Asianet Suvarna News Asianet Suvarna News

'ನೇತಾಜಿ ಸುಭಾಷ್ ಚಂದ್ರ ಬೋಸ್ ಹತ್ಯೆ ಮಾಡಿಸಿದ್ದು ಗಾಂಧೀಜಿ' ಬಿಜೆಪಿ ನಾಯಕನ ವಿವಾದಿತ ಹೇಳಿಕೆ!

ತಮ್ಮ ಹೇಳಿಕೆ ವಿವಾದವಾಗುವ ಲಕ್ಷಣವನ್ನು ಅರಿತ ರಾಜಸ್ಥಾನದ ಜುಂಜುನ ಬಿಜೆಪಿ ಸಂಸದ ನರೇಂದ್ರ ಖಿಚಡ್‌ ಸ್ಪಷ್ಟನೆಯನ್ನು ನೀಡಿದ್ದು, ನಾನು ಗಾಂಧೀಜಿಯನ್ನು ಗೌರವಿಸುತ್ತೇನೆ ಎಂದು ಹೇಳಿದ್ದಲ್ಲದೆ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Controversial statement of BJP MP Narendra Kumar khichar said mahatma Gandhiji had killed Subhash Chandra Bose san
Author
Bengaluru, First Published Jun 27, 2022, 4:45 PM IST

ಜೈಪುರ (ಜೂನ್ 27): ರಾಜಸ್ಥಾನದ (Rajasthan) ಜುಂಜುವಿನ (Jhunjhunu) ಬಿಜೆಪಿ ಸಂಸದ ನರೇಂದ್ರ ಕುಮಾರ್ ಕಿಚಾರ್ (Narendra Kumar khichar) ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್( Subhash Chandra Bose) ಅವರ ಹತ್ಯೆ ಮಾಡಿಸಿದ್ದು ಮಹಾತ್ಮ ಗಾಂಧೀಜಿ (mahatma Gandhiji) ಎಂದು ಹೇಳಿರುವ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಜೂನ್ 25 ರಂದು ಸಂಸದ ನರೇಂದ್ರ ಕಿಚಾರ್ ಅವರು ಬಾಕ್ರಾ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಷಿಯೋಲಾಲ್ ಕಿಚಾರ್  (Sheolal Khichad) ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ತೆರಳಿದ್ದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಭಾಷ್ ಚಂದ್ರ ಬೋಸ್ ಅವರ ಹತ್ಯೆಯನ್ನು ಮಹಾತ್ಮ ಗಾಂಧೀಜಿಯವರು ಮಾಡಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಾಧ್ಯತೆ ಇದ್ದ ಕಾರಣದಿಂದ ದೇಶಕ್ಕೆ ಒಬ್ಬರೇ ಪ್ರಧಾನಿಯಾಗಬೇಕಿತ್ತು. ಗಾಂಧಿಯವರು ಸುಭಾಷ್ ಚಂದ್ರ ಬೋಸ್ ಅವರನ್ನು ಚುನಾವಣೆಗೆ ಒಪ್ಪಿಸಿದರು ಬಳಿಕ ಅವರನ್ನೇ ಕೊಲ್ಲಲಾಯಿತು. ಇದು ರಾಜರ ಆಳ್ವಿಕೆಯ ಕಾಲದಿಂದಲೂ ಇದ್ದ ಪದ್ದತಿ ಅಂದು ಅಪ್ಪನನ್ನೇ ಕೊಂದು ಮಗ ಸಾಮ್ರಾಟನಾಗುತ್ತಿದ್ದ. ಚಕ್ರವರ್ತಿಗಳ ಕಾಲದಿಂದಲೂ ನಡೆದುಕೊಂಡು ಬಂದಿತ್ತು. ನೇತಾಜಿಸ ಸುಭಾಷ್ ಚಂದ್ರ ಬೋಸ್ ಅವರ ಕಾಲದಲ್ಲೂ ಇದೇ ರೀತಿಯ ಸಂಪ್ರದಾಯಗಳಿದ್ದವು ಎಂದು ಹೇಳಿದ್ದಾರೆ.


ಸಂಸದ ಕಿಚಾರ್‌ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಚ್ಚುತ್ತಿರುವ ವಿವಾದವನ್ನು ಕಂಡು ಕಿಚಾರ್ ಸ್ಪಷ್ಟನೆ ಕೂಡ ನೀಡಿದ್ದಾರೆ. ನನ್ನ ಮಾತಿನ ಉದ್ದೇಶ ಅದಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ, ಸುಭಾಷ್ ಚಂದ್ರ ಬೋಸ್ ಅವರು ದೇಶದ ಮೊದಲ ಪ್ರಧಾನಮಂತ್ರಿಯಾಗಬೇಕಿತ್ತು. ಹಾಗೇನಾದರೂ ಗಾಂಧೀಜಿ ಅವರು ಮನಸ್ಸು ಮಾಡಿದ್ದರೆ, ಬಹುಶಃ ಸುಭಾಷ್ ಚಂದ್ರ ಬೋಸ್ ಪ್ರಧಾನಿ ಆಗಿರುತ್ತಿದ್ದರು ಎಂದು ಹೇಳುವ ಉದ್ದೇಶ ನನ್ನದಾಗಿತ್ತು ಎಂದಿದ್ದಾರೆ.

ಸುಭಾಷ್ ಚಂದ್ರ ಬೋಸ್ ಪ್ರಧಾನಿಯಾಗದೇ ಇರಲು ಮಹಾತ್ಮ ಗಾಂಧೀಜಿ ಅವರೇ ಕಾರಣ ಎಂದು ಹೇಳಲು ನಾನು ಪ್ರಯತ್ನಿಸಿದ್ದೆ. ಗಾಂಧಿಯವರು ಸುಭಾಷ್ ಚಂದ್ರ ಬೋಸ್ ಅವರನ್ನು ರಾಜಕೀಯವಾಗಿ ಕೊಂದರು. ನಿಜವಾಗಿಯೂ ಕೊಂದಿಲ್ಲ. ಅದೇ ವೇಳೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ನಾನು ಗಾಂಧೀಜಿಯವರ ಮಾರ್ಗವನ್ನು ಅನುಸರಿಸುವ ವ್ಯಕ್ತಿ. ಅವರ ಫೋಟೋವನ್ನು ಕಚೇರಿಯಲ್ಲಿ ಇರಿಸಿಕೊಂಡಿದ್ದೇನೆ ಎಂದಿದ್ದಾರೆ.

Exclusive Interview ಚುನಾವಣಾ ಹೇಳಿಕೆಗೆ ಮಹತ್ವ ಬೇಡ, ಯೋಗಿ ವಿವಾದಿತ ಹೇಳಿಕೆಗೆ ಕೇರಳ ರಾಜ್ಯಪಾಲ ಖಡಕ್ ಉತ್ತರ!

ರಾಷ್ಟ್ರಪತಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ: ನರೇಂದ್ರ ಕಿಚಾರ್ ಅವರ ಹೇಳಿಕೆಯ ಬೆನ್ನಲ್ಲಿಯೇ ಮಾಜಿ ಸಚಿವ ಹಾಗೂ ಸಂಗೋಡ್‌ನ ಕಾಂಗ್ರೆಸ್ ಶಾಸಕ ಭರತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನರೇಂದ್ರ ಕಿಚಾರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರವನ್ನ ಬರೆದಿದ್ದಾರೆ. ಇಂಥ ಹೇಳಿಕೆಗಳನ್ನು ನೀಡಿದ್ದ ಕಾರಣಕ್ಕಾಗಿ ನರೇಂದ್ರ ಕಿಚಾರ್ ಅವರನ್ನು ಸಂಸತ್ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನರೇಂದ್ರ ಕಿಚಾರ್ ಅವರ ಹೇಳಿಕೆಗೆ ಸಂಬಂಧಿಸಿ ರಾಷ್ಟ್ರದ ಹಿತದೃಷ್ಟಿಯಲ್ಲಿ ದೇಶದ್ರೋಹದ ಪ್ರಕರಣವನ್ನೂ ದಾಖಲಿಸಲಾಗುವುದು ಎಂದು ಭರತ್ ಸಿಂಗ್ ಹೇಳಿದ್ದಾರೆ.

ಗೋವಾದಲ್ಲಿ ಕನ್ನಡಿಗರ ದಾದಾಗಿರಿ ಪ್ರದರ್ಶನ: ತುಕಾರಾಂ ಪರಬ್ ವಿವಾದಿತ ಹೇಳಿಕೆ

ಹಾಗಂತ ನರೇಂದ್ರ ಕಿಚಾರ್ ಅವರು ಇಂಥ ಮಾತುಗಳನ್ನಾಡುತ್ತಿರುವುದು ಇದು ಮೊದಲೇನಲ್ಲ. ಕಳೆದ ಏಪ್ರಿಲ್‌ನಲ್ಲಿ ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಬಿಜೆಪಿಯನ್ನು ರಾಜ್ಯದಲ್ಲಿ ಸೋಲಿಸಬೇಕು ಎಂದು ಮಾತನಾಡಿದ್ದರು. ಮೊದಲ ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ್ದ ಅವರು, ಬಳಿಕ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಅವರ ಸಾಧನೆಗಳನ್ನು ಪ್ರಶಂಸೆ ಮಾಡಿದ್ದರು. ಬಳಿಕ, ನಮ್ಮ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು ಎಂದು ಆಕ್ರೋಶಭರತರಾಗಿ ನುಡಿಯುವ ವೇಳೆ, ಕಾಂಗ್ರೆಸ್ ಎನ್ನುವ ಬದಲು ಬಿಜೆಪಿ ಎಂದಿದ್ದರು. ಈ ವಿಡಿಯೋ ಕೂಡ ವೈರಲ್ ಅಗಿತ್ತು.

Follow Us:
Download App:
  • android
  • ios