ಕೋಲಾರದ ಗರುಡನಪಾಳ್ಯ ಗ್ರಾಮದ 256 ಎಕರೆ ಜಮೀನು 1953ರಿಂದಲೂ ನಮ್ಮ ಕುಟುಂಬದ ಸುಪರ್ದಿಯಲ್ಲಿದೆ. ಈ ಜಮೀನು ನಾನು ಹುಟ್ಟುವ ಮೊದಲು ಮೈಸೂರು ರಾಜರಿಂದ ನಮ್ಮ ತಾತ ಚೌಡೇಗೌಡರು ಖರೀದಿಸಿದ್ದರು.
ವಿಧಾನಸಭೆ (ಡಿ.20): ‘ಕೋಲಾರದ ಗರುಡನಪಾಳ್ಯ ಗ್ರಾಮದ 256 ಎಕರೆ ಜಮೀನು 1953ರಿಂದಲೂ ನಮ್ಮ ಕುಟುಂಬದ ಸುಪರ್ದಿಯಲ್ಲಿದೆ. ಈ ಜಮೀನು ನಾನು ಹುಟ್ಟುವ ಮೊದಲು ಮೈಸೂರು ರಾಜರಿಂದ ನಮ್ಮ ತಾತ ಚೌಡೇಗೌಡರು ಖರೀದಿಸಿದ್ದರು. ಒಂದಿಂಚೂ ಕೆರೆಯೂ ನಾವು ಒತ್ತುವರಿ ಮಾಡಿಲ್ಲ. ಯಾವುದೇ ತನಿಖೆಗೂ ಸಿದ್ಧ. ಸ್ವತಃ ವಿಪಕ್ಷದ ನಾಯಕರ ತಂಡ ಸ್ಥಳ ಪರಿಶೀಲನೆ ನಡೆಸಿದರೆ ಅದಕ್ಕೂ ಸ್ವಾಗತ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಈ ಬಗ್ಗೆ ವಿಧಾನಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಹೇಳಿಕೆ ದಾಖಲಿಸಿದ ಅವರು, ‘ಇಡೀ ಊರನ್ನು ಮೈಸೂರು ರಾಜರಿಂದ ಖರೀದಿ ಮಾಡಿದ್ದು, ಆ ಊರಿನಲ್ಲಿ (ಬೇಚಗಾರ್ ಗ್ರಾಮ) ನಮ್ಮ ಕುಟುಂಬ ಮಾತ್ರ ಇದೆ. 2001ರಲ್ಲಿ ತಾತನ ಆಸ್ತಿಯನ್ನು ವಿಭಾಗ ಮಾಡಿಕೊಂಡಿದ್ದು, 2023-24ರಲ್ಲಿ ಖಾತಾ ಮಾಡಿಸಿಕೊಂಡಿದ್ದೇವೆ. ಇಲ್ಲಿ ನಮ್ಮ ಕುಟುಂಬದಿಂದ ಒಂದಿಂಚೂ ಕೆರೆ ಜಾಗ ಒತ್ತುವರಿಯಾಗಿಲ್ಲ. ಈ ಬಗ್ಗೆ ವಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ಸಿಎಂ ತೀರ್ಮಾನಿಸುವ ತನಿಖೆಗೆ ವಹಿಸಿ. ವಿರೋಧಪಕ್ಷದ ನಾಯಕರ ನೇತೃತ್ವದಲ್ಲಿ ಶಾಸಕರು ಹಾಗೂ ಮಾಧ್ಯಮ ತಂಡ ಬಂದು ಸ್ಥಳ ಪರಿಶೀಲನೆಯನ್ನೂ ಮಾಡಬಹುದು’ ಎಂದು ಆಹ್ವಾನ ನೀಡಿದರು.
ನನ್ನ ನಿಷ್ಠುರ ಕೆಲಸ ಆಗದವರಿಂದ ವಿವಾದ: ‘ಸಾರ್ವಜನಿಕ ಜೀವನದಲ್ಲಿ ನಿಷ್ಠುರವಾಗಿ ಕೆಲಸ ಮಾಡುವಾಗ ಕೆಲ ಅಧಿಕಾರಿಗಳು, ಪ್ರತಿಪಕ್ಷದವರು ಅಥವಾ ಈ ಕಡೆ ಇರುವವರು (ಆಡಳಿತ ಪಕ್ಷ) ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಕೈಜೋಡಿಸಿರಬಹುದು. ಅದಕ್ಕೆ ಚಿಂತೆಗೀಡಾಗುವ ಅಗ್ಯತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜಮೀನಿನಲ್ಲಿರುವ ಎರಡು ಕೆರೆಗಳು ಸರ್ಕಾರದ ಹೆಸರಿನಲ್ಲೇ ಇವೆ. ಅದರ ಪಕ್ಕ 20 ಎಕರೆ ಕಲ್ಲುಗುಟ್ಟ ಜಮೀನು ಕೆರೆಯಿಂದ 15-30 ಅಡಿ ಎತ್ತರದಲ್ಲಿದೆ. ಅದು ಒಂದು ವರ್ಷ ಮಾತ್ರ ಕೆರೆ ಎಂದು ಬಂದಿದ್ದು ಉಳಿದಂತೆ ಸರ್ವೆ ದಾಖಲೆ ಸೇರಿದಂತೆ ಎಲ್ಲದರಲ್ಲೂ ಕಲ್ಲುಗುಟ್ಟ ಎಂದೇ ಇದೆ.
ಸ್ಮಶಾನ ಭೂಮಿ ಕಬಳಿಕೆ, ಸುಳ್ಳು ಆರೋಪ: ಇನ್ನು ಕೆರೆ ಕೋಡಿ ಬಳಿ 1 ಎಕರೆ ಜಮೀನು 1964ರಲ್ಲಿ ಒಂದು ವರ್ಷ ಮಾತ್ರ ಸ್ಮಶಾನ ಎಂದು ಬಂದಿದೆ. ಈ ಒಂದು ಎಕರೆಯನ್ನೇ ದೊಡ್ಡದು ಮಾಡಿ ಮೊದಲು ಸ್ಮಶಾನವಿದ್ದ ಜಾಗವನ್ನು ದಾಖಲೆ ಡಿಜಿಟಲೀಕರಣ ಬಳಿ ನಮ್ಮ ಹೆಸರಿಗೆ ಮಾಡಿಕೊಂಡಿದ್ದೇವೆಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮಗೆ ಒಂದು ಎಕರೆ ಲೆಕ್ಕವೇ ಅಲ್ಲ. ಒಂದು ಎಕರೆ ಬೇಕಾದರೆ ಬಿಟ್ಟುಕೊಡುತ್ತೇನೆ ಎಂದು ಹೇಳಿದರು. ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಒಂದು ಎಕರೆ ಬಿಟ್ಟುಕೊಡುತ್ತೇನೆ ಎಂದರೆ ತಪ್ಪು ಒಪ್ಪಿಕೊಂಡತಾಗಲಿದೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸಚಿವ ಬೈರತಿ ಸುರೇಶ್, ನೀವು 5 ಎಕರೆ ವಾಪಸು ಕೊಟ್ಟಿದ್ದೀರಿ. ಆಗ ನೀವು ತಪ್ಪು ಒಪ್ಪಿಕೊಂಡಂತಾ? ಎಂದು ಪ್ರಶ್ನಿಸಿದರು. ಅಂತಿಮವಾಗಿ ಅಶೋಕ್ ಅವರು, ತನಿಖೆ ಮಾಡಿದರೆ ಕ್ಲೀನ್‌ಚಿಟ್ ಸಿಗುತ್ತದೆ. ತನಿಖೆಗೆ ಒಪ್ಪಿಸಿ, ನಾವು ಬಂದು ಸ್ಥಳ ಪರಿಶೀಲಿಸುವ ಅಗತ್ಯವಿಲ್ಲ. ಸ್ಪೀಕರ್ ಅವರೇ ನಿರ್ಧಾರ ಮಾಡಲಿ ಎಂದರು.
ಇದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟ್ರಸ್ಟ್‌ಗೆ ಸೇರಿದ ಜಮೀನು. ಇದರ ವ್ಯವಹಾರವನ್ನು ಮಹಾರಾಜರ ಕಾರ್ಯದರ್ಶಿ ನಾರಾಯಣ ಸ್ವಾಮಿ ನೋಡಿಕೊಳ್ಳುತ್ತಿದ್ದರು. ಅದನ್ನು ನಾರಾಯಣ ಸ್ವಾಮಿ ಅವರು 1953ರಲ್ಲಿ ನಮ್ಮ ತಾತ ಚೌಡೇಗೌಡರಿಗೆ 10 ವರ್ಷಗಳ ಭೋಗ್ಯಕ್ಕೆ ನೀಡಿದ್ದರು. ಭೋಗ್ಯದ ಅವಧಿ ಮುಗಿಯುವುದಕ್ಕೂ ಮೊದಲೇ ರಾಜಮನೆತನದವರು ಆ ಭೂಮಿಯನ್ನು ಮಾರಾಟಕ್ಕೆ ಇಟ್ಟರು. ಚೌಡೇಗೌಡರು ಆ ಜಮೀನು ಖರೀದಿಸುವುದಾಗಿ ಹೇಳಿದರೂ, ಸರಿಯಾದ ಸಮಯಕ್ಕೆ ಹಣ ಹೊಂದಿಸಲಾಗಲಿಲ್ಲ. ಆದ್ದರಿಂದ, ಜಮೀನನ್ನು 1959ರಲ್ಲಿ ಅಬೀಬುಲ್ಲಾ ಖಾನ್ ಅವರಿಗೆ ಮಾರಿದರು. ಅದರ ವಿರುದ್ಧ ನಮ್ಮ ತಾತ ಕೋಲಾರ ವಿಶೇಷ ಜಿಲ್ಲಾಧಿಕಾರಿ ಬಳಿ ದೂರು ದಾಖಲಿಸಿದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಅಬೀಬುಲ್ಲಾ ಖಾನ್ ಅವರೇ ಭೂಮಿ ಮಾಲೀಕರು ಎಂದು ಆದೇಶ ನೀಡಿದ್ದರು.
ಕೋರ್ಟ್‌ನಲ್ಲಿಯೂ ವಿವಾದ ಇತ್ಯರ್ಥ
ಜಿಲ್ಲಾಧಿಕಾರಿಯ ಆದೇಶದಲ್ಲಿ ‘ಗರಡುಪಾಳ್ಯ ಎಂಬ ಇಡೀ ಹಳ್ಳಿಯು ಒಬ್ಬ ಮಾಲೀಕನಿಗೆ ಸೇರಿದ್ದು. ಯಾರೂ ವಾಸ ಮಾಡದೇ ಇರುವ ‘ಬೇಚರಾಗ್’ ಗ್ರಾಮ. ಈ ಹಳ್ಳಿಯು ಒಡೆಯರ್ ಟ್ರಸ್ಟ್ ಸೇರಿದ್ದಾಗಿದ್ದು, 1953ರಲ್ಲಿ ಇಡೀ ಹಳ್ಳಿಯನ್ನು ರಾಜಮನೆತನವು ಭೋಗ್ಯಕ್ಕೆ ನೀಡಿತ್ತು. ಬಳಿಕ, ಅಬೀಬುಲ್ಲಾ ಖಾನ್ ಅವರಿಗೆ 47,601 ರು.ಗೆ ಮಾರಾಟ ಮಾಡಿದೆ’ ಎಂದು ಬರೆದಿದ್ದರು. ಬಳಿಕ, ಈ ಆದೇಶವನ್ನು ಪ್ರಶ್ನಿಸಿ ಮೈಸೂರು ಮೇಲ್ಮನವಿ ನ್ಯಾಯಾಧೀಕರಣಕ್ಕೆ ಚೌಡೇಗೌಡರು ಮೇಲ್ಮನವಿ ದಾಖಲಿಸಿದರು. ಆಗ, ಅಬೀಬುಲ್ಲಾ ಖಾನ್ ಅವರು ಒಪ್ಪಂದಕ್ಕೆ ಬಂದರು. ಗ್ರಾಮದ ಸಂಪೂರ್ಣ 256 ಎಕರೆ ಒಡೆತನವನ್ನು ಚೌಡೇಗೌಡರಿಗೆ ಬಿಟ್ಟುಕೊಟ್ಟರು ಎಂದು ಕೃಷ್ಣಬೈರೇಗೌಡ ವಿವರಿಸಿದರು.


