ಬೆಂಗಳೂರು. [ನ.07]: ತೀವ್ರ ಕುತೂಹಲ ಕೆರಳಿಸಿದ್ದ 3 ಲೋಕಸಭಾ ಹಾಗೂ 2 ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಗೆ ಸಿಂಹಪಾಲು ಸಿಕ್ಕಿದೆ.

ಒಟ್ಟು ಐದು ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು 4ರಲ್ಲಿ  ಗೆದ್ದು ಬೀಗಿದರೆ, ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ, ಈ ಮೈತ್ರಿ ಗೆಲುವಿನ ಕ್ರೆಡಿಟ್ ಯಾರಿಗೆ ಎನ್ನುವುದು ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಎದ್ದಿರುವ ಸುದ್ದಿ.  

ಬೈ ಎಲೆಕ್ಷನ್ ರಿಸಲ್ಟ್: ಸೋತರೂ ಗೆದ್ದ ಬಿಜೆಪಿ..!

ಈ ಐದು ಬೈ ಎಲೆಕ್ಷನ್ ಕ್ಷೇತ್ರಗಳಲ್ಲಿ ಆರಂಭದಿಂದ ಹಿಡಿದು ಅಂತ್ಯದವರೆಗೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದವರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರು. ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಅವರ ಹೆಗಲಿಗೆ ಉಪಚುನಾವಣೆಯ ಜವಾಬ್ದಾರಿ ವಹಿಸಿತ್ತು.

ಅದರಂತೆ ಕ್ರಮಬದ್ಧವಾಗಿ ನಾನಾ ತಂತ್ರಗಳ ಮೂಲಕ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಆಯ್ಕೆದಿಂದ ಹಿಡಿದು ಫಲಿತಾಂಶ ಪ್ರಕಟವಾಗುವ ತನಕ ಎಲ್ಲಾ ನಾಯಕರನ್ನ ಗಣನೆಗೆ ತೆಗೆದುಕೊಂಡು ಉಪಸಮರದಲ್ಲಿ ಪಾಸ್ ಆಗಿದ್ದಾರೆ. ಆದ್ದರಿಂದ ಈ ಬೈ ಎಲೆಕ್ಷನ್ ಗೆಲುವಿನ ಕ್ರೆಡಿಟ್ ಸಿದ್ದರಾಮಯ್ಯ ಅವರಿಗೆ ಎಂದರೆ ತಪ್ಪಾಗಲಾರದು.

 ಉಪಚುನಾವಣೆ ಫಲಿತಾಂಶದಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಸಿದ್ದರಾಮಯ್ಯ ಅವರಿಗೆ ಎನ್ನುವುದಕ್ಕೆ ಕೆಲ ಕಾರಣಗಳು ಸಹ ಇವೆ.

* ಸಿದ್ದು ಪಾದಯಾತ್ರೆ ಬಳಿಕ ಬಳ್ಳಾರಿಯಲ್ಲಿ ಚಿಗುರೊಡೆದ ಕಾಂಗ್ರೆಸ್ 
ಹೌದು..2000ರ ಇಸ್ವಿಯಿಂದ ಬಳ್ಳಾರಿಯಲ್ಲಿ ಬಿಜೆಪಿಯ ರೆಡ್ಡಿ ಹಾಗೂ ಶ್ರೀರಾಮುಲು ಅವರ ಹಾರಾಟ, ಚೀರಾಟ ಜೋರಾಗಿತ್ತು. ಬಳಿಕ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಪಂಥಾಹ್ವಾನ ನೀಡಿ ರೆಡ್ಡಿಗಳಿಗೆ ಸೆಡ್ಡುಹೊಡೆದಿದ್ದರು.

ಅಷ್ಟೇ ಅಲ್ಲದೇ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ರು. ಅಲ್ಲಿಂದ ಬಳ್ಳಾರಿಯಲ್ಲಿ ಗಣಿಧಣಿಗಳೆಂಬ ಸ್ವಯಂಘೋಷಿತ ಸರ್ವಾಧಿಕಾರಿಗಳ ಕೋಟೆ ಕುಸಿಯಲು ಆರಂಭಿಸಿತು.ರೆಡ್ಡಿ ಜೈಲಿಗೆ ಹೋದದ್ದು, ರಾಮುಲು ಬಿಜೆಪಿ ತೊರೆದು ಬಿಎಸ್ ಆರ್ ಕಾಂಗ್ರೆಸ್ ಕಟ್ಟಿದ್ದು, ತದನಂತರ ಒಂದೊಂದಾಗಿ ಬಿಜೆಪಿಯ ಕ್ಷೇತ್ರಗಳು ನೆಲಕಚ್ಚಲಾರಂಭಿಸಿದ್ದು ಗರಬಡಿದ ಸ್ಥಿತಿ ತಲುಪಿದ್ದ ಕಾಂಗ್ರೆಸ್ ಚೇತರಿಸಿಕೊಂಡು ಸೆಟೆದು ನಿಂತ್ತಿದ್ದು, ಇದೆಲ್ಲದರ ಹಿಂದೆ ಸಿದ್ದು ಪಾದಯಾತ್ರೆಯ ನೆರಳಿದೆ. 

ಕರ್ನಾಟಕ ಬೈ ಎಲೆಕ್ಷನ್: ಆರಂಭದಿಂದ ಅಂತ್ಯದವರೆಗೆ

ಇದಕ್ಕೆ ಉದಾಹರಣೆ 2013ರ ವಿಧಾನಸಭಾ ಚುನಾವಣೆ. ಅಂದಿನ ಸಿದ್ದರಾಮಯ್ಯನವರ ಪಾದಯಾತ್ರೆ ಪರಿಣಾಮ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಳ್ಳಾರಿ ಜಿಲ್ಲೆಯಲ್ಲಿ 8 ಕ್ಷೇತ್ರಗಳ ಪೈಕಿ 4ರಲ್ಲಿ ಚಿಗುರೊಡೆದಿತ್ತು. ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 4ರಿಂದ 6ಸ್ಥಾನಗಳಿಗೆ ಏರಿಕೆ ಕಂಡಿದ್ದು, ಇದೀಗ ಬೈ ಎಲೆಕ್ಷನ್ ನಲ್ಲಿ ಗೆಲ್ಲಲು ವರದಾನವಾಗಿದೆ.

* ಉಪಚುನಾವಣೆ ವೇಳೆ ಭಿನ್ನಮತಕ್ಕೆ ಮದ್ದು ನೀಡಿದ್ದು ಸಿದ್ದು

ಬಳ್ಳಾರಿ ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವೇಳೆ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಡಿ.ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದರು. ಆದರೂ ಜಿಲ್ಲೆಯ ಶಾಸಕರು ಡಿಕೆಶಿ ಮಾತಿಗೆ ಸೊಪ್ಪು ಹಾಕಿರಲಿಲ್ಲ.

ಕೊನೆಗೆ ಸಿದ್ದರಾಮಯ್ಯ ಎಂಟ್ರಿಕೊಟ್ಟು ಜಿಲ್ಲೆಯ ಎಲ್ಲ ಶಾಸಕರಿಗೆ ಶಾಂತಿ ಪಾಠ ಮಾಡಿ, ಹೊರ ಜಿಲ್ಲೆಯ ವಿ.ಎಸ್ ಉಗ್ರಪ್ಪರನ್ನ ಬಳ್ಳಾರಿ ಅಭ್ಯರ್ಥಿಯಾಗಿ ಮಾಡಿದ್ದರು. ಅಷ್ಟೇ ಅಲ್ಲದೇ ಮಂಡ್ಯದಲ್ಲಿ ಜೆಡಿಎಸ್ ನೊಂದಿಗೆ ದೋಸ್ತಿಗೆ ಅಲ್ಲಿನ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನ ಸಹ ಸಿದ್ದರಾಂಯ್ಯ ಅವರು ತಮ್ಮ ತಂತ್ರಗಾರಿಕೆಯಿಂದ ಮಂಡ್ಯದಲ್ಲಿ ಭಿನ್ನಮತ ಶಮನ ಮಾಡಿ ಜೆಡಿಎಸ್ ಗೆ ಜೈ ಎನಿಸಿದ್ದರು. ಇನ್ನು ಜಮಖಂಡಿಯಲ್ಲೂ ಸಹ ಭಿನ್ನಮತಕ್ಕೆ ಬ್ರೇಕ್ ಹಾಕುವುದರ ಜೊತೆಗೆ ತಮ್ಮ ಕಾರ್ಯ ತಂತ್ರಗಳೊಂದಿಗೆ ಆನಂದ್ ನ್ಯಾಮಗೌಡ ಅವರನ್ನ ಗೆಲ್ಲಿಸಿಕೊಂಡು ಬಂದಿದ್ದಾರೆ.

*  ಕ್ಷೇತ್ರಗಳ ಜವಾಬ್ದಾರಿ
ಬೈ ಎಲೆಕ್ಷನ್ ಉಸ್ತುವಾರಿ ವಹಿಸಿಕೊಂಡಿದ್ದ ಸಿದ್ದರಾಮಯ್ಯ ಅವರು ಐದು ಕ್ಷೇತ್ರಗಳಲ್ಲಿ ಯಾವ ಜಾತಿ ಸಮುದಾಯ ಹೆಚ್ಚಿದೆ ಎಂದು ಅಳೆದು ತೂಗಿ ಆಯಾ ಸಮುದಾಯದ ನಾಯಕರುಗಳಿಗೆ ಕ್ಷೇತ್ರ ಉಸ್ತುವಾರಿ ವಹಿಸಿದ್ದರು.

ಅದರಲ್ಲೂ ಮುಖ್ಯವಾಗಿ ಅಹಿಂದಾ ಮತಗಳನ್ನ ಸೆಳೆಯಲು ಸಿದ್ದರಾಂಯ್ಯ ಅವರು ಒಳ-ಒಳಗೆ ಗ್ರೌಂಡ್ ವರ್ಕ್ ಮಾಡಿಸಿದ್ದು  ಅಷ್ಟೇ ಅಲ್ಲದೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಗಳಲ್ಲಿ ಸುತ್ತಾಡಿ, ತಮ್ಮ ಚಾಕಚಕ್ಯತೆ ಭಾಷಣದ ಮೂಲಕ ಮತದಾರರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. 

ಒಟ್ಟಿನಲ್ಲಿ  ಸಿದ್ದರಾಮಯ್ಯ ಅವರು ಚಾಕಚಕ್ಯತೆಯ ತಮ್ಮ ಕಾರ್ಯತಂತ್ರಗಳ ಮೂಲಕ ಕಾಂಗ್ರೆಸ್ ಹೈಕಮಾಂಡ್ ನೀಡಿದ್ದ ಉಪಚುನಾವಣೆ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಮ್ಯಾನ್ ಆಫ್ ದಿ ಮ್ಯಾಚ್ ಆಯಾ ಕ್ಷೇತ್ರಗಳ ಉಸ್ತುವಾರಿಗಳಿಗೆ ಹೋದ್ರೆ, ಮ್ಯಾನ್ ಆಫ್ ದಿ ಸಿರೀಸ್ ಸಿದ್ದರಾಮಯ್ಯ ಅವರೇ.