ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಬೃಹತ್‌ ಪ್ರತಿಭಟನಾ ಸಭೆ ನಡೆಸಿದ್ದು, ರಾಜಭವನ ಮುತ್ತಿಗೆಗೆ ಯತ್ನಿಸುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.22): ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಬೃಹತ್‌ ಪ್ರತಿಭಟನಾ ಸಭೆ ನಡೆಸಿದ್ದು, ರಾಜಭವನ ಮುತ್ತಿಗೆಗೆ ಯತ್ನಿಸುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಸಲಾಯಿತು. 

ಪ್ರತಿಭಟನೆ ವೇಳೆ ‘ಇ.ಡಿ., ಐಟಿ ಸೇರಿದಂತೆ ಇಡೀ ಬಿಜೆಪಿಯ ದಂಡೇ ಬರಲಿ, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರನ್ನು ಮುಟ್ಟಲೂ ಸಾಧ್ಯವಿಲ್ಲ. ಹೋರಾಟ ಇಂದಿಗೇ ನಿಲ್ಲುವುದಿಲ್ಲ. ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದಲ್ಲೂ ನಿರಂತವಾಗಿ ಹೋರಾಟ ನಡೆಸುತ್ತೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಹೋರಾಟ ಮುಂದುವರೆಸುತ್ತೇವೆ’ ಎಂದು ಕಾಂಗ್ರೆಸ್‌ ನಾಯಕರು ಎಚ್ಚರಿಕೆ ನೀಡಿದರು. ಕೇಂದ್ರದ ವಿರುದ್ಧ ಹರಿಹಾಯ್ದ ನಾಯಕರು ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಗೃಹವಿಜ್ಞಾನ ಕಾಲೇಜು ಮುಂದೆಯೇ ತಡೆದರು. 

National Herald Case: ಇ.ಡಿ.ಯಿಂದ 2 ತಾಸು ಸೋನಿಯಾ ವಿಚಾರಣೆ

ಈ ವೇಳೆ ಡಿ.ಕೆ.ಶಿವಕುಮಾರ್‌, ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಅವರು ಬ್ಯಾರಿಕೇಡ್‌ ಮೇಲೆ ಹಾರಿ ರಾಜಭವನದತ್ತ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ಪ್ರಮುಖ ನಾಯಕರನ್ನು ವಶಕ್ಕೆ ಪಡೆದರು. ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌, ದಿನೇಶ್‌ ಗುಂಡೂರಾವ್‌ ಸೇರಿದಂತೆ ಹಲವರು ಹಾಜರಿದ್ದರು.

ಸೋನಿಯಾರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ: ಇ.ಡಿ.(ಜಾರಿ ನಿರ್ದೇಶನಾಲಯ) ಬರಲಿ. ಐಟಿ (ಆದಾಯ ತೆರಿಗೆ), ಸಿಬಿಐ ಸಹ ಬರಲಿ. ಬಿಜೆಪಿ ದಂಡೇ ಬಂದರೂ ಕಾಂಗ್ರೆಸ್‌ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಮುಟ್ಟಲೂ ಸಾಧ್ಯವಿಲ್ಲ. ಇದು ಕಾಂಗ್ರೆಸ್‌ ಪಕ್ಷದ ಶಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಸಮನ್ಸ್‌ ನೀಡಿ ವಿಚಾರಣೆಗೆ ಕರೆದಿರುವುದನ್ನು ಖಂಡಿಸಿ ಗುರುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಹೋಳಾಗಲು ಕಾಂಗ್ರೆಸ್‌ ಕುಂಬಳಕಾಯಿ ಅಲ್ಲ: ಡಿ.ಕೆ. ಶಿವಕುಮಾರ್‌

ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಕೇಂದ್ರೀಯ ತನಿಖಾ ಸಂಸ್ಥೆಗಳು, ಭಾರತೀಯ ಜನತಾ ಪಕ್ಷದ ದಂಡೇ ಬಂದರೂ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಮುಟ್ಟಲೂ ಕಾಂಗ್ರೆಸ್‌ ಕಾರ್ಯಕರ್ತರು ಬಿಡುವುದಿಲ್ಲ. ಇದು ಕಾಂಗ್ರೆಸ್‌ ಪಕ್ಷದ ಶಕ್ತಿಯಾಗಿದೆ ಎಂದು ತಿರುಗೇಟು ನೀಡಿದರು.