ಶೆಟ್ಟರ್‌ ಸೇರಿ ಏಳು ಮಂದಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ: 3 ಹೊಸಬರಿಗೆ ಮಣೆ

ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನ ಬಾಕಿಯಿರುವ ಈ ಹಂತದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ಸೋಮವಾರವಷ್ಟೇ ಬಿಜೆಪಿ ತೊರೆದು ಪಕ್ಷ ಸೇರಿ, ಬಿ-ಫಾರಂ ಸಹ ಪಡೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸೇರಿ ಏಳು ಮಂದಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. 

Congress ticket announced for seven people including Jagadish Shettar gvd

ಬೆಂಗಳೂರು (ಏ.19): ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನ ಬಾಕಿಯಿರುವ ಈ ಹಂತದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ಸೋಮವಾರವಷ್ಟೇ ಬಿಜೆಪಿ ತೊರೆದು ಪಕ್ಷ ಸೇರಿ, ಬಿ-ಫಾರಂ ಸಹ ಪಡೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸೇರಿ ಏಳು ಮಂದಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ನಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ನಿರೀಕ್ಷೆ ಹುಟ್ಟಿಸಿದ್ದ ಕಾಂಗ್ರೆಸ್‌ ಅಂತಿಮವಾಗಿ ಮುಸ್ಲಿಂ ಸಮುದಾಯದ ಮೊಹಮ್ಮದ್‌ ಯೂಸುಫ್‌ ಸವಣೂರ ಅವರಿಗೆ ಟಿಕೆಟ್‌ ನೀಡಿದೆ. 

ಸವಣೂರ ಅವರು ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಅಧ್ಯಕ್ಷರಾಗಿದ್ದು, ಶೆಟ್ಟರ್‌ ವಿರುದ್ಧ ಸ್ಪರ್ಧೆಗೆ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಶೆಟ್ಟರ್‌ ಕಾಂಗ್ರೆಸ್‌ಗೆ ಬಂದ ಕಾರಣ, ಸವಣೂರ ಅವರಿಗೆ ಶಿಗ್ಗಾಂವಿ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರಕ್ಕೆ ಈ ಮುನ್ನ ಮಾಜಿ ಸಚಿವ ವಿನಯ ಕುಲಕರ್ಣಿ ಹೆಸರೂ ಕೇಳಿಬಂದಿತ್ತು. ಈ ಏಳರ ಪಟ್ಟಿಯಲ್ಲಿ ಇಬ್ಬರು ಹಾಲಿ ಶಾಸಕರ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಆ ಪೈಕಿ ಲಿಂಗಸಗೂರು ಕ್ಷೇತ್ರಕ್ಕೆ ಹಾಲಿ ಶಾಸಕ ದುರ್ಗಪ್ಪ ಎಸ್‌.ಹೂಲಗೇರಿ ಅವರಿಗೆ ಟಿಕೆಟ್‌ ನೀಡಿದ್ದರೆ, ಹರಿಹರ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಮಪ್ಪ ಅವರಿಗೆ ಕಡೆಗೂ ಕೊಕ್‌ ನೀಡಲಾಗಿದೆ.

ಚಿಕ್ಕ ಬಾಲಕನಿಗೆ ಹೇಳಿದಂತೆ ನಿನಗೆ ಟಿಕೆಟ್‌ ಇಲ್ಲ ಹೋಗು ಎಂದು ಅಗೌರವದಿಂದ ಹೊರ ದಬ್ಬಿದರು: ಶೆಟ್ಟರ್‌

ಶ್ರೀನಿವಾಸಗೆ ಸ್ವಾಮೀಜಿ ಕೃಪೆ: ಕಳೆದ ಒಂದು ವರ್ಷದ ಹಿಂದೆ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿ ಹರಿಹರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದ ನಂದಗಾವಿ ಶ್ರೀನಿವಾಸ ಅವರಿಗೆ ಹರಿಹರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿಯವರ ಅವಕೃಪೆಗೆ ಪಾತ್ರರಾಗಿದ್ದ ಹಾಲಿ ಶಾಸಕ ರಾಮಪ್ಪ ಅವರಿಗೆ ಟಿಕೆಟ್‌ ತಪ್ಪುವ ಸುಳಿವು ದೊರಕಿತ್ತು. ಹೀಗಾಗಿಯೇ ಅವರು ಕಳೆದ ಮೂರು ದಿನಗಳಿಂದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವರಿಷ್ಠರ ಮನೆಗಳಿಗೆ ಸತತವಾಗಿ ಎಡತಾಕಿದರೂ ಪ್ರಯೋಜನವಾಗಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಈ ಕ್ಷೇತ್ರಕ್ಕೆ ರಾಮಪ್ಪ ಬದಲಿಗೆ ಟಿಕೆಟ್‌ ಪಡೆಯಲು ಪ್ರಭಾವಿ ನಾಯಕ ಎಚ್‌.ಎಂ. ರೇವಣ್ಣ ತೀವ್ರ ಪ್ರಯತ್ನ ನಡೆಸಿದ್ದರು. ರೇವಣ್ಣ ಅವರಿಗೂ ಟಿಕೆಟ್‌ ನಿರಾಕರಣೆಯಾಗಿದ್ದು, ಸ್ವಾಮೀಜಿ ಅವರ ಕೃಪೆ ಕಾರಣದಿಂದಾಗಿಯೇ ನಂದಗಾವಿ ಶ್ರೀನಿವಾಸ ಟಿಕೆಟ್‌ ಗಿಟ್ಟಿಸಿದ್ದಾರೆ.

ರವಿ ವಿರುದ್ಧ ತಮ್ಮಯ್ಯ: ಇನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ವಿರುದ್ಧ ಚಿಕ್ಕಮಗಳೂರು ಕ್ಷೇತ್ರಕ್ಕೆ ರವಿ ಅವರ ಪಾಳಯದಲ್ಲೇ ಗುರುತಿಸಿಕೊಂಡಿದ್ದು, ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದ ಎಚ್‌.ಡಿ. ತಮ್ಮಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರಕ್ಕೆ ಇಬ್ಬರು ವಲಸಿಗರ ನಡುವೆಯೇ ಪೈಪೋಟಿಯಿತ್ತು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ತಮ್ಮಯ್ಯ ಹಾಗೂ ಜೆಡಿಎಸ್‌ನಿಂದ ಆಗಮಿಸಿದ್ದ ಹರೀಶ್‌ ನಡುವೆ ತೀವ್ರ ಹಣಾಹಣಿಯಿತ್ತು. ಕಡೆಗೆ ತಮ್ಮಯ್ಯ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಂಚೋರೆಗೆ ಮತ್ತೆ ಲಕ್‌: ಉಳಿದಂತೆ ಹುಬ್ಬಳ್ಳಿ-ಧಾರವಾಡ (ಪಶ್ಚಿಮ)ಕ್ಕೆ ಕಳೆದ ಚುನಾವಣೆಯಲ್ಲೂ ಕಣಕ್ಕೆ ಇಳಿದು ಪರಾಜಿತರಾಗಿದ್ದ ದೀಪಕ್‌ ಚಿಂಚೋರೆ ಹಾಗೂ ಶ್ರವಣ ಬೆಳಗೊಳದಿಂದ ಒಕ್ಕಲಿಗ ಸಮುದಾಯದ ಎಂ.ಎ. ಗೋಪಾಲ ಸ್ವಾಮಿ ಅವರಿಗೆ ಟಿಕೆಟ್‌ ನೀಡಲಾಗಿದೆ.

8 ಕ್ಷೇತ್ರಗಳ ಘೋಷಣೆ ಬಾಕಿ: ತನ್ಮೂಲಕ ತನ್ನ ಮೊದಲ ನಾಲ್ಕು ಪಟ್ಟಿಗಳಲ್ಲಿ ಒಟ್ಟಾರೆ 216 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಪ್ರಕಟಿಸಿದಂತಾಗಿದ್ದು, ಇನ್ನೂ ಇಬ್ಬರು ಹಾಲಿ ಶಾಸಕರ ಕ್ಷೇತ್ರಗಳು ಸೇರಿದಂತೆ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಿಸುವುದು ಬಾಕಿ ಉಳಿಸಿಕೊಂಡಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ತಪ್ಪು ಅರಿತು ಜಗ​ದೀಶ್‌ ಶೆಟ್ಟರ್‌ ಬಿಜೆ​ಪಿಗೆ ಮರ​ಳ​ಲಿ: ಕೆ.ಎಸ್‌.ಈಶ್ವರಪ್ಪ

4ನೇ ಪಟ್ಟಿ
ಲಿಂಗಸಗೂರು (ಎಸ್‌.ಸಿ)- ಡಿ.ಎಸ್‌. ಹೂಲಗೇರಿ
ಹುಬ್ಬಳ್ಳಿ-ಧಾರವಾಡ (ಸೆಂಟ್ರಲ್‌) - ಜಗದೀಶ್‌ ಶೆಟ್ಟರ್‌
ಹುಬ್ಬಳ್ಳಿ ಧಾರವಾಡ (ಪಶ್ಚಿಮ)- ದೀಪಕ್‌ ಚಿಂಚೋರೆ
ಶಿಗ್ಗಾಂವಿ - ಮೊಹಮ್ಮದ್‌ ಯೂಸುಫ್‌ ಸವಣೂರ್‌
ಹರಿಹರ- ನಂದಗಾವಿ ಶ್ರೀನಿವಾಸ
ಚಿಕ್ಕಮಗಳೂರು- ಎಚ್‌.ಡಿ. ತಮ್ಮಯ್ಯ
ಶ್ರವಣಬೆಳಗೊಳ- ಎಂ.ಎ. ಗೋಪಾಲಸ್ವಾಮಿ

ಘೋಷಣೆ ಆಗದ ಕ್ಷೇತ್ರಗಳು
ಪುಲಕೇಶಿನಗರ
ಸಿ.ವಿ.ರಾಮನ್‌ ನಗರ
ಮುಳಬಾಗಿಲು
ರಾಯಚೂರು ಸಿಟಿ
ಅರಕಲಗೂಡು
ಮಂಗಳೂರು ಉತ್ತರ
ಶಿಡ್ಲಘಟ್ಟ
ಕೆ.ಆರ್‌. ಪುರ

ಟಿಕೆಟ್‌ ತಪ್ಪಿಸಿಕೊಂಡವರು
ಎಚ್‌.ಎಂ.ರೇವಣ್ಣ- ಹರಿಹರ
ರಾಮಪ್ಪ- ಹರಿಹರ

ಹೊಸಮುಖ
1. ಎಚ್‌.ಡಿ.ತಮ್ಮಯ್ಯ
2. ನಂದಗಾವಿ ಶ್ರೀನಿವಾಸ
3. ಯೂಸುಫ್‌ ಸವಣೂರ

Latest Videos
Follow Us:
Download App:
  • android
  • ios