ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು 'ದ್ವೇಷ ಭಾಷಣ' ತಡೆ ಕಾಯ್ದೆ ಮತ್ತು 'ಫ್ಯಾಕ್ಟ್ ಚೆಕ್ ಎಜೆನ್ಸಿ' ಮೂಲಕ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿ 'ಅಘೋಷಿತ ತುರ್ತು ಪರಿಸ್ಥಿತಿ' ಹೇರುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರು (ಡಿ.20): ರಾಜ್ಯದ ಕಾಂಗ್ರೆಸ್ ಸರ್ಕಾರವು ಜನರ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಕರ್ನಾಟಕದಲ್ಲಿ 'ಅಘೋಷಿತ ತುರ್ತು ಪರಿಸ್ಥಿತಿ' ಹೇರಲು ಹೊರಟಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಹೊಸ ಕಾಯ್ದೆಗಳು ಮತ್ತು ಫ್ಯಾಕ್ಟ್ ಚೆಕ್ ಎಜೆನ್ಸಿ ರಚನೆಯ ವಿರುದ್ಧ ಅವರು ಕಿಡಿಕಾರಿದ್ದಾರೆ.

ದ್ವೇಷ ಭಾಷಣ ಬಿಲ್: ಅಭಿವ್ಯಕ್ತಿ ಹಕ್ಕಿನ ಹರಣ

ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ದ್ವೇಷ ಭಾಷಣ' (Hate Speech) ತಡೆ ಕಾಯ್ದೆಯು ಅಂಬೇಡ್ಕರ್ ಅವರು ನೀಡಿದ 'ಫ್ರೀಡಂ ಆಫ್ ಸ್ಪೀಚ್' ಅನ್ನು ಕಿತ್ತುಕೊಳ್ಳುವ ಪ್ರಯತ್ನವಾಗಿದೆ. ಈ ಬಿಲ್ ಆಧಾರದ ಮೇಲೆ ಯಾರಾದರೂ ಮಾತನಾಡಬಹುದು ಎಂದು ಅನಿಸಿದರೆ ಮೊದಲ ದಿನವೇ ಅವರನ್ನ ಬಂಧಿಸಬಹುದು. ನಾಳೆ ನಾನು ಒಬ್ಬ ಅಧಿಕಾರಿ ಅಥವಾ ಡಿಸಿಗೆ ಬೈದರೆ ಅವರು ನಮ್ಮ ಮೇಲೆ ಕೇಸ್ ಹಾಕಿ ಹತ್ತು ವರ್ಷ ಶಿಕ್ಷೆ ನೀಡಬಹುದು. ಇದು ನಮ್ಮ ಬಾಯಿಗೆ ಬೀಗ ಹಾಕುವ ಪ್ರಯತ್ನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಫ್ಯಾಕ್ಟ್ ಚೆಕ್ ಎಜೆನ್ಸಿ: ಕಾಂಗ್ರೆಸ್ ಚೇಲಾಗಳಿಗೆ ಮಣೆ

ಫ್ಯಾಕ್ಟ್ ಚೆಕ್ ಎಜೆನ್ಸಿ ರಚನೆಯ ಬಗ್ಗೆ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ ಅವರು, ಇದು ಕೇವಲ ಬಿಜೆಪಿ ನಾಯಕರನ್ನು ಗುರಿಪಡಿಸಲು ಮಾಡಿರುವ ಸಂಚು. ಪ್ರಿಯಾಂಕ್ ಖರ್ಗೆ ಇದರ ಅಧ್ಯಕ್ಷತೆ ವಹಿಸಿದ್ದಾರೆ ಮತ್ತು ಖಾಸಗಿ ವ್ಯಕ್ತಿಗಳನ್ನು ಇದರ ಸದಸ್ಯರನ್ನಾಗಿ ಮಾಡಲಾಗಿದೆ. ಈ ಫ್ಯಾಕ್ಟ್ ಚೆಕ್ ಎಜೆನ್ಸಿಯ ಸದಸ್ಯರು ನೀಡುವ ಮಾಹಿತಿ ಆಧಾರದ ಮೇಲೆ ಶಾಸಕರು ಮತ್ತು ಸಂಸದರ ಮೇಲೆ ಕೇಸ್ ಹಾಕಲಾಗುತ್ತಿದೆ. ಕಾಂಗ್ರೆಸ್ ಚೇಲಾಗಳಿಗೆ ಇಲ್ಲಿ ಕೆಲಸ ನೀಡಲಾಗಿದೆ ಎಂದು ಆರೋಪಿಸಿದ ಅವರು, 'ಫ್ಯಾಕ್ಟ್ ಚೆಕ್ ನಡೆಸಲು ಯಾರ ಅಪ್ಪನ ದುಡ್ಡು ಕೊಡುತ್ತೀರಿ?' ಎಂದು ನೇರವಾಗಿ ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಸಚಿವೆ ವಾಗ್ದಾಳಿ:

ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಹರಿಹಾಯ್ದ ಶೋಭಾ ಕರಂದ್ಲಾಜೆ, ಪ್ರಿಯಾಂಕ್ ಅವರಿಗೆ ಸ್ವಂತವಾಗಿ ಏನೂ ಇಲ್ಲ, ಅಪ್ಪನ (ಮಲ್ಲಿಕಾರ್ಜುನ ಖರ್ಗೆ) ಹಿಂದೆ ನಿಂತುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಸರ್ಕಾರಕ್ಕೆ ರೈತರನ್ನು ಅಥವಾ ಹೋರಾಟಗಾರರನ್ನು ಎದುರಿಸುವ ಧೈರ್ಯವಿಲ್ಲ, ಅದಕ್ಕಾಗಿಯೇ ಇಂತಹ ಕಾಯ್ದೆಗಳನ್ನು ತಂದು ಬಾಯಿ ಮುಚ್ಚಿಸಲು ನೋಡುತ್ತಿದ್ದಾರೆ ಎಂದರು. ಅಲ್ಲದೆ, ಮೋದಿ ಅವರನ್ನು 'ಮೌತ್ ಕಾ ಸೌದಾಗರ್' ಎಂದವರು ಈಗ ಹೈಕಮಾಂಡ್ ಮೆಚ್ಚಿಸಲು ಇಂತಹ ಕಾಯ್ದೆ ತರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವು ಸುಮ್ಮನೆ ಕೂರೋದಿಲ್ಲ:

ಸರ್ಕಾರದ ಈ ಕ್ರಮಗಳ ವಿರುದ್ಧ ತಾವು ಸುಮ್ಮನೆ ಕೂರುವುದಿಲ್ಲ ಎಂದಿರುವ ಸಚಿವರು, ಈಗಾಗಲೇ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಈ ಅನ್ಯಾಯದ ಬಗ್ಗೆ ವಿವರಿಸುತ್ತೇನೆ. ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಿದ್ದಕ್ಕೆ ಈಗಾಗಲೇ ಕೋರ್ಟ್‌ನಲ್ಲಿ ಉಗಿಸಿಕೊಂಡಿದ್ದೀರಿ. ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರೋ ನೋಡಿಯೇ ಬಿಡುತ್ತೇವೆ ಎಂದು ಸವಾಲು ಹಾಕಿದರು.

ಅದು ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಈಗ ಯಾಕೆ ಕೇಸ್ ಆಯ್ತು?

ಸಚಿವ ಕೃಷ್ಣ ಬೈರೆಗೌಡರ ಮೇಲಿನ ಭೂ ಕಬಳಿಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, 'ಅದು ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಈಗ ಯಾಕೆ ಕೇಸ್ ದಾಖಲಾಗಿದೆ? ಇದಕ್ಕೆ ಅವರೇ ಉತ್ತರ ನೀಡಬೇಕು ಎಂದರು. ಇನ್ನು ಕಾಂಗ್ರೆಸ್‌ನ ಇಂದಿನ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಅವರು, ಪ್ರಧಾನಿ ಮೋದಿ ಏನೇ ಮಾಡಿದರೂ ಇವರು ಪ್ರತಿಭಟನೆ ಮಾಡುತ್ತಾರೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಅವರು ಪ್ರಧಾನ ಮಂತ್ರಿ ಎಂಬ ಹೆಸರು ಇಟ್ಟಿದ್ದಾರೆ, ತಮ್ಮ ವೈಯಕ್ತಿಕ ಹೆಸರನ್ನಲ್ಲ ಎಂದು ತಿರುಗೇಟು ನೀಡಿದರು.