Asianet Suvarna News Asianet Suvarna News

ಸಂತೋಷ್‌ ಪ್ರಕ​ರ​ಣದಿಂದ ಚೌಡೇ​ಶ್ವರಿ ಮುಕ್ತಿ ನೀಡಿ​ದ್ದಾ​ಳೆ: ಈಶ್ವ​ರ​ಪ್ಪ

ನನ್ನ ಮೇಲೆ ನಿರಾಧಾರವಾದ ಆರೋಪ ಬಂದಾಗ ನಾನು ಸ್ಪಷ್ಟವಾಗಿ ಈ ಆರೋಪ ನಿರಾಕರಿಸಿದ್ದೆ. ಇದೀಗ ಮನೆ ದೇವರು ತಾಯಿ ಚೌಡೇಶ್ವರಿ ನನ್ನನ್ನು ಆರೋಪದಿಂದ ಮುಕ್ತಳಾಗಿಸಿದ್ದಾಳೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. 

contractor santosh patil suicide case former minister ks eshwarappa reaction gvd
Author
Bangalore, First Published Jul 21, 2022, 11:59 AM IST

ಶಿವಮೊಗ್ಗ (ಜು.21): ನನ್ನ ಮೇಲೆ ನಿರಾಧಾರವಾದ ಆರೋಪ ಬಂದಾಗ ನಾನು ಸ್ಪಷ್ಟವಾಗಿ ಈ ಆರೋಪ ನಿರಾಕರಿಸಿದ್ದೆ. ಇದೀಗ ಮನೆ ದೇವರು ತಾಯಿ ಚೌಡೇಶ್ವರಿ ನನ್ನನ್ನು ಆರೋಪದಿಂದ ಮುಕ್ತಳಾಗಿಸಿದ್ದಾಳೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಉಡುಪಿ ಪೊಲೀಸರು ‘ಬಿ’ ರಿಪೋರ್ಚ್‌ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡುತ್ತಿದ್ದರು. ಆಗಲೇ ಹೇಳಿದ್ದೆ, ಈ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದೆ. 

ಒಂದು ಪಕ್ಷ ನಾನು ತಪ್ಪು ಮಾಡಿದ್ದರೆ ಆ ತಾಯಿ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ ಎಂದಿದ್ದೆ.  ನಾನು ರಾಜಿನಾಮೆ ನೀಡಿದ ಸಂದರ್ಭದಲ್ಲಿ ದೇಶದ ಅನೇಕ ನಾಯಕರು, ರಾಜ್ಯದ ನಾಯಕರು, ಸಂಘ ಪರಿವಾರದ ಮುಖಂಡರು ಕರೆ ಮಾಡಿ ಜೊತೆಗೆ ಇರುವುದಾಗಿ ಹೇಳಿದ್ದರು. ಅನೇಕ ಮಠಾಧೀಶರು ನನ್ನ ಮನೆಗೆ ಬಂದು ಧೈರ್ಯ ಹೇಳಿದ್ದರು. ಆರೋಪಮುಕ್ತನಾಗಿ ಬರುವುದಾಗಿ ಆಶೀರ್ವದಿಸಿದ್ದರು. ಇದೀಗ ಮುಕ್ತನಾಗಿ ಬಂದಿದ್ದೇನೆ ಎಂದರು. ಯಾಕೆ ಎಫ್‌ಐಆರ್‌ ಆಗಿದೆ ಎಂಬುದು ಗೊತ್ತಿಲ್ಲ. ಎಫ್‌ಐಆರ್‌ ಆದ ಬಳಿಕ ಕಾನೂನು ಕ್ರಮ ಮುಂದುವರೆಸಲಾಗಿದೆ. 

ಸುಸೈಡ್ ಕೇಸಿನಲ್ಲಿ ಕ್ಲೀನ್ ಚಿಟ್, ಈಶ್ವರಪ್ಪ ಮೊದಲ ಪ್ರತಿಕ್ರಿಯೆ, ಮತ್ತೆ ಮಂತ್ರಿಯಾಗುವ ಬಗ್ಗೆ ಹೇಳಿದ್ದಿಷ್ಟು

ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ. ಆರೋಪಕ್ಕೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ತಾಯಿ ಚೌಡೇಶ್ವರಿ ಮೇಲೆ ಭಾರ ಹಾಕಿದ್ದೆ.  ನಾನು ಸಂತೋಷ್‌ ಪಾಟೀಲ್‌ ಅವ​ರನ್ನು ಭೇಟಿ ಆಗಿರಲಿಲ್ಲ. ಆತ್ಮಹತ್ಯೆಯ ವಿಚಾರದಲ್ಲಿ ನನ್ನ ಪಾತ್ರ ಎಲ್ಲಿಯೂ ಇರಲಿಲ್ಲ. ಪೊಲೀಸರು ಏನೇನು ಪ್ರಶ್ನೆ ಕೇಳಿದ್ದರೋ ಅದೆಲ್ಲದಕ್ಕೂ ಉತ್ತರ ನೀಡಿದ್ದೇನೆ. ಸಂತೋಷ್‌ ಪತ್ನಿ ಮಾಡಿದ ಆರೋಪಕ್ಕೆ ನನ್ನ ಪ್ರತಿಕ್ರಿಯೆ ಇಲ್ಲ ಎಂದರು. ಎಲ್ಲ ಕಾರ್ಯಕರ್ತರು, ವಿವಿಧ ಪ್ರಕೋಷ್ಟಗಳ ಮುಖಂಡರು ಮಾತನಾಡಿದ್ದಾರೆ. 

ಬಿ.ಎಸ್‌.ಯಡಿಯೂರಪ್ಪ ಕೂಡ ದೂರವಾಣಿ ಕರೆ ಮಾಡಿ ಅಭಿನಂದನೆ ಹೇಳಿದರಲ್ಲದೆ, ಧೈರ್ಯವಾಗಿ ಇರುವಂತೆ ತಿಳಿಸಿದರು. ಆರೋಪ ನಿರಾಧಾರ ಎಂಬುದು ನಮಗೆ ಗೊತ್ತಿತ್ತು ಎಂದರು ಎಂದು ಈಶ್ವರಪ್ಪ ಹೇಳಿದರು. ಕ್ಯಾಬಿನೇಟ್‌ಗೆ ಮತ್ತೆ ತೆಗೆದುಕೊಳ್ಳುವ ಕುರಿತು ಪಕ್ಷದ ಕೇಂದ್ರ ನಾಯಕರು, ರಾಜ್ಯ ನಾಯಕರು, ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳಬೇಕು. ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಹಿಜಾಬ್‌ ಸೇರಿದಂತೆ ನನ್ನ ಹೋರಾಟ ಹೀಗೆಯೇ ನಡೆಯುತ್ತದೆ. ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ನನ್ನ ಧ್ವನಿಯನ್ನು ಅಡಗಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.

ಸಂತೋಷ ಪಾಟೀಲ್ ಪತ್ನಿ ರೇಣುಕಾ ಕಣ್ಣೀರು: ಬಿ ರಿಪೋರ್ಟ್‌ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂತೋಷ್ ಪಾಟೀಲ್ ಪತ್ನಿ ರೇಣಿಕಾ, ಪೊಲೀಸರು ಪ್ರಭಾವಕ್ಕೆ ಒಳಗಾಗಿ ತನಿಖೆ ಮಾಡಿದ್ದಾರೆ. ನನ್ನ ಗಂಡನ ಮೊಬೈಲ್‌ನಲ್ಲಿ ಎಲ್ಲಾ ಸಾಕ್ಷ್ಯಗಳು ಇದ್ದವು. ಈವರೆಗೂ ನನ್ನ ಗಂಡನ ಮೊಬೈಲ್ ನಮಗೆ ಕೊಟ್ಟಿಲ್ಲ. ನನ್ನ ಗಂಡನ ಸಹೋದರ ತನಖಾಧಿಕಾರಿ, ಎಸ್‌ಪಿಗೆ ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ ಎಂದು ಕಣ್ಣೀರು ಹಾಕಿದರು. ರಾಜ್ಯಪಾಲರಿಗೆ ನಾನು ಪತ್ರ ಬರೆದು ಮನವಿ ಮಾಡಿದ್ದೆ. 15 ದಿನಗಳಲ್ಲಿ ನಾನು ಪ್ರಕರಣದಿಂದ ಹೊರ ಬರ್ತೀನಿ ಅಂತಾ ಈಶ್ವರಪ್ಪ ಹೇಳಿದ್ರು. ಈಗ ಬಿ ರಿಪೋರ್ಟ್ ಸಲ್ಲಿಕೆ ಆದ್ರೆ ಹಾಗೇ ಅನಿಸುತ್ತೆ ಅಲ್ವಾ? 

ಸಂತೋಷ್ ಆತ್ಮಹತ್ಯೆ ಕೇಸ್, ಈಶ್ವರಪ್ಪಗೆ ಕ್ಲೀನ್ ಚಿಟ್, ಪೋಸ್ಟರ್ ವೈರಲ್

ಡೆತ್‌ನೋಟ್ ಬರೆದ್ರೆ ಮಾತ್ರ ಮಾನ್ಯ ಆಗುತ್ತಾ? ನಾವು ಡೆತ್‌ನೋಟ್ ಬರೆದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ್ರೆ ಮಾನ್ಯ ಆಗುತ್ತಾ? ಎಂದು ಆಕ್ರೊಶ ವ್ಯಕ್ತಪಡಿಸಿದರು. ನನ್ನ ಗಂಡ ಸಂತೋಷ ಪಾಟೀಲ್ ಸಾವಿಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ. ಪ್ರಕರಣವನ್ನು ಸಿಬಿಐ ತನಿಖೆಗೆ ನಾವು ಆಗ್ರಹಿಸುತ್ತೇವೆ. ಈ ಸಂಬಂಧ ಬೇಕಾದ್ರೆ ಸಿಎಂರನ್ನು ಭೇಟಿ ಆಗುತ್ತೇವೆ.  ಸಂತೋಷ ಪಾಟೀಲ್ ಸಾವಿನ ಸಂದರ್ಭದಲ್ಲಿ ಅನೇಕ ಭರವಸೆ ನೀಡಿದ್ರು. ಯಾವ ಭರವಸೆಯೂ ಇನ್ನೂ ಈಡೇರಿಲ್ಲ. 

Follow Us:
Download App:
  • android
  • ios