಅವರು ನಿಜ ಹೇಳ್ತಾರೋ, ಸುಳ್ಳು ಹೇಳ್ತಾರೋ ಅವರಿಗೆ ಮಾತ್ರ ಗೊತ್ತು ಎಂದು ವ್ಯಂಗ್ಯವಾಡಿದರು.

ರಾಷ್ಟ್ರದ್ರೋಹಿಗಳ ಓಲೈಕೆಗಾಗಿ ಆರ್‌ಎಸ್‌ಎಸ್‌ ಟೀಕೆ: ಪ್ರಿಯಾಂಕ್ ಖರ್ಗೆ ನೀಡಿದ ಆರ್‌ಎಸ್‌ಎಸ್ ಕುರಿತು ಹೇಳಿಕೆಗೆ ತಿರುಗೇಟು ನೀಡಿ, ನಿಸ್ವಾರ್ಥ ಸೇವೆಗೆ ಹೆಸರಾಗಿರುವ ಸಂಘಟನೆಯೇ ಆರ್‌ಎಸ್‌ಎಸ್. ರಾಷ್ಟ್ರಹಿತದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸಂಸ್ಥೆಯ ವಿರುದ್ಧ ಮಾತನಾಡುವುದು ಸರಿಯಲ್ಲ. ಅವರು ದೇಶದ್ರೋಹಿ, ಮತೀಯತಾವಾದಿ ಹಾಗೂ ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವವರ ವಿರುದ್ಧ ಮಾತನಾಡಿದ್ದರೆ ಸರಿಯಾಗಿತ್ತು. ಆದರೆ ಅವರ ಮಾತು ರಾಷ್ಟ್ರಹಿತದ ಮಾತಲ್ಲ ಎಂದರು. ಭಾರತ ವಿಶ್ವಗುರು ಆಗಬೇಕು ಎಂಬ ಹಂಬಲದಿಂದ ಆರ್‌ಎಸ್‌ಎಸ್ ವ್ಯಕ್ತಿ ನಿರ್ಮಾಣದ ಕೆಲಸ ಮಾಡುತ್ತಿದೆ. ನಿಮ್ಮ ಮನಸ್ಥಿತಿ ಬದಲಾಯಿಸಿ.

ನಿಮ್ಮ ಮಾತುಗಳಿಂದ ದೇಶದ್ರೋಹಿಗಳು ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಮಾತ್ರ ಲಾಭವಾಗುತ್ತಿದೆ. ಜಾತಿ-ಜಾತಿ ಎತ್ತಿಕಟ್ಟಿ ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿದೆ. ರಾಷ್ಟ್ರಭಕ್ತ ಸಂಘಟನೆಯ ವಿರುದ್ಧ ಅಪಪ್ರಚಾರ ಮಾಡ್ತಾ ಯಾರಿಗೆ ಲಾಭ ಮಾಡಿಕೊಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು. ದೇಶಭಕ್ತಿಯ ಶಿಕ್ಷಣ ಅಪರಾಧವೇ? ಜಾತಿ ವ್ಯವಸ್ತೆ ಅಳಿಸುವ ಬಗ್ಗೆ ಜಾಗೃತಿ ಮೂಡಿಸುವುದು ತಪ್ಪೇ! ಆರ್‌ಎಸ್‌ಎಸ್‌ಗೆ ಯಾವುದೇ ಸದಸ್ಯತ್ವದ ಅವಶ್ಯಕತೆ ಇಲ್ಲ. ಬನ್ನಿ ಶಾಖೆಗೆ, ನಿಮಗೆ ಒಪ್ಪದಿದ್ದರೆ ಹೇಳಿ ಎಂದು ಆಹ್ವಾನ ನೀಡಿದರು. ಸುಧಾ ಮೂರ್ತಿ ಕುರಿತ ಸಮೀಕ್ಷೆ ವಿವಾದಕ್ಕೂ ಪ್ರತಿಕ್ರಿಯೆ ನೀಡಿದರು. ನ್ಯಾಯಾಲಯ ಈಗಾಗಲೇ ಸ್ಪಷ್ಟಪಡಿಸಿದೆ.

ಕಾಕಕಾಳ್ಕರ್ ರಿಪೋರ್ಟ್ ಏನಾಯಿತು?

ಯಾವುದೇ ಸಮೀಕ್ಷೆ ಕಡ್ಡಾಯ ಅಲ್ಲ. ಹಿಂದುಳಿದ ಆಯೋಗವೂ ಪತ್ರಿಕಾ ಪ್ರಕಟಣೆ ಮೂಲಕ ಇದೇ ವಿಚಾರವನ್ನು ದೃಢಪಡಿಸಿದೆ ಎಂದು ಹೇಳಿದರು. ಜಾತಿಗಣತಿಯ ಕುರಿತಂತೆ ರವಿ ಕಾಂಗ್ರೆಸ್‌ನ ನಿಲುವಿನ ಮೇಲೆ ತೀವ್ರ ಟೀಕೆ ಮಾಡಿ, ಜಾತಿಗಣತಿಯ ಉದ್ದೇಶ ನಿಜವಾಗಿ ಜಾತ್ಯಾತೀತ ರಾಷ್ಟ್ರ ನಿರ್ಮಾಣವೇ ಆಗಿದೆಯೇ? ಸಾಮಾಜಿಕ ನ್ಯಾಯವೇ ಉದ್ದೇಶವಾದರೆ, ಅದನ್ನು ಈಡೇರಿಸುವ ಸಂಕಲ್ಪಶಕ್ತಿ ಕಾಂಗ್ರೆಸ್‌ಗೆ ಇಲ್ಲ. ನಾಗ್‌ಮೋಹನ್ ದಾಸ್ ಮತ್ತು ಕಾಂತರಾಜು ವರದಿಗಳನ್ನು ಕಸದ ಬುಟ್ಟಿಗೆ ಹಾಕಿದರು. ಮಂಡಲ್ ಆಯೋಗದ ವರದಿಯನ್ನು ದಶಕಗಳ ಕಾಲ ಕುರ್ಚಿಯಡಿ ಇಟ್ಟುಕೊಂಡಿದ್ದರು. ಕಾಕಕಾಳ್ಕರ್ ರಿಪೋರ್ಟ್ ಏನಾಯಿತು? ಕಾಂಗ್ರೆಸ್‌ಗೆ ಇಚ್ಛಾಶಕ್ತಿ ಇದ್ದಿದ್ದರೆ ಇವು ಅಳವಡಿಸಬಹುದಾಗಿತ್ತು.

ಕೇವಲ ಜಾತಿ ಜಾತಿ ಎತ್ತಿಕಟ್ಟಿ ಸಮಾಜ ಒಡೆಯಲು, ಜನರನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಸಾಂದರ್ಭಿಕವಾಗಿ ಜಾತಿಗಣತಿಯನ್ನು ರಾಜಕೀಯ ಸಾಧನವಾಗಿ ಬಳಸುತ್ತಿದ್ದಾರೆ. ಇದರಿಂದ ಒಳ್ಳೆಯದಾಗುವುದಿಲ್ಲ. ನಿಜವಾಗಿ ನಿಮಗೆ ಜಾತಿಯನ್ನು ಅಳೆಯಬೇಕೆಂದಿದ್ದರೆ, ಬಡತನವೇ ಮಾನದಂಡವಾಗಬೇಕಿತ್ತು. ಸಾಮಾಜಿಕ ಅಸ್ಪೃಶ್ಯತೆ ನಿವಾರಣೆಗೆ ಸಾಮಾಜಿಕ ಪರಿವರ್ತನೆಯ ಶಿಕ್ಷಣ ನೀಡುವ ಸಂಘಟನೆಗಳನ್ನು ನೀವು ನಿಷೇಧಿಸಿರಲಿಲ್ಲ ಎಂದು ಕಿಡಿಕಾರಿದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯಿತ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರು ಉಪಸ್ಥಿತರಿದ್ದರು.