ಕಚ್ಚಾಟ ನಿಲ್ಲಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತನ್ನಿ: ಖರ್ಗೆ ಖಡಕ್ ಸಂದೇಶ
ಒಗ್ಗಟ್ಟಿನ ಮಂತ್ರ ಜಪಿಸಿಯೇ ನಾವು ಹಿಮಾಚಲ ಗೆದ್ದಿದ್ದೇವೆ. ಅದೇ ಮಾದರಿಯಲ್ಲಿ ಕರ್ನಾಟಕವನ್ನು ಗೆಲ್ಲುವ ಸವಾಲು ನಮ್ಮ ಮುಂದಿದೆ. ನಾನು ಯಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಷ್ಟೆ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ(ಡಿ.11): ‘ಎಐಸಿಸಿ ಅಧ್ಯಕ್ಷ ಗಾದಿ ಏರಿರುವ ನನಗೆ ಗೌರವ ಕೊಡಬೇಕು ಎಂದಾದರೆ ಕರ್ನಾಟಕದಲ್ಲಿರುವ ಪಕ್ಷದ ನಾಯಕರೆಲ್ಲರೂ ಕಚ್ಚಾಟ ನಿಲ್ಲಿಸಿ ಒಂದಾಗಿ ಕೆಲಸ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ತವರಿಗೆ ಆಗಮಿಸಿದ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರನ್ನು ರಾಜ್ಯದ ಕಾಂಗ್ರೆಸ್ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ, ವಿಮಾನ ನಿಲ್ದಾಣದಿಂದ ಭವ್ಯ ಮೆರವಣಿಗೆಯಲ್ಲಿ ಅವರನ್ನು ಕರೆತರಲಾಯಿತು. ಬಳಿಕ, ತಮ್ಮ ಅಭಿನಂದನಾರ್ಥ ಏರ್ಪಡಿಸಿದ್ದ ‘ಕಾಂಗ್ರೆಸ್‌ನ ಕಲ್ಯಾಣ ಕ್ರಾಂತಿ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿಗೆ ಸೆಡ್ಡು ಹೊಡೆವ ಶಕ್ತಿ ಖರ್ಗೆಗಿದೆ: ಎಂಎಲ್‌ಸಿ ಪಾಟೀಲ್
ನಮ್ಮ ನಾಯಕರು ಒಂದಾಗಿ ನಡೆಯಲಿಲ್ಲ ಅಂದರೆ ಜನರಿಗೆ ಮೋಸ ಮಾಡಿದಂತೆ. ಗುಜರಾತ್ ಆಯ್ತು, ಇದೀಗ ಕರ್ನಾಟಕದ ಮೇಲೆ ಮೋದಿ- ಶಾ ಜೋಡಿಯ ಕಣ್ಣಿದೆ. ಕರ್ನಾಟಕ ಗೆಲ್ಲಲು ಅವರು ಬರುತ್ತಿದ್ದಾರೆ. ಕಚ್ಚಾಡುತ್ತಾ ಕುಳಿತರೆ ಬಾಯಿಗೆ ಬರಬೇಕಾದ ತುತ್ತನ್ನು ಕೈಯಿಂದ ಬಿಸಾಕಿದಂತಾಗುತ್ತದೆ. ಅಧಿಕಾರ ಇದ್ದರೆ ನಾವು ನಂಬಿದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಸರ್ಕಾರ ಮಾಡಬಹುದು. ಇಲ್ಲವಾದಲ್ಲಿ ಏನೂ ಮಾಡಲಾಗದು ಎಂದರು.
ಸಿಎಂ ಯಾರೆಂದು ಹೈಕಮಾಂಡ್ ನಿರ್ಧರಿಸುತ್ತೆ:
45 ನಿಮಿಷಗಳ ತಮ್ಮ ಭಾಷಣದಲ್ಲಿ ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಡಾ.ಪರಮೇಶ್ವರ್ ಹೆಸರನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ‘ಈ ಎಲ್ಲಾ ನಾಯಕರ ಉದ್ದೇಶ ಕಾಂಗ್ರೆಸ್ಸನ್ನು ಗೆಲ್ಲಿಸುವುದೇ ಆಗಿದೆ ಎಂಬುದು ಗುಟ್ಟೇನಲ್ಲ. ಒಗ್ಗಟ್ಟಿನ ಮಂತ್ರ ಜಪಿಸಿಯೇ ನಾವು ಹಿಮಾಚಲ ಗೆದ್ದಿದ್ದೇವೆ. ಅದೇ ಮಾದರಿಯಲ್ಲಿ ಕರ್ನಾಟಕವನ್ನು ಗೆಲ್ಲುವ ಸವಾಲು ನಮ್ಮ ಮುಂದಿದೆ ಎಂಬುದನ್ನು ನಾವು ಅರಿಯಬೇಕಿದೆ. ನಿಮ್ಮ ಕೆಲಸಕ್ಕೆ ನನ್ನ ಬೆಂಬಲವಿದೆ. ನಾನು ಯಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಷ್ಟೆ’ ಎಂದರು.
ಎಲ್ಲರೂ ಊರು ಸುತ್ತಿ, ಜನರಿಗೆ ಹತ್ತಿರವಾಗಿರಿ. ಜನಮನ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವಂತೆ ಮಾಡಿ. ಮುಖ್ಯಮಂತ್ರಿ, ಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ನಾನು ಈ ಹುದ್ದೆ ಬಯಸಿದವನಲ್ಲ. ಎಲ್ಲವೂ ನನ್ನನ್ನು ಹುಡುಕಿಕೊಂಡು ಬಂದಿವೆ. 371 (ಜೆ) ಕಲಂ ತಿದ್ದುಪಡಿ ಬಗ್ಗೆ ಈ ಹಿಂದೆ ಸಂಸತ್‌ನಲ್ಲಿ ಪ್ರಸ್ತಾಪ ಮಾಡಿದೆ. ಸೋನಿಯಾ ಗಾಂಧಿಗೆ ಮನವಿ ಸಲ್ಲಿಸಿದೆ. 371 (ಜೆ) ಕಲಂ ಜಾರಿಗೆ ಬರುವಲ್ಲಿ ನನ್ನ ಶ್ರಮವಿದೆ. ಆದರೆ, ಇಂದಿನ ಬಿಜೆಪಿ ಸರ್ಕಾರ ಸಂವಿಧಾನದ ನಿಜ ಆಶಯವನ್ನೇ ಮಣ್ಣುಪಾಲು ಮಾಡುತ್ತಿದೆ ಎಂದು ವಿಷಾದಿಸಿದರು.
ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್‌ನತ್ತ?: ಖರ್ಗೆ ಬಳಿಕ ಸಿದ್ದು ಭೇಟಿ
ಮೋದಿಯದು ಬರೀ ಪ್ರಚಾರ:
ದೇಶಕ್ಕೆ ರಾಜ್ಯಕ್ಕೆ ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿ ಏನನ್ನೂ ಮಾಡಿಲ್ಲ. ಆದರೂ, ಕೆಲವರು ಬಿಜೆಪಿ, ಮೋದಿ ಅಂತ ಜಪಿಸುತ್ತಾರೆ. ನಾವು ಇಷ್ಟೆಲ್ಲ ಕೆಲಸ ಮಾಡಿದರೂ ಯಾಕೆ ಜನ ನಮ್ಮನ್ನು ಮೆಚ್ಚುತ್ತಿಲ್ಲ? ಎಂದು ಪ್ರಶ್ನಿಸಿದರು. ನಮ್ಮ ನಾಯಕರು ಒಂದಾಗಿ ಕೆಲಸ ಮಾಡಿದರೆ ಈ ರಾಜ್ಯ, ಈ ದೇಶದ ಜನತೆಗೆ ಹಿಡಿದಿರುವ ಬಿಜೆಪಿಯ ಹುಚ್ಚನ್ನು ತೊಲಗಿಸಬಹುದು. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಇಡೀ ದೇಶದಲ್ಲಿ 30 ಲಕ್ಷ, ಕಲ್ಯಾಣ ನಾಡಲ್ಲೇ 50 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಆದರೂ, ಆಳುವ ಪಕ್ಷ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಮೋದಿಯವರು ಸುಳ್ಳು ಹೇಳಿಯೇ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ಸನ್ನು ಗೆಲ್ಲಿಸಿದರೆ 5 ವರ್ಷದೊಳಗೆ ಈ ಭಾಗದಲ್ಲಿ ಖಾಲಿ ಇರುವ 1 ಲಕ್ಷ ಹುದ್ದೆ ಭರ್ತಿ ಮಾಡುವುದರ ಜೊತೆಗೆ, ಈ ಭಾಗದ ಅಭಿವೃದ್ಧಿಗೆ ವಾರ್ಷಿಕ 5 ಸಾವಿರ ಕೋಟಿ ರು. ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದರು.
ಒಗ್ಗಟ್ಟಿನ ಮಂತ್ರ ಜಪಿಸಿಯೇ ನಾವು ಹಿಮಾಚಲ ಗೆದ್ದಿದ್ದೇವೆ. ಅದೇ ಮಾದರಿಯಲ್ಲಿ ಕರ್ನಾಟಕವನ್ನು ಗೆಲ್ಲುವ ಸವಾಲು ನಮ್ಮ ಮುಂದಿದೆ. ನಾನು ಯಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಷ್ಟೆ. ಮೊದಲು ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವಂತೆ ಮಾಡಿ. ಸಿಎಂ ಯಾರಾಗಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತೆ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.