ಬಿಜೆಪಿ ಸರ್ಕಾರದ ಭ್ರಷ್ಟಚಾರ ಹಗರಣ; 224 ಕ್ಷೇತ್ರದ ಜನರಿಗೂ ತಿಳಿಸಲಾಗುವುದು: ಡಿ.ಕೆ.ಶಿವಕುಮಾರ್
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣವನ್ನು ರಾಜ್ಯದ 224 ಕ್ಷೇತ್ರದ ಜನರಿಗೂ ತಿಳಿಯಪಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದರು.
ಮದ್ದೂರು (ಸೆ.15) : ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣವನ್ನು ರಾಜ್ಯದ 224 ಕ್ಷೇತ್ರದ ಜನರಿಗೂ ತಿಳಿಯಪಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದರು. ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಮದ್ದೂರು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟುಕಮೀಷನ್ ಹಗರಣ ಸೇರಿದಂತೆ ಹಲವು ಸರಣಿ ಹಗರಣಗಳು ನಡೆದಿವೆ. ಈ ಹಗರಣಗಳನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸಿದೆ ಎಂದು ಕಿಡಿಕಾರಿದರು.
ಬಿಜೆಪಿ 40% ಕಮೀಷನ್ ವಿರುದ್ಧ ಕಾಂಗ್ರೆಸ್ ಅಭಿಯಾನ; ಹಾಡು, ನೋಟು ಬಿಡುಗಡೆ
ಸರ್ಕಾರದ ಹಗರಣದ ಕುರಿತು ಕೆಪಿಸಿಸಿ ವಿಡಿಯೋ ಹಾಗೂ ಲಂಚದ ಕಾರ್ಡ್ ಬಿಡುಗಡೆ ಮಾಡಿದೆ. ಎಲ್ಲ ವಿಷಯಗಳನ್ನು ರಾಜ್ಯದ 224 ಕ್ಷೇತ್ರಗಳ ಜನರಿಗೆ ಅಭಿಯಾನದ ಮೂಲಕ ಹಗರಣಗಳ ಬಗ್ಗೆ ತಿಳಿಸುವ ಕೆಲಸ ಮಾಡಲಾಗುವುದು. ಪಕ್ಷದ ಮುಖಂಡರು, ಕಾರ್ಯಕರ್ತರು ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗೂ ತಲುಪಿಸುವ ಕಾರ್ಯದಲ್ಲಿ ತೊಡಗಬೇಕು. ಬಿಜೆಪಿ ನಾಯಕರು, ಸರ್ಕಾರ ಹಗರಣಗಳನ್ನು ಮುಚ್ಚಿ ಹಾಕಲು, ಜನರನ್ನು ದಾರಿ ತಪ್ಪಿಸಲು ಜನೋತ್ಸವ ಸಮಾವೇಶ ನಡೆಸುತ್ತಿದೆ ಎಂದು ದೂರಿದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಂಸದೆ ಸುಮಲತಾ ಕಮೀಷನ್ ಪಡೆದಿದ್ದಾರೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ ಇಬ್ಬರು ನಾಯಕರು ಬೇಕಾದರೆ ಆಣೆ-ಪ್ರಮಾಣ ಮಾಡಿಕೊಳ್ಳಲಿ, ಇದರಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದರು.
ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗೋ ಪ್ರಶ್ನೆನೇ ಇಲ್ಲ: ಸಿಎಂ ಬೊಮ್ಮಾಯಿ
ಈ ವೇಳೆ ಎಐಸಿಸಿ ಕಾರ್ಯದರ್ಶಿ ರೋಜಿಜಾನ್, ಹನೂರು ಕ್ಷೇತ್ರದ ಶಾಸಕ ನರೇಂದ್ರ, ಕೆಪಿಸಿಸಿ ಸದಸ್ಯ ಗುರುಚರಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಕಾಂಗ್ರೆಸ್ ವಕ್ತಾರ ಎಂ.ಪಿ. ಅಮರಬಾಬು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್‌ಕುಮಾರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಪುರಸಭಾ ಮಾಜಿ ಸದಸ್ಯ ಸಿ.ಸಿ.ಮಹೇಶ್, ಮುಖಂಡರಾದ ಪ್ರಶಾಂತ್, ಯೋಗೇಶ್, ಅರುಣ, ಕುಮಾರ್, ಆಸೀಫ್ ಹಲವರು ಇದ್ದರು.