ಚಿಕ್ಕ ಬಾಲಕನಿಗೆ ಹೇಳಿದಂತೆ ನಿನಗೆ ಟಿಕೆಟ್ ಇಲ್ಲ ಹೋಗು ಎಂದು ಅಗೌರವದಿಂದ ಹೊರ ದಬ್ಬಿದರು: ಶೆಟ್ಟರ್
ನನಗೆ ಅಧಿಕಾರದ ಆಸೆಯಿಲ್ಲ. ನನಗೆ ಟಿಕೆಟ್ ನೀಡಬಾರದು ಎಂದಿದ್ದರೆ, ಕೆಲವು ದಿನಗಳ ಮೊದಲೇ ಗೌರವಯುತವಾಗಿ ಹೇಳಬಹುದಿತ್ತು. ಆದರೆ, ನಾಮಪತ್ರ ಸಲ್ಲಿಕೆಗೆ ಹಿಂದಿನ ದಿನ ಚಿಕ್ಕ ಬಾಲಕನಿಗೆ ಹೇಳಿದಂತೆ ನಿನಗೆ ಟಿಕೆಟ್ ಇಲ್ಲ ಹೋಗು ಎಂದು ಅಗೌರವದಿಂದ ಹೊರ ದಬ್ಬಿದರು.
ಬೆಂಗಳೂರು (ಏ.18): ‘ನನಗೆ ಅಧಿಕಾರದ ಆಸೆಯಿಲ್ಲ. ನನಗೆ ಟಿಕೆಟ್ ನೀಡಬಾರದು ಎಂದಿದ್ದರೆ, ಕೆಲವು ದಿನಗಳ ಮೊದಲೇ ಗೌರವಯುತವಾಗಿ ಹೇಳಬಹುದಿತ್ತು. ಆದರೆ, ನಾಮಪತ್ರ ಸಲ್ಲಿಕೆಗೆ ಹಿಂದಿನ ದಿನ ಚಿಕ್ಕ ಬಾಲಕನಿಗೆ ಹೇಳಿದಂತೆ ನಿನಗೆ ಟಿಕೆಟ್ ಇಲ್ಲ ಹೋಗು ಎಂದು ಅಗೌರವದಿಂದ ಹೊರ ದಬ್ಬಿದರು. ಕಡೆ ಪಕ್ಷ ಈ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಿ, ಆರು ತಿಂಗಳು ಶಾಸಕನಾಗಿದ್ದು, ಅನಂತರ ರಾಜೀನಾಮೆ ನೀಡಿ ನಿವೃತ್ತನಾಗುತ್ತೇನೆ ಎಂದು ಕೋರಿಕೊಂಡರೂ, ಬೆಲೆ ಸಿಗಲಿಲ್ಲ. ಇದು ನನಗೆ ತೀವ್ರ ಬೇಸರ ತರಿಸಿತು. ಸ್ವಾಭಿಮಾನ ಬಿಟ್ಟು ಹೇಗಿರಲಿ?’. ಇದು ಬಿಜೆಪಿಯೊಂದಿಗಿನ ನಾಲ್ಕು ದಶಕಗಳ ನಂಟು ಕಳಚಿಕೊಂಡು ಸೋಮವಾರ ಬೆಳಗ್ಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೋವಿನ ನುಡಿಗಳು.
ಗದ್ಗಿದಿತ ಧ್ವನಿಯಲ್ಲಿ ಬಿಜೆಪಿಗೆ ವಿದಾಯ ಘೋಷಿಸಿದ ಅವರು, ‘ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ಸ್ಪೀಕರ್ ಸೇರಿ ಎಲ್ಲಾ ಅಧಿಕಾರ ಅನುಭವಿಸಿರುವ ನಾನು ಪಕ್ಷ ತೊರೆಯುತ್ತಿರುವುದು ಯಾಕೆ ಎಂದು ಎಲ್ಲರಿಗೂ ಅಚ್ಚರಿಯಾಗಿರಬಹುದು. ಆದರೆ, ಬಿಜೆಪಿ ಪಕ್ಷದಲ್ಲಿ ಹಲವು ತಿಂಗಳಿಂದ ನನಗೆ ಆಗಿರುವ ನೋವು, ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ. ಸ್ವಲ್ಪ ಕಾಲಾವಕಾಶ ನೀಡಿ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ ಎಂದು ಮನವಿ ಮಾಡದರೂ ಕೇಳದೆ ನಾವೇ ಕಟ್ಟಿದ ಮನೆಯಿಂದ ಹೊರ ದಬ್ಬಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಬಿಜೆಪಿ ಪಕ್ಷ ತೊರೆಯುತ್ತಿದ್ದೇನೆ’ ಎಂದು ಹೇಳಿ ಭಾವುಕರಾದರು.
ನನ್ನ, ಶೆಟ್ಟರ್ ಬಗ್ಗೆ ಮಾತಾಡುವ ನೈತಿಕತೆ ಬಿಎಸ್‌ವೈಗಿಲ್ಲ: ಲಕ್ಷ್ಮಣ ಸವದಿ
ಕೊನೇ ಆಸೆ ಈಡೇರಿಸಲಿಲ್ಲ: ‘ನಾನು ಎಲ್ಲಾ ರೀತಿಯ ಅಧಿಕಾರವನ್ನೂ ಅನುಭವಿಸಿದ್ದೇನೆ. ಗೌರವಯುತವಾಗಿ ನಿವೃತ್ತಿಯಾಗಬೇಕು ಎಂಬುದಷ್ಟೇ ನನ್ನ ಕೊನೆಯ ಆಸೆ. ಹೀಗಾಗಿ ಈ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಿ. ಆರು ತಿಂಗಳ ಬಳಿಕ ಶಾಸಕ ಸ್ಥಾನದಿಂದ ನಾನೇ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ. ಬಳಿಕ ನಿಮಗೆ ಇಷ್ಟಬಂದವರಿಗೆ ನೀಡಿ ಎಂದು ಮನವಿ ಮಾಡಿದೆ. ಆದರೂ ಪಕ್ಷ ಅವಕಾಶ ಮಾಡಿಕೊಡಲಿಲ್ಲ. ಇಷ್ಟಾದ ಮೇಲೆ ಪಕ್ಷ ತೊರೆಯುವುದು ಅನಿವಾರ್ಯವಾಯಿತು’ ಎಂದರು.
‘ನಾನು ಸಂಘ ಪರಿವಾರದಿಂದ ಬಂದ ವ್ಯಕ್ತಿ. ನನಗೆ ಬಿ.ಎಸ್. ಯಡಿಯೂರಪ್ಪನವರ ಮೇಲೆ, ಪಕ್ಷದ ಮೇಲೆ ಬಹಳ ಗೌರವವಿದೆ. ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದಾಗ ರಾಜ್ಯದ ಎಲ್ಲಾ ಭಾಗದ ಲಿಂಗಾಯತ ಸಮುದಾಯದ ನಾಯಕರು ನನಗೆ ಕರೆ ಮಾಡಿ ನಿಮಗೆ ಬಿಜೆಪಿಯಲ್ಲಿ ಅನ್ಯಾಯವಾಗಿದ್ದು ಯಾಕೆ? ಎಂದು ಬೇಸರ ವ್ಯಕ್ತಪಡಿಸಿದರು. ಈ ಸಮುದಾಯ ಹಾಗೂ ಹುಬ್ಬಳ್ಳಿ ಧಾರವಾಡ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ಋುಣಿಯಾಗಿರುತ್ತೇನೆ’ ಎಂದು ನೋವಿನಿಂದ ನುಡಿದರು.
ಕೆಲವರಿಂದ ಬಿಜೆಪಿ ನಿಯಂತ್ರಣ: ‘ನಾವು ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದು ಕೆಲಸ ಮಾಡಿದ್ದೆವು. ನಾವೆಲ್ಲಾ ಒಟ್ಟಾಗಿ ಪಕ್ಷ ಕಟ್ಟಿದೆವು. ಆದರೆ ಇಂದು ಕೆಲವೇ ವ್ಯಕ್ತಿಗಳಿಗಾಗಿ ಪಕ್ಷವನ್ನು ಕಟ್ಟಲಾಗುತ್ತಿದೆ. ಬಿಜೆಪಿ ಕಚೇರಿಯಲ್ಲಿ ಕೆಲವು ವ್ಯಕ್ತಿಗಳು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ಈ ವಿಚಾರ ಕೇಂದ್ರದ ನಾಯಕರ ಗಮನಕ್ಕೆ ಬಂದಿಲ್ಲ. ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ಬೇರೆಯವರಿಗೆ ಅವಮಾನ ಮಾಡಲಾಗುತ್ತಿದೆ. ನನಗೆ ಅಪಮಾನ ಮಾಡಿದ ನಂತರ ನನಗೆ ಬೇರೆ ಹುದ್ದೆ ನೀಡುವುದಾಗಿ ಹೇಳಿದರು. ನನಗೆ ಹುದ್ದೆ ಮುಖ್ಯವಾಗಿರಲಿಲ್ಲ. ಸ್ವಾಭಿಮಾನ ಮುಖ್ಯವಾಗಿತ್ತು. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ಪಂಚರತ್ನ ಯೋಜನೆಯೇ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ: ಮಾಲೂರು ಅಭ್ಯರ್ಥಿ ಜಿ.ರಾಮೇಗೌಡ
ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವೆ: ‘ನನಗೆ ಅಧಿಕಾರ ಮುಖ್ಯವಾಗಿದ್ದರೆ ಬೊಮ್ಮಾಯಿ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ಎಂದು ಸ್ವಯಂಕೃತ ಹೇಳಿಕೆ ನೀಡುತ್ತಿರಲಿಲ್ಲ. ನನಗೆ ಆಗಿರುವ ಅವಮಾನದಿಂದ ನೊಂದು ಕಾಂಗ್ರೆಸ್ ಸೇರುತ್ತಿದ್ದೇನೆ. ರಾಜ್ಯದಲ್ಲಿ ಇದು ಬದಲಾವಣೆಯ ದಿನವಾಗಿದ್ದು, ನಾನು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ’ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.