ಬಿಜೆಪಿ 40% ಕಮೀಷನ್ ವಿರುದ್ಧ ಕಾಂಗ್ರೆಸ್ ಅಭಿಯಾನ; ಹಾಡು, ನೋಟು ಬಿಡುಗಡೆ
BJP 40% commission song: ಕರ್ನಾಟಕ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪದ ಹಾಡು ಬಿಡುಗಡೆ ಮಾಡಿದ್ದು, ಬಿಜೆಪಿ ಆಡಳಿತಾವಧಿಯಲ್ಲಿ ಕೇಳಿ ಬಂದ ಆರೋಪಗಳನ್ನು ಪಟ್ಟಿ ಮಾಡಿದೆ. ನಲವತ್ತು ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಪಟ್ಟಿ ಮಾಡಿದೆ.
ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಬಿಜೆಪಿ ಪ್ರತೀ ಟೆಂಡರ್‌ಗಳಿಗೂ 40% ಕಮೀಷನ್ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಲವು ಗುತ್ತಿಗೆದಾರರು ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಜತೆಗೆ ಕರ್ನಾಟಕ ರಾಜ್ಯ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿನ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳು ಬಿಜೆಪಿ ವಿರುದ್ಧ ಕೇಳಿ ಬಂದಿದೆ. ಈಗ ಬಿಜೆಪಿ ಭ್ರಷ್ಟಾಚಾರ ಆರೋಪಗಳ ಸಂಬಂಧ ಕಾಂಗ್ರೆಸ್ ಅಭಿಯಾನ ಆರಂಭಿಸಿದೆ. ಭ್ರಷ್ಟಾಚಾರದ ಸರ್ಕಾರ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ ಕೆ ಸುಧಾಕರ್, ಡಾ ಸಿ ಅಶ್ವತ್ಥನಾರಾಯಣ್ ಮತ್ತಿತರ ಬಿಜೆಪಿ ನಾಯಕರ ಭಾವಚಿತ್ರವಿರುವ ನೋಟುಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ನೋಟಿನಲ್ಲಿ 40% ಕಮೀಷನ್ ಎಂದು ಕೂಡ ಹಾಕಲಾಗಿದೆ. ಹಾಡಿನಲ್ಲಿ ಪಿಎಸ್‌ಐ ಹಗರಣ, ಗುತ್ತಿಗೆದಾರರಿಂದ ಕಮೀಷನ್, ಮೊಟ್ಟೆ ಹಗರಣ, ಕೋವಿಡ್ ಸಂದರ್ಭದಲ್ಲಿನ ಹಗರಣಗಳು ಸೇರಿದಂತೆ ಬಿಜೆಪಿ ವಿರುದ್ಧ ಇರುವ ಎಲ್ಲಾ ಆರೋಪಗಳ ಕುರಿತೂ ಹೇಳಲಾಗಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಕರ್ನಾಟಕದ ಇಮೇಜ್ ಹಾಳಾಗಿದೆ: ಎಂಬಿಪಾ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಗುತ್ತಿಗೆದಾರ ಸಂತೋಷ 40% ಕಮೀಷನ್ ಕೊಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ನಾವು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡಿದ್ದೆವು. ಸಚಿವರಾಗಿದ್ದ ಈಶ್ವರಪ್ಪ ಅವರನ್ನು ಬಂಧಿಸಬೇಕಾಗಿತ್ತು. ಕೆಂಪಣ್ಣ ಅವರು ಸರ್ಕಾರದ ಮೇಲೆ ನಿರಂತರ ಆರೋಪ ಮಾಡಿದ್ದಾರೆ. ಕೆಲವರು ಹೆದರಿ ಸತ್ಯ ಹೇಳಲು ಮುಂದಾಗ್ತಿಲ್ಲ. ಅದಕ್ಕೆ ನಾವು ಒಂದು ಹೆಲ್ಪ್ ಲೈನ್ ಮಾಡಿದ್ದೇವೆ. ಸರ್ಕಾರದ ವಿರುದ್ಧ ಈ ಹೆಲ್ಪ್ ಲೈನ್ ಗೆ ಮಾಹಿತಿ ಕೊಡಬಹುದು. ಹೆಲ್ಪ್ ಲೈನ್ ಮೂಲಕ ಜನಜಾಗೃತಿ ಮಾಡೋದೇ ನಮ್ಮ ಉದ್ದೇಶ. ಈ ಸರ್ಕಾರದ ಕಿರುಕುಳ ದಿಂದ ಜನರನ್ನು, ಗುತ್ತಿಗೆದಾರರ ರನ್ನು ಮುಕ್ತ ಮಾಡುವುದು ಕಾಂಗ್ರೆಸ್ ಉದ್ದೇಶ," ಎಂದು ಸದ್ದರಾಮಯ್ಯ ಅಭಿಯಾನದ ಉದ್ದೇಶದ ಬಗ್ಗೆ ಮಾತನಾಡಿದರು.
ಇದನ್ನೂ ಓದಿ: ಬಿಜೆಪಿಗರಿಗೆ ಸುಳ್ಳನ್ನು ನಿಜ ಮಾಡೋದು, ನಿಜವನ್ನು ಸುಳ್ಳು ಮಾಡೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ: ಜಾರಕಿಹೊಳಿ
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, "ಕರ್ನಾಟಕ ಈಗ ಕರಪ್ಶನ್ ಕ್ಯಾಪಿಟಲ್ ಆಫ್ ಇಂಡಿಯಾ ಆಗಿದೆ. ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಬೊಮ್ಮಾಯಿ ಸರ್ಕಾರದ ರೇಟ್ ಕಾರ್ಡ್ ಹಾಕಿ. ಯಾವ ಯೋಜನೆ...? ಯಾವುದಕ್ಕೆ ಎಷ್ಟೆಷ್ಟು ರೇಟ್ ಅಂತ ಹಾಕಿ. 30% ಟ್ಯಾಕ್ಸ್ ಕಟ್ಟುವುದು ಬೆಂಗಳೂರಿನಿಂದ. ಸಬ್ ಅರ್ಬನ್ ರೈಲಿನ ದೊಡ್ಡ ಘೋಷಣೆ ಮಾಡಿದಿರಿ ಈಗ ಅದು ಏನಾಗಿದೆ..? ಬರೀ ಭೂಮಿ ಪೂಜೆಯಲ್ಲೇ ಉಳಿದುಕೊಂಡಿದೆ ಹೊರತು ಡಬಲ್ ಇಂಜಿನ್ ಸರ್ಕಾರಕ್ಕೆ ಕೆಲಸ ಮಾಡಕ್ಕಾಗ್ತಿಲ್ಲ. ಯಾವುದಾದರೂ ರಾಷ್ಟ್ರೀಯ ಯೋಜನೆ ಮಾಡಿದ್ದೀರಾ? ನೀರಾವರಿ ಯೋಜನೆ ಮಾಡಿದ್ದೀರಾ? ಎಲ್ಲದಕ್ಕೂ ಎಲ್ಲ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಆಗಿಬಿಟ್ಟಿದೆ. ಪ್ರತಿದಿನ ನಾವು ನಿಮಗೆ ಕೇಳ್ತಿದ್ದೇವೆ ಉತ್ತರ ಇದೆಯಾ ಅಂತ...? ನಿಮ್ಮ ಹತ್ರ ನುಡಿದಂತೆ ನಡೆಯೋದಕ್ಕೆ ಆಗ್ತಿಲ್ಲ. ನಮ್ಮ ಪ್ರಶ್ನೆಗಳಿಗೆ ಒಂದಕ್ಕೂ ನಿಮ್ಮತ್ರ ಉತ್ತರ ಕೊಡೋದಕ್ಕಾಗ್ತಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಲು ಒದ್ದೆಯಾಗತ್ತೆ ಅಂತ ಬೋಟ್, ವಯಸ್ಸಾಯ್ತು ಯಾವ ಆಟನೂ ಆಡೋಕಾಗಲ್ಲ ಎಂದ ಸಿದ್ದರಾಮಯ್ಯ
ಮುಂದುವರೆದ ಅವರು, "ಅಶೋಕ್ ಎಂಬುವವರು ವಿಸಿ ಆಗಬೇಕು ಅಂತ ದುಡ್ಡು ಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಬರೀ ಅಧಿಕಾರಿಯನ್ನು ಒಳಗೆ ಹಾಕಿದ್ದೀರಿ. ಸರ್ಕಾರದ ಮಂತ್ರಿ ಭಾಗಿಯಾಗಿಲ್ಲ ಅಂದ್ರೆ ಯಾವ ಅಧಿಕಾರಿಗೆ ಇಷ್ಟು ಧೈರ್ಯ ಬರುತ್ತದೆ? ಪಿಎಸ್ಐ ಕೇಸಲ್ಲಿ ನಂಬರ್ 1 ರ್ಯಾಂಕ್ ಬಂದವರೂ ಅರೆಸ್ಟ್ ಆಗಿದ್ದಾರೆ. ಕನಕಗಿರಿ ಎಂಎಲ್ಎ 15 ಲಕ್ಷ ತಾನೇ ಸರ್ಕಾರಕ್ಕೆ ಕೊಟ್ಟಿದ್ದೀನಿ, ನಂದೇ ವಾಯ್ಸ್ ಅಂತ ಹೇಳಿದ. ಪ್ರಿಯಾಂಕ ಖರ್ಗೆ ನಮ್ಮ ಪಕ್ಷದ ಪರವಾಗಿ ಪ್ತಸ್ತಾಪ ಮಾಡಿದರೆ ನೊಟೀಸ್ ಕೊಟ್ಟು ಹೆದರಿಸ್ತೀರಾ...? 2,500 ಕೋಟಿ ಬಗ್ಗೆ ಯತ್ನಾಳ್ ಹೇಳಿದ್ರಲ್ಲ ಯಾಕೆ ಅವರನ್ನು ನೊಟೀಸ್ ಕೊಟ್ಟು ಕರೆಯಲಿಲ್ಲ..? ಮಂಚದ ಕೇಸಲ್ಲಿ ಒಬ್ಬ ಮಾಜಿ ಶಾಸಕ 15 ಲಕ್ಷ ಕೊಟ್ಟೆ ಅಂತ ಹೇಳಿದ ಯಾಕೆ ಕರೆಯಲಿಲ್ಲ ಅವನನ್ನು...? ನಿಮ್ಮ ಸರ್ಕಾರ ಏನು ಮಾಡ್ತಾ ಇತ್ತು....? ನಮಗೆ ಮರ್ಯಾದೆ ಹೋಗ್ತಾ ಇದೆ ಇವರಿಂದ," ಎಂದು ಬಿಜೆಪಿ ವಿರುದ್ಧ ಸಿಟ್ಟು ಹೊರಹಾಕಿದರು.