ಕಣ ಕಣದಲ್ಲಿಯೂ ಸಂಸ್ಕಾರ, ಹಿಂದುತ್ವ, ದೇಶ ಈ ತತ್ವಗಳನ್ನು ಇಟ್ಟುಕೊಂಡು ಬೆಳೆದ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್‌ಗೆ ಸೇರಿರುವುದು ನನ್ನನ್ನು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರಿಗೆ ಅಘಾತ ತಂದಿದೆ.

ಶಿವಮೊಗ್ಗ (ಏ.18): ಕಣ ಕಣದಲ್ಲಿಯೂ ಸಂಸ್ಕಾರ, ಹಿಂದುತ್ವ, ದೇಶ ಈ ತತ್ವಗಳನ್ನು ಇಟ್ಟುಕೊಂಡು ಬೆಳೆದ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್‌ಗೆ ಸೇರಿರುವುದು ನನ್ನನ್ನು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರಿಗೆ ಅಘಾತ ತಂದಿದೆ. ಅವರು ಈಗಲೂ ತಮ್ಮ ತಪ್ಪಿನ ಅರಿವು ಮಾಡಿಕೊಂಡು ಪಕ್ಷಕ್ಕೆ ಮರಳಬೇಕು ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು. ಜಗದೀಶ್‌ ಶೆಟ್ಟರ್‌ ಅವರಿಗೆ ಬಹಿರಂಗ ಪತ್ರ ಬರೆದಿರುವ ಈಶ್ವರಪ್ಪ ಅವರು ಪತ್ರಿಕಾಗೋಷ್ಟಿಯಲ್ಲಿ ಈ ಪತ್ರವನ್ನು ಪ್ರದ​ರ್ಶಿಸಿದರು. ಪತ್ರದಲ್ಲಿ ಶೆಟ್ಟ​ರ್‌ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಕೇವಲ ಒಂದು ಟಿಕೆಟ್‌ಗಾಗಿ ತತ್ವ- ಸಿದ್ಧಾಂತಗಳನ್ನೇ ಮರೆತು ಕಾಂಗ್ರೆಸ್‌ ಕಡೆ ಹೆಜ್ಜೆ ಇಡುತ್ತಾರೆ ಎಂಬುದು ಬೇಸರ, ನೋವು ತರುತ್ತದೆ. ಶೆಟ್ಟರ್‌ ಮಾತ್ರವಲ್ಲ, ಅವರ ತಂದೆ, ಅಜ್ಜ ಎಲ್ಲರೂ ಜನಸಂಘದ ಕಾಲದಿಂದಲೂ ಪಕ್ಷಕ್ಕೆ ದುಡಿದವರು. ಎಂದೂ ಅಧಿಕಾರ ಬಯಸಿದವರಲ್ಲ. ಒಂದು ಕಾಲದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಜನ ಕೂಡ ಸಿಗದ ಹೊತ್ತಿನಲ್ಲಿ ಕೂಡ ಜಗದೀಶ್‌ ಶೆಟ್ಟರ್‌ ಪಕ್ಷ ಸಂಘಟನೆಗೆ ತತ್ವ- ಸಿದ್ಧಾಂತವನ್ನು ಇಟ್ಟುಕೊಂಡು ದುಡಿದವರು. ಹೀಗಾಗಿ ಶೆಟ್ಟರ್‌ ಬಗ್ಗೆ ಮಾತ್ರ ಮಾತಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು. 4 ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿದ ತತ್ವ- ಸಿದ್ಧಾಂತಗಳು, ತಾವು ಸಂಘಟನೆಯಲ್ಲಿ ಮೈಗೂಡಿಸಿಕೊಂಡ ಸಂಸ್ಕಾರಗಳು, ತಮ್ಮ ಇಡೀ ಕುಟುಂಬ ಪಕ್ಷವನ್ನು ಬೆಳೆಸಲು ಮಾಡಿದ ತ್ಯಾಗ ಎಲ್ಲವೂ ಈ ಹೊತ್ತಿನಲ್ಲಿ ನೆನಪಾಗುತ್ತಿವೆ. 

ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ: ಸಿದ್ದರಾಮಯ್ಯ ವಿರುದ್ದ ಕಿಡಿ

ಸ್ವರ್ಗದಲ್ಲಿರುವ ತಮ್ಮ ತಂದೆಯವರು ನಿಮ್ಮ ನಿರ್ಧಾರದಿಂದ ಎಷ್ಟು ಸಂಕಟ ಅನುಭವಿಸಬಹುದು ಎಂಬುದನ್ನು ನೆನಪು ಮಾಡಿಕೊಳ್ಳಿ. ತಮ್ಮ ಮೊಮ್ಮಗ ಯಾಕೆ ಹೀಗೆ ಮಾಡಿದಿರಿ ಎಂಬ ಪ್ರಶ್ನೆ ಮುಂದಿಟ್ಟರೆ ತಾವು ನೀಡಬಹುದಾದ ಉತ್ತರವೇನು? ಇನ್ನು ಕೇವಲ ಒಂದು ಟಿಕೆಟ್‌ಗಾಗಿ ಈ ರೀತಿ ತಾವು ಜೀವನಪೂರ್ತಿ ವಿರೋಧಿಸಿಕೊಂಡು ಬಂದ ಕಾಂಗ್ರೆಸ್‌ ಪಕ್ಷದೊಳಗೆ ಕಾಲಿಡುವುದಾದರೂ ಹೇಗೆ? ತಾವು ಪಕ್ಷಕ್ಕೆ ಸಲ್ಲಿಸಿದ ಸೇವೆಯ ಜೊತೆಗೆ ಪಕ್ಷವು ತಮಗೆ ಎಲ್ಲ ಸ್ಥಾನಮಾನ ನೀಡಿ ಬೆಳೆಸಿದೆ. ಮುಖ್ಯಮಂತ್ರಿ ಕೂಡ ಆಗಿದ್ದೀರಿ. ಈಗ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಟಿಕೆಟ್‌ ನೀಡಿಲ್ಲ ಎಂಬ ಕಾರಣ ನೀಡುತ್ತಿದ್ದೀರಿ. ಕಾಂಗ್ರೆಸ್‌ನಲ್ಲಿನ ನಾಯಕರು ಹೊಂದಾಣಿಕೆಯಿಲ್ಲದೆ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ತಾವು ಅಲ್ಲಿ ಯಾರ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು.

ಬಿಜೆಪಿಯು ಗೋಹತ್ಯೆ ನಿಷೇಧ ಕಾಯಿದೆ ತಂದಾಗ ಅದರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದವರು ಶೆಟ್ಟರ್‌. ಒಂದು ಪಕ್ಷ ಕಾಂಗ್ರೆಸ್‌ ಬಹುಮತ ಗಳಿಸಿ, ಶೆಟ್ಟರ್‌ ಕೂಡ ಆಯ್ಕೆಯಾದರು ಎಂದಿಟ್ಟುಕೊಳ್ಳೋಣ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆಗ ಶೆಟ್ಟರ್‌ ಸದನದಲ್ಲಿ ಯಾವ ರೀತಿ ಕಾಯ್ದೆ ಸಮರ್ಥಿಸಿಕೊಂಡು ಮಾತಾಡುತ್ತಾರೆ? ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ನಡೆಸಿ ನಿಷೇಧಕ್ಕೆ ಒಳಗಾದ ಪಿಎಫ್‌ಐ ಮೇಲಿನ ನಿಷೇಧ ವಾಪಸ್ಸು ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ ನೂರಾರು ಹಿಂದುಗಳ ಹತ್ಯೆ ನಡೆಸಿದ, ಈ ದೇಶವನ್ನು ಛಿದ್ರಗೊಳಿಸಲು ಯತ್ನಿಸಿದ ಪಿಎಫ್‌ಐ ಪರವಾಗಿ ಶೆಟ್ಟರ್‌ ಹೇಗೆ ಮಾತನಾಡುತ್ತಾರೆ ಎಂದು ಕೇಳಿದರು. ಇಂತಹ ಹಲವು ಪ್ರಶ್ನೆಗಳು ಅವರನ್ನು ಈ ಮಟ್ಟಕ್ಕೆ ಬೆಳೆಸಿದ ಕಾರ್ಯಕರ್ತರಲ್ಲಿ ಹುಟ್ಟುತ್ತಿದೆ. ಈ ವಿಷಯದಲ್ಲಿ ಕಾರ್ಯಕರ್ತರು ಕೇಳುವ ಪ್ರಶ್ನೆಗೆ ಶೆಟ್ಟರ್‌ ಉತ್ತರ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋಟಿ ಒಡೆಯ: ಆದರೆ ಕೈಯಲ್ಲಿರುವುದು ಬರೀ 86 ಸಾವಿರ..

ಈಗಲೂ ಮರು ಚಿಂತನೆಗೆ ಅವಕಾಶವಿದೆ. ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿಕೊಂಡು ಮುಂದೆ ಹೆಜ್ಜೆ ಇಡುವುದು ದೊಡ್ಡತನ. ರಾಜ್ಯದ ಜನತೆ ಕ್ಷಮೆ ಕೋರಿ ಸಿದ್ಧಾಂತ ಉಳಿಸಲು ಮರಳಿ ಬನ್ನಿ ಎಂದು ಆಹ್ವಾನ ನೀಡಿದರು. ಸು​ದ್ದಿಗೋಷ್ಟಿಯಲ್ಲಿ ಡಾ.ಧನಂಜಯ ಸರ್ಜಿ, ನಗರಾಧ್ಯಕ್ಷ ಜಗದೀಶ್‌, ಜ್ಞಾನೇಶ್ವರ್‌, ಸೂಡಾ ಅಧ್ಯಕ್ಷ ನಾಗರಾಜ್‌, ಮಾಜಿ ಮೇಯರ್‌ ಸುನೀತಾ ಅಣ್ಣಪ್ಪ, ಜಿಲ್ಲಾ ಮಾಧ್ಯಮ ಸಂಚಾಲಕ ಅಣ್ಣಪ್ಪ ಮತ್ತಿತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.