ಪ್ರಧಾನ ಮಂತ್ರಿಗಳು ಅಮೃಥ ಕಾಲದ ಈ ಮೊದಲ ಬಜೆಟ್‌ ಸಮೃದ್ಧಿಯ ಆಕಾಂಕ್ಷೆ ಹೊತ್ತಿರುವ ಸಮಾಜದ, ರೈತರ ಮತ್ತು ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, ಅಭಿವೃದ್ಧಿ ಭಾರತ ಕಟ್ಟಲು ಒಂದು ಭದ್ರ ಬುನಾದಿ ಹಾಕುವ ಬಜೆಟ್‌ ಎಂದು ಹೇಳಿರುವುದು ಬಹಿರಂಗ ಮೋಸದಿಂದ ಕೂಡಿದ್ದಾಗಿದೆ: ಕೆ.ನೀಲಾ 

ಕಲಬುರಗಿ(ಫೆ.03):  ಕೇಂದ್ರ ಬಜೆಟ್‌ ಜನವಿರೋಧಿಯಾಗಿದ್ದು, ಕಾರ್ಪೋರೆಟ್‌ ಪರ ಧೋರಣೆ ಹೊಂದಿದ್ದು ಜನತೆಯ ಪರ ಎಂಬ ಭ್ರಮೆ ಹುಟ್ಟಿಸಲು ನಡೆಸಿದ ಕಸರತ್ತಾಗಿದೆ. ನರೇಗಾ, ಆಹಾರ ಸಬ್ಸಿಡಿ, ಗ್ರಾಮೀಣ ಅಭಿವೃದ್ಧಿಗೆ ತೀವ್ರ ಹಣ ಕಡಿತ (ಶೇ.33%) ಮಾಡಿದ್ದಾರೆಂದು ಸಿಪಿಐ (ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ನೀಲಾ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಧಾನ ಮಂತ್ರಿಗಳು ಅಮೃಥ ಕಾಲದ ಈ ಮೊದಲ ಬಜೆಟ್‌ ಸಮೃದ್ಧಿಯ ಆಕಾಂಕ್ಷೆ ಹೊತ್ತಿರುವ ಸಮಾಜದ, ರೈತರ ಮತ್ತು ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, ಅಭಿವೃದ್ಧಿ ಭಾರತ ಕಟ್ಟಲು ಒಂದು ಭದ್ರ ಬುನಾದಿ ಹಾಕುವ ಬಜೆಟ್‌ ಎಂದು ಹೇಳಿರುವುದು ಬಹಿರಂಗ ಮೋಸದಿಂದ ಕೂಡಿದ್ದಾಗಿದೆ. ಹಣಕಾಸು ಕೊರತೆ ತಗ್ಗಿಸಲು ಸರಕಾರದ ಖರ್ಚುಗಳಲ್ಲಿ ಕಡಿತ ಮಾಡಿದ್ದು, ಇನ್ನೊಂದೆಡೆ ಶ್ರೀಮಂತರಿಗೆ ಇನ್ನಷ್ಟುತೆರಿಗೆ ರಿಯಾಯ್ತಿಗಳನ್ನು ನೀಡಲಾಗಿದೆ ಎಂದಿದ್ದಾರೆ.

ಕೇಂದ್ರ ಬಿಜೆಟ್‌ನಲ್ಲಿ ಕನ್ನಡಿಗರಿಗೆ ಮೋಸ: ಪ್ರಿಯಾಂಕ್‌ ಖರ್ಗೆ

ಗ್ರಾಮೀಣ ಬಡವರಿಗೆ ಕೋವಿಡ್‌ ಕಾಲದಲ್ಲೂ ತುಸುವಾದರೂ ಪರಿಹಾರ ನೀಡಿದ್ದ ಜಗತ್ತಿನ ಅತಿ ದೊಡ್ಡ ಉದ್ಯೋಗ ಯೋಜನೆಯೆನಿಸಿದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನೀಡಿರುವ ಹಣದಲ್ಲಿ ಶೇ.33ರಷ್ಟುಕಡಿತ ಮಾಡಿದೆ. ಕಳೆದ ಬಜೆಟ್‌ನಲ್ಲಿ ಇದಕ್ಕೆ ರು.73 ಸಾವಿರ ಕೋಟಿ ನೀಡಲಾಗಿತ್ತು. 2022-23ರ ಪರಿಷ್ಕೃತ ಅಂದಾಜಿನ ಪ್ರಕಾರ ಅದು 89,400 ರು. ಆದರೂ 2023-24ರ ಬಜೆಟ್‌ನಲ್ಲಿ ಅದನ್ನು 60 ಸಾವಿರ ಕೋಟಿಗೆ ಇಳಿಸಲಾಗಿದೆ. ಇದು 2020-21ರ ಬಜೆಟ್‌ ನೀಡಿಕೆಗಿಂತಲೂ ಕಡಿಮೆ. ಇದು ಅತ್ಯಂತ ಜನವಿರೋಧಿಯಾದ ನಡೆಯಾಗಿದೆ ಎಂದೂ ನೀಲಾ ಹೇಳಿದ್ದಾರೆ.

ಆಹಾರ ಸಬ್ಸಿಡಿಗಳಲ್ಲೂ ಶೇ.31ರಷ್ಟುಕಡಿತವಾಗಿದೆ. ಕಳೆದ ವರ್ಷದ ಬಜೆಟ್‌ ಕೂಡ 2,06,831 ಕೋಟಿ ರೂ. ಕೊಟ್ಟಿತ್ತು. ಅದು ಸಾಲದಾಗಿ, 2023 ರಪರಿಷ್ಕೃತ ಬಜೆಟ್‌ನ ಪ್ರಕಾರ ಅದು 2,87,194 ಕೋಟಿ ರು. ಆಗಿದೆ. ಆದರೂ ಈ ಬಜೆಟ್‌ನಲ್ಲಿ ಅದನ್ನು 1,97, 350 ಕೋಟಿ ರು.ಗೆ ಇಳಿಸಲಾಗಿದೆ. ಐಸಿಡಿಎಸ್‌ ಯೋಜನಾ ಕಾರ್ಯಕರ್ತರಿಗೆ ಈಗಲೂ ನೀಡಲಾಗುತ್ತಿರುವ ಅಲ್ಪ ಸಂಭಾವನೆಯಲ್ಲಿ ಯಾವುದೇ ಏರಿಕೆ ಕಾಣುತ್ತಿಲ್ಲ.

ಕಲಬುರಗಿ: ಕಲ್ಯಾಣದ ಬೇಡಿಕೆಗಳಿಗೆ ದೊರಕದ ಸ್ಪಂದನೆ

ಗ್ರಾಮೀಣ ಅಭಿವೃದ್ಧಿಗೆ ಕಳೆದ ವರ್ಷದ ಪರಿಷ್ಕೃತ ಬಜೆಟ್‌ 2,43,317 ಕೋಟಿ ರು. ನೀಡಿತ್ತು. ಈ ಬಜೆಟ್‌ನಲ್ಲಿ ಅದನ್ನೂ 2,38,204 ಕೋಟಿ ರು.ಗೆ ಇಳಿಸಲಾಗಿದೆ. ಪ್ರಧಾನ್‌ ಮಂತ್ರಿ ಪೋಷಣ್‌ ಯೋಜನೆ ಎಂಬ ಮಧ್ಯಾಹ್ನದ ಊಟ ಯೋಜನೆಗೆ ಕಳೆದ ಬಜೆಟ್‌ನ ಪರಿಷ್ಕೃತ ಅಂದಾಜು 12,800 ಕೊಟಿ ರು. ಇದ್ದರೆ ಈ ಬಜೆಟ್‌ ನೀಡಿರುವುದು 11, 600 ಕೋಟಿ ರುಪಾಯಿ ಮಾತ್ರ.

ನಮ್ಮ ಜನಸಂಖ್ಯೆಯ ಬಹುಪಾಲು ಜನರ ಜೀವನೋಪಾಯದ ಮೇಲೆ ಮತ್ತಷ್ಟುದಾಳಿಗಳನ್ನು ಹೆಚ್ಚಿಸುವ ಇಂತಹ ಬಜೆಟ್‌ನ್ನು ಜನಕೇಂದ್ರಿತ ಬಜೆಟ್‌ ಎಂದು ಕರೆಯಲು ಸಾಧ್ಯವೇ? ಈ ಬಜೆಟ್‌ ರಾಜ್ಯ ಸರ್ಕಾರಗಳಿಗೆ ಸಂಪನ್ಮೂಲ ವರ್ಗಾವಣೆಯ ಕತ್ತನ್ನು ಹಿಸುಕುವ ಮೂಲಕ ಹಣಕಾಸು ಒಕ್ಕೂಟ ತತ್ವದ ಮೇಲೆ ಮತ್ತಷ್ಟು ದಾಳಿಗಳನ್ನು ಹೇರುವುದನ್ನು ಮುಂದುವರೆಸಿದೆ ಎಂದು ಕೆ. ನೀಲಾ ಬಜೆಟ್‌ನ್ನು ಖಂಡಿಸಿದ್ದಾರೆ.