Karnataka Election 2023: 130-150 ಸ್ಥಾನಗಳಲ್ಲಿ ಗೆಲ್ತೀವಿ, ಸಿದ್ದರಾಮಯ್ಯ
ನನ್ನನ್ನು ಮುಖ್ಯಮಂತ್ರಿ ಮಾಡುವುದು, ಬಿಡುವುದು ಹೈಕಮಾಂಡ್‌ಗೆ ಮತ್ತು ನೂತನ ಶಾಸಕರಿಗೆ ಬಿಟ್ಟ ವಿಷಯ. ಆದರೆ ಸಿಎಂ ಆಗುವ ಅವಕಾಶ ಇದೆ ಎಂದೆಯೇ ಎಂಬ ಪ್ರಶ್ನೆಗೆ ಹೌದು ಎಂದು ತಲೆಯಾಡಿಸಿದರು: ಸಿದ್ದರಾಮಯ್ಯ
ಮೈಸೂರು(ಮೇ.11): ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದ್ದು, 130 ರಿಂದ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಾಗಿ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ವರುಣ ಕ್ಷೇತ್ರದ ವ್ಯಾಪ್ತಿಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮುಖ್ಯಮಂತ್ರಿ ಮಾಡುವುದು, ಬಿಡುವುದು ಹೈಕಮಾಂಡ್‌ಗೆ ಮತ್ತು ನೂತನ ಶಾಸಕರಿಗೆ ಬಿಟ್ಟ ವಿಷಯ. ಆದರೆ ಸಿಎಂ ಆಗುವ ಅವಕಾಶ ಇದೆ ಎಂದೆಯೇ ಎಂಬ ಪ್ರಶ್ನೆಗೆ ಹೌದು ಎಂದು ತಲೆಯಾಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ನಾವು ಕೊಟ್ಟಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಸ್ಥಾನ ಪಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮೋಡಿ ನಡೆಯುವುದಿಲ್ಲ ಎಂದರು.
ವರುಣಾದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ: ಬೂತ್ ಬಳಿ ಸೋಮಣ್ಣ ತೆರಳುವುದಕ್ಕೆ ವಿರೋಧ
ಜನರೇ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಲು ಮನಸ್ಸು ಮಾಡಿರುವುದರಿಂದ ನಮ್ಮ ನಿರೀಕ್ಷೆ ಹುಸಿ ಆಗುವುದಿಲ್ಲ. ಕಾಂಗ್ರೆಸ್ ಘೋಷಣೆ ಮಾಡಿರುವ ಯೋಜನೆಗಳು ಜನಪರವಾಗಿವೆ. ಜನರು ಈ ಯೋಜನೆಗಳನ್ನು ಅರಿತು ಮತ ಚಲಾವಣೆ ಮಾಡುತ್ತಿದ್ದಾರೆ. ಬಿಜೆಪಿ ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತಿರುವ ಮತದಾರರು ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದರು.
ಚುನಾವಣೆ ವೇಳೆ ಹಣದ ಹೊಳೆ ಹರಿಯುತ್ತದೆ. ಇಲ್ಲ ಎಂದು ಹೇಳಲಾಗದು. ಬಿಜೆಪಿಯವರಿಗೆ ಹಣ ಬಿಟ್ಟರೆ ಬೇರೇನೂ ಇಲ್ಲ. ದುಡ್ಡಿನ ಮೂಲಕ ಬಿಜೆಪಿ ಚುನಾವಣೆ ಗೆಲ್ಲಲು ಹೊರಟಿದೆ. ಮೋದಿ ರಾಜ್ಯ ಪ್ರವಾಸ ಮಾಡಿರುವುದು ಯಾವುದೇ ಪರಿಣಾಮ ಬೀರುವುದಿಲ್ಲ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡಿಲ್ಲ. ಹೀಗಾಗಿ, ಕಾಂಗ್ರೆಸ್ 130 ರಿಂದ 150 ಸ್ಥಾನ ಗೆಲ್ಲಲಿದೆ ಎಂದರು.
ಪಟಾಕಿ ಸಿಡಿಸಿ ಘೋಷಣೆ:
ಮತ ಚಲಾಯಿಸಲು ಸಿದ್ದರಾಮಯ್ಯ ಅವರು ಊರಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದರು. ಪಟಾಕಿ ಸಿಡಿಸಿದರು. ಸಿದ್ದರಾಮಯ್ಯ ಅವರು ಕಾರಿನಿಂದಲೇ ಕೈ ಬೀಸುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ನೋಡಲು ಗ್ರಾಮಸ್ಥರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.
ಮೈಸೂರು: ಚಾಮುಂಡಿಬೆಟ್ಟದಲ್ಲಿ ಡಿಕೆಶಿ, ಸಿದ್ದು ಪೂಜೆ
ಮತದಾನ ಮಾಡಿ ಹಿಂದಿರುಗುವಾಗ ಸ್ಥಳದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು, ಸೋಲಿಲ್ಲದ ಸರದಾರ, ಮೈಸೂರು ಹುಲಿ, ಮುಂದಿನ ಮುಖ್ಯಮಂತ್ರಿ, ಬಡವರ ಬಂಧು,ಅನ್ನಭಾಗ್ಯದ ಸಿದ್ದರಾಮಯ್ಯ, ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಎಂದು ಘೋಷಣೆ ಕೂಗಿದರು. ಈ ವೇಳೆ ಶಾಸಕ ಡಾ. ಯತೀಂದ್ರ ಮೊದಲಾದರು ಇದ್ದರು.
ಬಲಗೈ ತೋರು ಬೆರಳಿಗೆ ಶಾಯಿ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸಿದವರಿಗೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಮಾತ್ರ ಬಲಗೈ ತೋರು ಬೆರಳಿಗೆ ಅಳಿಸಲಾರದ ಶಾಯಿ ಹಾಕಲಾಗಿದೆ. ಮತಗಟ್ಟೆಅಧಿಕಾರಿಗಳ ಲೋಪದಿಂದ ಆಗಿದೆಯೋ ಅಥವಾ ಬೇರೆ ಯಾವ ಕಾರಣಕ್ಕೆ ಆಗಿದೆ ಎಂಬುದು ತಿಳಿದುಬಂದಿಲ್ಲ. ಅವರು ಇತ್ತೀಚೆಗೆ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಬಲಗೈನ ತೋರು ಬೆರಳಿಗೆ ಹಾಕಿಸಿಕೊಂಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.