ಸಂಪೂರ್ಣ ಗೋಹತ್ಯೆ ಕಾಯ್ದೆ ಜಾರಿಯಲ್ಲಿದೆ. ಗೋ ಹಂತಕರನ್ನು ಪೊಲೀಸರು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡದೇ ಇದ್ದರೆ ನಾವೇ ಆ ಕೆಲಸವನ್ನು ಮಾಡುತ್ತೇವೆ. ಹಿಂದೂ ಸಮಾಜಕ್ಕೆ ಆ ತಾಕತ್ತು ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು (ಅ.16): ಸಂಪೂರ್ಣ ಗೋಹತ್ಯೆ ಕಾಯ್ದೆ ಜಾರಿಯಲ್ಲಿದೆ. ಗೋ ಹಂತಕರನ್ನು ಪೊಲೀಸರು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡದೇ ಇದ್ದರೆ ನಾವೇ ಆ ಕೆಲಸವನ್ನು ಮಾಡುತ್ತೇವೆ. ಹಿಂದೂ ಸಮಾಜಕ್ಕೆ ಆ ತಾಕತ್ತು ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಇತ್ತಿಚೆಗೆ ನಗರದಲ್ಲಿ ಗೋವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ಸೇರಿದಂತೆ ಗೋಹತ್ಯೆ, ಲವ್‌ ಜಿಹಾದ್ ನಂತಹ ಪ್ರಕರಣ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ನಗರದ ಆಜಾದ್ ಪಾರ್ಕ್ ಸರ್ಕಲ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದರೆ ಗೋರಕ್ಷಣೆಯಂತಹ ಕಾರ್ಯಕ್ಕೆ ಬಜರಂಗದಳದ ಕಾರ್ಯಕರ್ತರು ಮುಂದಾಗುವುದಿಲ್ಲ.

ಗೋಹಂತಕರಿಂದ ಹಫ್ತಾ ವಸೂಲಿ ಮಾಡಿ ಸುಮ್ಮನಾದರೆ ನಿಮ್ಮ ಹೆಂಡತಿ, ಮಕ್ಕಳು ಸುಖವಾಗಿರಲು ಸಾಧ್ಯವಿಲ್ಲ ಎಂದರು. ಉಪ್ಪಳ್ಳಿ ಬಳಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ. ಇಂದಿಗೂ ನ್ಯಾಯಬದ್ಧ ಅನುಮತಿ ಪಡೆದಿಲ್ಲ. ಜಿಲ್ಲಾಡಳಿತ ನಿಲ್ಲಿಸದೇ ಇದಲ್ಲಿ ನಾವೇ ನಿಲ್ಲಿಸಬೇಕಾಗಬಹುದು. ಜಿಲ್ಲಾಡಳಿತ ಕಾನೂನು ಪಾಲಿಸುವಂತೆ ನೋಡಿಕೊಂಡರೆ ಕೋಮು ಗಲಭೆ ಆಗುವುದಿಲ್ಲ ಎಂದು ಹೇಳಿದರು. ಅಂಬೇಡ್ಕರ್ ಕೊಟ್ಟ ಸಂವಿಧಾನ ಗೋಹತ್ಯೆ ನಿಷೇಧ ಮಾಡಿದ್ದರೂ, ಅಕ್ರಮ ಕಸಾಯಿ ಖಾನೆಗಳು ನಡೆಯುತ್ತಿವೆ ಎಂದರೆ ಅದು ಸಂವಿಧಾನ ವಿರೋಧಿ ಕೃತ್ಯ. ಅದನ್ನು ಮಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕು ಎಂದು ಒತ್ತಾಯಿಸುತ್ತಿರುವುದು ಅಪರಾಧವೇ ಎಂದು ಪ್ರಶ್ನಿಸಿದರು.

ನನ್ನದು ಬಸವ ಧರ್ಮ, ಅಂಬೇಡ್ಕರ್ ವಾದ, ಗಾಂಧಿ ಮಾರ್ಗ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಬಸವಣ್ಣನವರು ಕಳಬೇಡ, ಕೊಲಬೇಡ ಎಂದು ಹೇಳಿದ್ದಾರೆ. ಹಾಗಿದ್ದರೆ ಗೋಹತ್ಯೆಯನ್ನು ಮುಖ್ಯಮಂತ್ರಿ ಹೇಗೆ ಸಮರ್ಥನೆ ಮಾಡುತ್ತಾರೆ. ದಯೆ ಇರಬೇಕು ಸಕಲ ಜೀವಾತ್ಮರಿಗೂ ಎಂದು ಬಸವಣ್ಣ ಹೇಳಿದ್ದಾರೆ. ಆದರೆ ಬೆಂಗಳೂರಿನಲ್ಲಿ ಗೋವಿನ ಕೆಚ್ಚಲು ಕತ್ತರಿಸಿ ರಕ್ತ ಹರಿಸಿದರು, ಆದರೆ, ಬಸವ ಧರ್ಮ ಪಾಲಿಸುವ ಮುಖ್ಯಮಂತ್ರಿಗಳಿಗೆ ಕಣ್ಣೀರು ಬರಲಿಲ್ಲ ಎಂದರು. ಭಟ್ಕಳದಲ್ಲಿ ಗಬ್ಬದ ಹಸುವಿಗೆ ಚೂರಿ ಹಾಕಿ ಭ್ರೂಣ ಹೊರ ತೆಗೆದರು ಮುಖ್ಯಮಂತ್ರಿಗಳಿಗೆ ಸಂಕಟವಾಗಲಿಲ್ಲ.

ಜಿಲ್ಲೆಯ ಕಡೂರಿನ ಕಲ್ಕೆರೆ, ಚೌಳಹಿರಿಯೂರು, ಕಳಸ, ಕೊಟ್ಟಿಗೆಹಾರ, ಶೃಂಗೇರಿ, ಚಿಕ್ಕಮಗಳೂರು, ಕಳಸಗಳಲ್ಲಿ ಅಕ್ರಮ ಗೋ ಸಾಗಣೆ, ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದನ್ನೆಲ್ಲ ಮಾಡಿದ್ದು ಮುಖ್ಯಮಂತ್ರಿಗಳು ಶಾಂತಿಧೂತರು ಎಂದು ಕರೆದ ಜನರೇ ಆಗಿದ್ದಾರೆ ಎಂದರು. ಮುಖ್ಯಮಂತ್ರಿಗಳು ಹೇಳಿದ ಶಾಂತಿಧೂತರೇ ಗೋ ಹಂತಕರು, ಗೋವಿನ ಕೆಚ್ಚಲು ಕತ್ತರಿಸಿದವರು. ದಯೆ ಇಲ್ಲದವರನ್ನು ನೋಡಿಕೊಂಡು ಸುಮ್ಮನಿದ್ದು, ಅದನ್ನು ತಡೆದವರ ಮೇಲೆ ಕೇಸು ದಾಖಲಿಸಿದ್ದೀರಿ. ಇನ್ನೆರೆಡುವರೆ ವರ್ಷ ತಾಳಿಕೊಳ್ಳಿ ನೀವು ಹಾಕಿರುವ ಎಲ್ಲಾ ಕೇಸುಗಳನ್ನು ವಾಪಾಸ್ ತೆಗೆಸುತ್ತೇವೆ ಎಂದರು.

ಮುಂದೆ ನಮ್ಮ ಸರ್ಕಾರ ಬಂದ ನಂತರ ಜಿಲ್ಲೆಗೊಂದು ಜೆಸಿಬಿ ಪಡೆ ತಯಾರು ಮಾಡುತ್ತೇವೆ. ಅಲ್ಲೇ ಡ್ರಾ, ಅಲ್ಲೇ ಬಹು ಮಾನ ಎನ್ನುವಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಕಲ್ಲು ಹೊಡೆದರೆ ಜೆಸಿಬಿ ಬರುತ್ತದೆ. ಇವರಾರು ಶಾಶ್ವತವಾಗಿ ಇರುವುದಿಲ್ಲ ಎಂದು ಹೇಳಿದರು. ಜಿಲ್ಲಾಡಳಿತ ಅಕ್ರಮ ಕಸಾಯಿ ಕೇಂದ್ರಗಳನ್ನು ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ನೆಲದ ಕಾನೂನು, ನಮ್ಮ ಧರ್ಮ, ಸಂಸ್ಕೃತಿ ಉಳಿಸಿಕೊಳ್ಳಲು ಹಿಂದೂ ಸಮಾಜ ಹಿಂದುಳಿಯುವುದಿಲ್ಲ. ನಮಗೆ ಖಾಜಿ ನ್ಯಾಯ ಬೇಡ, ಅಂಬೇಡ್ಕರ್ ಕೊಟ್ಟ ಸಂವಿಧಾನದ ಪ್ರಕಾರ ನ್ಯಾಯ ಕೊಡಿ ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ತಾಯಿ ಸಮಾನವಾದ ಗೋಮಾತೆ ಮೇಲೆ ದಾಳಿಗಳು ನಡೆದಾಗ ಯಾವ ತ್ಯಾಗಕ್ಕಾದರೂ ಸಿದ್ಧರಿರಬೇಕು. ನಾವೂ ಸಹ ರಾಜೀನಾಮೆ ಕೊಟ್ಟು ಹೊರಬರಲು ಸಿದ್ಧರಿದ್ದೇವೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಮಗೆ ದೇಶಭಕ್ತಿಯನ್ನೇ ಹೇಳಿಕೊಟ್ಟಿದೆ. ನಮಗೆ ಹಿಂದುತ್ವ, ದೇಶ ಮೊದಲು ಮಿಕ್ಕೆಲ್ಲವೂ ಗೌಣ ಎಂದು ಹೇಳಿದರು. ಹಿಂದೂಗಳು ಸಂಘಟಿತರಾಗಿ ಪ್ರತಿ ಮನೆಯಿಂದ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು. ಇಲ್ಲವಾದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿ ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದೆ ಔರಂಗಜೇಬನ ಆಡಳಿತದಲ್ಲಿ ತುಘಲಕ್ ದರ್ಬಾರ್ ಇತ್ತು ತಲೆ ಗಂದಾಯ ಕೊಟ್ಟರೆ ಮಾತ್ರ ಹಿಂದೂಗಳು ಬದುಕಲು ಅವಕಾಶವಿತ್ತು. ಅದೇ ರೀತಿ ಆಡಳಿತ ರಾಜ್ಯದಲ್ಲೂ ಮುಖ್ಯ ಮಂತ್ರಿ ತರಲು ಹೊರಟಿದ್ದಾರೆ. ಹಿಂದೂ ಎಂದು ಹೇಳಿಕೊಳ್ಳಲು ಆಗದ ಸ್ಥಿತಿ ಬಂದಿದೆ.

ಗೋವಿಗೆ ಬೆಂಕಿ ಕೊಟ್ಟು ವಿಕೃತಿ ಮೆರೆದ ಕೃತ್ಯ ನಗರದಲ್ಲಿ ನಡೆದಿದೆ. ಅದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಅಪ್ರಾಪ್ತನಿಂದ ಈ ಕೆಲಸ ನಡೆದಿದ್ದರೆ ಅದಕ್ಕೆ ಕುಮ್ಮಕ್ಕು ಕೊಟ್ಟವರನ್ನು ಯಾಕೆ ಬಂಧಿಸಿಲ್ಲ ಹಾಗಿದ್ದರೆ ಗೋವಿನ ಹಿಂಸೆಯನ್ನು ತಡೆದವರ ಮೇಲೆ ಏಕೆ ಕೇಸು ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದರು. ನಗರದ ಕತ್ರಿಮಾರಮ್ಮ ದೇವಸ್ಥಾನದ ಬಳಿ ಗೋಪೂಜೆ ನೆರವೇರಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಸಿ.ಟಿ.ರವಿ ಚಾಲನೆ ನೀಡಿದರು. ಆಜಾದ್ ಪಾರ್ಕ್‌ವರೆಗೆ ಭಗವಧ್ವಜ ಹಿಡಿದು ಪ್ರತಿಭಟನೆ ನಡೆಸಲಾಯಿತು. ಗೋಹಂತಕರ ವಿರುದ್ಧ ಘೋಷಣೆಗಳನ್ನು ಹಾಕಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರಿಕಾಂತ್ ಪೈ, ಬಜರಂಗದಳದ ಶ್ಯಾಂ ವಿ.ಗೌಡ, ರಂಗನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಸೇರಿ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೀಫ್‌ ಬಿರಿಯಾನಿ ಕೊಟ್ಟ ಪ್ರತಿಭಟನಾಕಾರರು

ಚಿಕ್ಕಮಗಳೂರು ನಗರದಲ್ಲಿ ಬುಧವಾರ ಪ್ರತಿಭಟನೆ ಬಳಿಕ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹೊಟೇಲ್‌ನಿಂದ ತಂದಿದ್ದ ಬೀಫ್‌ ಬಿರಿಯಾನಿ ಹಾಗೂ ಕಬಾಬ್‌ ನ್ನು ಮನವಿಯ ಜತೆಗೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಜಯಕುಮಾರ್‌ ಅವರಿಗೆ ನೀಡಿದರು. ಯುವ ಮೋರ್ಚಾದ ಕಾರ್ಯಕರ್ತರು ತಂದಿದ್ದ ಬಿರಿಯಾನಿ ಹಾಗೂ ಕಬಾಬ್‌ನ್ನು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಜಯಕುಮಾರ್ ಅವರಿಗೆ ನೀಡಿದರು. ಇದೇ ವೇಳೆಯಲ್ಲಿ ಯುವ ಮೋರ್ಚಾ ಕಾರ್ಯ ಕರ್ತರು ನಗರದ ಐಜಿ ರಸ್ತೆಯಲ್ಲಿರುವ ಯಾವ ಯಾವ ಹೋಟೇಲ್‌ಗಳಲ್ಲಿ ಬೀಫ್‌ ಬಿರಿಯಾನಿ ಹಾಗೂ ಕಬಾಬ್‌ ಗ್ರಾಹಕರಿಗೆ ನೀಡುತ್ತಿದ್ದಾರೆಂದು ಮಾಹಿತಿ ನೀಡಿ, ಅಂತಹ ಹೋಟೆಲ್‌ಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.