* 'ಹಿಂದುಗಳಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ' ಬ್ಯಾನರ್ ವಿಚಾರ* ಸುನೀಲ್ ಕುಮಾರ್ ಹೇಳಿಕೆಗೆ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ* ಹಿಂದುಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ, ಸಮರ್ಥಿಸಿಕೊಂಡ ಸಚಿವರಿಗೆ ಖಾದರ್ ನೀತಿ ಪಾಠ  

ಮಂಗಳೂರು, (ಜ.30): ನಗರದ ಹೊರವಲಯದ ಉಳ್ಳಾಲಬೈಲ್​ನಲ್ಲಿ ‘ಹಿಂದುಗಳಿಗೆ (Hindu) ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ’ ಎಂಬ ಆಕ್ಷೇಪಾರ್ಹ ಬ್ಯಾನರ್​ಗಳನ್ನು ಅಳವಡಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ (Sunil Kumar) ಸಮರ್ಥಿಸಿಕೊಂಡಿದ್ದಾರೆ.

ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆ ಸಮರ್ಥಿಸಿಕೊಂಡ‌‌ ಸಚಿವ ಸುನಿಲ್ ಕುಮಾರ್, ಬ್ಯಾನರ್ ವಿಚಾರದಲ್ಲಿ ಕಾರ್ಯಕರ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ ಎಂದಿದ್ದರು. ಇದಕ್ಕೆ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ (UT Khader)ಆಕ್ರೋಶ ವ್ಯಕ್ತಪಡಸಿದ್ದಾರೆ. 

Controversial Banner: ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಬ್ಯಾನರ್ ಪಾಲಿಟಿಕ್ಸ್

ಸರ್ಕಾರದ ಸಚಿವರಾಗಿ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ನನ್ನ ಕ್ಷೇತ್ರದಲ್ಲಿ ಇಂಥ ಸಮಸ್ಯೆ ಬರದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರು ಅಂತ ಹೇಳಿಕೊಂಡು ಸಚಿವರುಗಳು ಅವರ ದಿಕ್ಕು ತಪ್ಪಿಸಬಾರದು. ಎಷ್ಟೋ ಕಾರ್ಯಕರ್ತರ ಮಕ್ಕಳು ಫೀಸ್ ಕಟ್ಟದೇ ಮನೆಯಲ್ಲಿ ಇದ್ದಾರೆ, ಅವರ ಫೀಸ್ ಕಟ್ಟಿ. ಕಾರ್ಯಕರ್ತರ ಕುಟುಂಬ ಮನೆ ಕಟ್ಟಲಾಗದೇ ಸಂಕಷ್ಟದಲ್ಲಿದೆ, ಅವರಿಗೆ ಮನೆ ಕಟ್ಟಿ ಕೊಡಿ. ಆಸ್ಪತ್ರೆಯಲ್ಲಿರೋ ಕಾರ್ಯಕರ್ತರ ಕುಟುಂಬದ ಬಿಲ್ ಕಟ್ಟುವ ವ್ಯವಸ್ಥೆ ಮಾಡಿ ಎಂದರು.

ನಿಮಗಾಗಿ ದುಡಿಯೋ ಕಾರ್ಯಕರ್ತರು ಜೈಲು ಸೇರಿ ವಕೀಲರಿಗೂ ಕೊಡೋಕೆ ಹಣ ಇಲ್ಲ, ಅಂಥವರಿಗೆ ಸಹಾಯ ಮಾಡಿ. ಅನೇಕ ಕಾರ್ಯಕರ್ತರು ಕೆಲಸ ಇಲ್ಲದೇ ಇದ್ದಾರೆ, ಅವರಿಗೆ ಕೆಲಸ ಕೊಡಿಸಿ. ಅದು ಬಿಟ್ಟು ಚುನಾವಣೆ ಬಂದಾಗ ಇವರನ್ನ ಹುರಿದುಂಬಿಸಿ, ತಲೆ‌ ಕೆಡಿಸಿ ಸಮಾಜದಲ್ಲಿ ವಿಭಜನೆ ಮಾಡಬೇಡಿ ಎಂದು ಸಚಿವ ಸುನೀಲ್ ಕುಮಾರ್‌ಗೆ ಸಲಹೆ ನೀಡಿದರು.

ನಾಳೆ ಅವರ ಮೇಲೆ ಕೇಸ್ ಆದಾಗ ದೂರ ನಿಂತು ನೋಡೋದು ಯಾವ ಮಂತ್ರಿಗೂ ಶೋಭೆ ತರಲ್ಲ. ನಾನು ಬ್ಯಾನರ್ ಹಾಕಿದವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೆ. ಸಮಾಜದ ಸ್ವಾಸ್ಥ್ಯ ‌ಕೆಡಿಸಿ ಒಬ್ಬೊಬ್ಬರು ಒಂದೊಂದು ಕಡೆ ಬ್ಯಾನರ್ ಹಾಕ್ತಾರೆ

ಬ್ಯಾನರ್ ಹಾಕಿದ ಉಳ್ಳಾಲ ದೇವಸ್ಥಾನಕ್ಕೆ ಎಲ್ಲಾ ಧರ್ಮೀಯರು ಬರ್ತಾರೆ, ನಾನೂ ಹೋಗ್ತೇನೆ. ವೈದ್ಯನಾಥ ದೇವಸ್ಥಾನಕ್ಕೆ ನಾನೇ ಕಾಂಕ್ರೀಟ್ ರಸ್ತೆ ಮಾಡಿಸಿ ಕೊಟ್ಟಿದ್ದೆ ಎಂದು ಹೇಳಿದರು.

ಅದರ ಆಡಳಿತ ಮಂಡಳಿ ಪ್ರೀತಿ ವಿಶ್ವಾಸದಲ್ಲಿ ಇದ್ದಾರೆ. ಆದರೆ ಯಾರೋ ಈ ರೀತಿ ಬಂದು ಬ್ಯಾನರ್ ಹಾಕಿ ಸಮಾಜದ ಸ್ವಾಸ್ಥ್ಯ ಹಾಳು ಮಾಡ್ತಿದಾರೆ. ಯಾವುದೇ ಜಾತಿಯ ಕಿಡಿಗೇಡಿ ಕೂಡ ಸಮಾಜದ ಕಂಟ್ರೋಲ್ ತೆಗೋಳಕೆ ನಾವು ಅವಕಾಶ ಕೊಡಬಾರದು. ಇದಕ್ಕೆ ಸುನೀಲ್ ಕುಮಾರ್ ಕೂಡ ಸಹಕಾರ ಕೊಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ತಿಳಿಸಿದರು.

ವಿಶ್ವ ಹಿಂದು ಪರಿಷತ್ ಬಜರಂಗದಳದಿಂದ ಬ್ಯಾನರ್​ ಅಳವಡಿಕೆ
ಮಂಗಳೂರು ನಗರದ ಹೊರವಲಯದ ಉಳ್ಳಾಲಬೈಲ್​ನಲ್ಲಿ ‘ಹಿಂದುಗಳಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ’ ಎಂಬ ಆಕ್ಷೇಪಾರ್ಹ ಬ್ಯಾನರ್​ಗಳನ್ನು ಅಳವಡಿಕೆ ಮಾಡಲಾಗಿದೆ.

ಈ ನೆಲದ ದೈವ, ದೇವರುಗಳನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ ಎಂದು ವಿಶ್ವ ಹಿಂದು ಪರಿಷತ್ ಬಜರಂಗದಳದಿಂದ ಬ್ಯಾನರ್​ ಅಳವಡಿಕೆ ಮಾಡಲಾಗಿದೆ. ಜೊತೆಗೆ ಜಾತ್ರೆ, ನೇಮ, ಉತ್ಸವಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಿರಲು ಕರೆ‌ ನೀಡಲಾಗಿದೆ.

ಇಂತಹ ಬ್ಯಾನರ್​ಗಳನ್ನು ಮಾಡುವವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ಮಾಜಿ ಶಾಸಕ ಯು.ಟಿ.ಖಾದರ್, ಇಂತಹ ಬ್ಯಾನರ್ ಪ್ರಿಂಟ್ ಮಾಡುವವರ ಮೇಲೆ ಮೊದಲು ಕೇಸ್ ದಾಖಲಿಸಬೇಕು ಎಂದು ಕಿಡಿಕಾರಿದ್ದಾರೆ.