ಜಾಮ್‌ನಗರ ಶಾಸಕಿ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿನ್ನೆಯಷ್ಟೇ ಗುಜರಾತ್ ಸಚಿವ ಸಂಪುಟದ ಸಚಿವರು ಹೊಸ ಸಂಪುಟ ರಚನೆಯ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಪುಟ ಪುನರಚನೆಯಾಗಿದ್ದು, ರಿವಾಬಾ ಜಡೇಜಾಗೆ ಸಚಿವ ಸ್ಥಾನ ಸಿಕ್ಕಿದೆ.

ಭೂಪೇಂದ್ರ ಪಟೇಲ್ ಹೊಸ ಸಚಿವ ಸಂಪುಟದಲ್ಲಿ ಕ್ರಿಕೆಟರ್ ಪತ್ನಿಗೆ ಸಚಿವ ಸ್ಥಾನ

ಅಹ್ಮದಾಬಾದ್‌: ಜಾಮ್‌ನಗರ ಶಾಸಕಿ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಗುಜರಾತ್ ಸಚಿವ ಸಂಪುಟದ ಸಚಿವರು ಹೊಸ ಸಂಪುಟ ರಚನೆಯ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಪುಟ ಪುನರಚನೆಯಾಗಿದ್ದು, ರಿವಾಬಾ ಜಡೇಜಾಗೆ ಸಚಿವ ಸ್ಥಾನ ಸಿಕ್ಕಿದೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸಚಿವ ಸಂಪುಟದಲ್ಲಿ ಜಾಮ್‌ನಗರ ಶಾಸಕಿಯಾದ ರಿವಾಬಾ ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ರಿವಾಬಾಗೆ ಸಚಿವ ಸಂಪುಟ ಸ್ಥಾನ ಸಿಗುವ ಬಗ್ಗೆ ಈಗಾಗಲೇ ಅವರು ಕರೆ ಸ್ವೀಕರಿಸಿದ್ದು, ಅವರು ಇಂದು 11.30ರ ಸುಮಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ರವೀಂದ್ರ ಜಡೇಜಾ ಪತ್ನಿ ರಿವಾಬಾ ಈಗ ಗುಜರಾತ್ ಸಚಿವೆ

ರಿವಾಬಾ ಜಡೇಜಾ ಅವರು ತಮ್ಮ ಸಾರ್ವಜನಿಕ ಸೇವೆ ಹಾಗೂ ಮಹಿಳಾ ಸಬಲೀಕರಣ ಕಾರ್ಯಗಳಿಂದ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಜಾಮ್‌ನಗರದಿಂದ ಶಾಸಕಿಯಾಗಿದ್ದರು. ಈಗ ಅವರಿಗೆ ಗುಜರಾತ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಇದು ಜಾಮ್‌ನಗರಕ್ಕೆ ಗುಜರಾತ್‌ನ ಎಲ್ಲೆಡೆ ಇರುವ ಮಹಿಳೆಯರಿಗೆ ಹೆಮ್ಮೆಯ ಕ್ಷಣ, ಸಾರ್ವಜನಿಕ ಸೇವೆಯಲ್ಲಿ ರಿವಾಬಾ ಜಡೇಜಾ ಅವರ ಸಮರ್ಪಣೆ ಮಹತ್ವದ್ದು ಎಂದು ಬಿಜೆಪಿ ಮೂಲಗಳು ಈ ಹೊಸ ಬೆಳವಣಿಗೆಯ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರಿವಾಬಾ ಜಡೇಜಾ ಅವರು 1990ರ ನವಂಬರ್ 2 ರಂದು ಜನಿಸಿದ್ದು, ಸಾಮಾಜಿಕ ಸೇವೆಗಳಿಂದಲೇ ಹೆಸರಾಗಿರುವ ಗೌರವಾನ್ವಿತ ಕುಟುಂಬದಿಂದ ಅವರು ಬಂದಿದ್ದಾರೆ. ಅವರ ಪೋಷಕರಾದ ಹರ್‌ದೇವ್ ಸಿಂಗ್ ಸೋಲಂಕಿ ಹಾಗೂ ಪ್ರಫುಲ್ಲಾ ಸೋಲಂಕಿ ಅವರು ಅವರನ್ನು ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯದೊಂದಿಗೆ ಗೌರವಾನ್ವಿತವಾಗಿ ಬೆಳೆಸಿದ್ದಾರೆ.

ಇಂಜಿನಿಯರಿಂಗ್ ಪದವಿಧರೆಯಾಗಿರುವ ರಿವಾಬಾ

ಗುಜರಾತ್ ಅಹ್ಮದಾಬಾದ್‌ನಲ್ಲಿರುವ ಟೆಕ್ನಾಲಾಜಿಕಲ್ ವಿವಿಯಿಂದ ಇಂಜಿನಿಯರಿಂಗ್ ಪದವಿಧರೆಯಾಗಿರುವ ರಿವಾಬಾ ಅವರು ಸೇವೆ ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಇದಕ್ಕಾಗಿಯೇ ಅವರು ಮಾತ್ರುಶಕ್ತಿ ಎಂಬ ಟ್ರಸ್ಟ್‌ನ್ನು ಸ್ಥಾಪಿಸಿದ್ದಾರೆ. ಬಹಳ ತಳ ಮಟ್ಟದಿಂದ ಈ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿರುವುದರಿಂದ ಜಮಾನಗರದ ಜನರು ಅವರಿಗೆ ವಿಶೇಷ ಗೌರವ ನೀಡುತ್ತಾರೆ.ಸಕ್ರಿಯ ರಾಜಕಾರಣಕ್ಕೆ ಬರುವುದಕ್ಕೂ ಮೊದಲು ರಿವಾಬಾ ಜಡೇಜಾ ಅವರು ರಾಜಪೂರ್ ಸಮುದಾಯದ ಕರ್ಣಿ ಸೇನಾದ ಸದಸ್ಯೆಯಾಗಿದ್ದರು.2018ರಲ್ಲಿ ಪದ್ಮಾವತ್ ಸಿನಿಮಾಗೆ ಈ ಕರ್ಣಿ ಸೇನಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಸಂಸ್ಥೆಯ ಮಹಿಳಾ ವಿಭಾಗವನ್ನು ಪ್ರತಿನಿಧಿಸುವಲ್ಲಿ ರಿವಾಬಾ ಮಹತ್ವದ ಪಾತ್ರ ವಹಿಸಿದ್ದಾರೆ. ರಿವಾಬಾ ಅವರು 2019ರಲ್ಲಿ ಬಿಜೆಪಿ ಸೇರಿದ್ದರು. ಅವರ ಚಿಕ್ಕಪ್ಪ ಹರಿಸಿನ್ಹಾ ಸೋಲಂಕಿ ಅವರು ಕಾಂಗ್ರೆಸ್ ನಾಯಕರಾಗಿದ್ದು, ನಂತರದಲ್ಲಿ ಬಿಜೆಪಿ ಸೇರಿದ್ದರು. 2016ರಲ್ಲಿ ಅವರು ಭಾರತೀಯ ಕ್ರಿಕೆಟರ್ ರವೀಂದ್ರ ಜಡೇಜಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬಳು ಪುತ್ರಿ ಇದ್ದಾಳೆ.

ಪ್ರಮಾಣ ವಚನ ಸ್ವೀಕರಿಸಿದ ಇತರ ಸಚಿವರು:

ರಾಜ್ಯಪಾಲ ಆಚಾರ್ಯ ದೇವವ್ರತ್ ಎಲ್ಲಾ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಹರ್ಷ್ ಸಾಂಘ್ವಿ ಮೊದಲು ಪ್ರಮಾಣ ವಚನ ಸ್ವೀಕರಿಸಿದರು. ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಅವರ ನಂತರ, ಜಿತು ವಘಾನಿ, ನರೇಶ್ ಪಟೇಲ್, ಅರ್ಜುನ್ ಮೋಧ್ವಾಡಿಯಾ, ಪ್ರದ್ಯುಮಾನ್ ವಾಜ ಮತ್ತು ರಾಮನ್ ಸೋಲಂಕಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈಶ್ವರ್‌ಸಿನ್ಹ್ ಪಟೇಲ್, ಪ್ರಫುಲ್ ಪನ್ಸೇರಿಯಾ ಮತ್ತು ಡಾ. ಮನೀಷಾ ವಕೀಲ್ ಅವರು ಸ್ವತಂತ್ರ ಉಸ್ತುವಾರಿಯೊಂದಿಗೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕಾಂತಿ ಅಮೃತಿಯಾ, ರಮೇಶ್ ಕತಾರಾ, ದರ್ಶನ ವಘೇಲಾ, ಕೌಶಿಕ್ ವೆಕಾರಿಯಾ, ಪ್ರವೀಣ್ ಮಾಲಿ, ಜಯರಾಮ್ ಗಮಿತ್, ತ್ರಿಕಮ್ ಛಾಗಾ, ಸಂಜಯ್ ಮಹಿದಾ, ಕಮಲೇಶ್ ಪಟೇಲ್, ಪಿಸಿ ಬರಂದಾ, ಸ್ವರೂಪ್ಜಿ ಠಾಕೋರ್ ಮತ್ತು ರಿವಾಬಾ ಜಡೇಜಾ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು. ನೂತನ ಸಚಿವರು ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು. ಈಗಾಗಲೇ ಇದ್ದ ಸಚಿವರಾದ ಋಷಿಕೇಶ್ ಪಟೇಲ್, ಕಾನು ದೇಸಾಯಿ ಮತ್ತು ಕುನ್ವರ್ಜಿ ಬಾವ್ಲಿ ಅವರು ಈ ಹಿಂದೆ ರಾಜೀನಾಮೆ ನೀಡಿರಲಿಲ್ಲ ಹೀಗಾಗಿ ಪ್ರಮಾಣ ವಚನ ಸ್ವೀಕರಿಸಲಿಲ್ಲ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಹೊಸ ಸಚಿವ ಸಂಪುಟದಲ್ಲಿ 26 ಸಚಿವರಿದ್ದು, 7 ಪಾಟಿದಾರ್‌ಗಳು, 8 ಒಬಿಸಿ, 3 ಎಸ್‌ಸಿ ಮತ್ತು 4 ಎಸ್‌ಟಿ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ. ಈ ಮಂತ್ರಿ ಮಂಡಳಿಯಲ್ಲಿ ರಿವಾಬಾ ಸೇರಿದಂತೆ ಮೂವರು ಮಹಿಳೆಯರಿದ್ದಾರೆ.