ಸಿದ್ದರಾಮಯ್ಯ 12 ಸಾವಿರ ಕೋಟಿ ರು. ಮೊತ್ತದ ಕೊರತೆ ಬಜೆಟ್‌ ಮಂಡಿಸಿದ್ದಾರೆ. ಅವರ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಕೊರತೆ ಬಜೆಟ್‌ ಮಂಡಿಸಲು ಈ ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಕಾರಣ. ರಾಜ್ಯವನ್ನು ಆರ್ಥಿಕವಾಗಿ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಹಾಳು ಮಾಡಿ ಹೋಗಿದ್ದಾರೆ. ಅವರು ಈಗ ಸದನದಲ್ಲಿ ಇದ್ದಿದ್ದರೆ ಎಲ್ಲವನ್ನೂ ಪ್ರಶ್ನಿಸುತ್ತಿದ್ದೆ ಎಂದ ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ 

ವಿಧಾನಸಭೆ(ಜು.21): ‘ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಹಾಗೂ ಕೇಂದ್ರದ ಮಲತಾಯಿ ಧೋರಣೆಯಿಂದ ರಾಜ್ಯವು ಆರ್ಥಿಕವಾಗಿ ದಿವಾಳಿಯಾಗುವ ಹಂತ ತಲುಪಿದೆ. 2.55 ಲಕ್ಷ ಕೋಟಿ ರು. ಮೊತ್ತದ ಕಾಮಗಾರಿಗಳು ಬಾಕಿ ಇವೆ. ತನ್ಮೂಲಕ ಮುಂದಿನ 5 ವರ್ಷ ಶಾಸಕರು ಯಾವುದೇ ಪ್ರಮುಖ ಕಾಮಗಾರಿ ಕೈಗೆತ್ತಿಕೊಳ್ಳಲಾಗದಂತೆ ಮಾಡಿ ಹೋಗಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರ ಅನುಪಸ್ಥಿತಿಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 12 ಸಾವಿರ ಕೋಟಿ ರು. ಮೊತ್ತದ ಕೊರತೆ ಬಜೆಟ್‌ ಮಂಡಿಸಿದ್ದಾರೆ. ಅವರ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಕೊರತೆ ಬಜೆಟ್‌ ಮಂಡಿಸಲು ಈ ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಕಾರಣ. ರಾಜ್ಯವನ್ನು ಆರ್ಥಿಕವಾಗಿ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಹಾಳು ಮಾಡಿ ಹೋಗಿದ್ದಾರೆ. ಅವರು ಈಗ ಸದನದಲ್ಲಿ ಇದ್ದಿದ್ದರೆ ಎಲ್ಲವನ್ನೂ ಪ್ರಶ್ನಿಸುತ್ತಿದ್ದೆ ಎಂದರು.

ಐಎಎಸ್ ಅಧಿಕಾರಿಗಳ ದುರ್ಬಳಕೆ, ದಲಿತ ಅಸ್ತ್ರ ಹಿಡಿದು ಬಿಜೆಪಿ-ಕಾಂಗ್ರೆಸ್ ಹೋರಾಟ!

ಸಿದ್ದರಾಮಯ್ಯ ಸರ್ಕಾರದಲ್ಲಿ 2013-18ರ ಅವಧಿಯಲ್ಲಿ ಕೈಗಾರಿಕಾ ಬೆಳವಣಿಗೆ ದರ ಶೇ.8.70 ರಷ್ಟಿತ್ತು. ಇದೀಗ ಶೇ.3.86ಕ್ಕೆ ತಂದಿದ್ದಾರೆ. ಇವರು ಕೈಗಾರಿಕೆ ಅಭಿವೃದ್ಧಿ ಮಾಡುತ್ತಾರಾ? ಇವರ ಹಣೆಬರಹಕ್ಕೆ ಎಲ್ಲಾ ಕ್ಷೇತ್ರಗಳನ್ನೂ ಹಾಳು ಮಾಡಿದ್ದಾರೆ. ಸೇವಾವಲಯದಲ್ಲಿ ಶೇ.9.6ರಷ್ಟುಪ್ರಗತಿ ಇತ್ತು. ಅದು ಶೇ.4.25ಕ್ಕೆ ಇಳಿದಿದೆ. ಕಳೆದ ಆರು ತಿಂಗಳಲ್ಲೇ 95,000 ಕೋಟಿ ರು. ಕಾಮಗಾರಿಗಳಿಗೆ ಅನುಮೋದನೆ ನೀಡಿ ರಾಜ್ಯದ ಆರ್ಥಿಕತೆ ಮೇಲೆ ಬಂಡೆ ಎಳೆದಿದ್ದಾರೆ ಎಂದು ಕಿಡಿ ಕಾರಿದರು.

2.55 ಲಕ್ಷ ಕೋಟಿ ಮೊತ್ತದ ಕಾಮಗಾರಿ ಬಾಕಿ:

ಪ್ರಸ್ತುತ 2.55 ಲಕ್ಷ ಕೋಟಿ ರು. ಮೊತ್ತದ ಕಾಮಗಾರಿಗಳು ಬಾಕಿಯಿವೆ. 60 ಸಾವಿರ ಕೋಟಿ ರು. ಯೋಜನಾ ವೆಚ್ಚದಲ್ಲಿ 2.55 ಲಕ್ಷ ಕೋಟಿ ಕಾಮಗಾರಿ ಮಾಡಲು ಸಾಧ್ಯವೇ? ವಿವೇಚನಾ ರಹಿತವಾಗಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ಟೆಂಡರ್‌ ಕೊಟ್ಟು ಹೋಗಿದ್ದಾರೆ. ಮುಂದಿನ 5 ವರ್ಷ ಶಾಸಕರಿಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಇಷ್ಟೆಲ್ಲಾ ಕಾಮಗಾರಿಗಳು ಬಾಕಿ ಇದ್ದರೂ ಹೇಗೆ ತರಾತುರಿಯಲ್ಲಿ ಕಳೆದ ವರ್ಷ 1 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದರು? ಇವು ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದ ಕ್ರಮಗಳಲ್ಲವೇ? ಇವರು ಬಂದ ಮೇಲೆ ಯಾವುದೇ ಅಭಿವೃದ್ಧಿ ಆಗದಿದ್ದರೂ 2.5 ಲಕ್ಷ ಕೋಟಿಯಷ್ಟಿದ್ದ ಸಾಲದ ಪ್ರಮಾಣ 5.6 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇವರನ್ನು ಟೀಕಿಸಲು ಇದಕ್ಕಿಂತ ವಿಷಯ ಬೇಕೆ ಎಂದು ಕಿಡಿ ಕಾರಿದರು.

Party Rounds: ಅಮಾನತು ವಿರುದ್ಧ ಬಿಜೆಪಿ, ಜೆಡಿಎಸ್ ಅಸ್ತ್ರ, ರಾಜ್ಯಪಾಲರಿಗೆ ದೂರು

ಸ್ಪೀಕರ್‌ ಮೇಲೆ ಗರಂ:

ಇದಕ್ಕೂ ಮೊದಲು ಶಿವಲಿಂಗೇಗೌಡರ ಮಾತಿನ ನಡುವೆ ಇನ್ನೆಷ್ಟುಹೊತ್ತು ಮಾತನಾಡುತ್ತೀರಿ ಎಂದು ಪ್ರಶ್ನಿಸಿದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕಾಗದಗಳನ್ನು ಇಲ್ಲೇ ಎಸೆದು ಹೋಗುತ್ತೇನೆ. ಭಜನೆ ಮಾಡುವವರಿಗೆ ಗಂಟೆಗಟ್ಟಲೆ ಅವಕಾಶ ನೀಡುತ್ತೀರಿ. ರಾಜ್ಯದ ವಿಚಾರ ಮಾತನಾಡುವಾಗ ಹೀಗೆ ಮಾತನಾಡುತ್ತೀರಿ. ಸ್ವಲ್ಪ ಆದರೂ ಘನತೆ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಗ್ರಾಪಂನಲ್ಲಿ ಇಂಗ್ಲಿಷ್‌ ಶಾಲೆ ತೆರೆಯಿರಿ’

ರಾಜ್ಯದಲ್ಲಿ ಜನರಿಗೆ ಮಕ್ಕಳ ಇಂಗ್ಲಿಷ್‌ ಕಲಿಕೆ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಅವರ ಭವಿಷ್ಯಕ್ಕೆ ಅನಿವಾರ್ಯವೂ ಹೌದು. ಈ ನಿಟ್ಟಿಲ್ಲಿ ಪ್ರಸಕ್ತ ಬಜೆಟ್‌ನಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಕೆಪಿಎಸ್‌ ಆಂಗ್ಲ ಮಾಧ್ಯಮ ಶಾಲೆ ಕ್ಯಾಂಪಸ್‌ ಮಾಡಬೇಕು. ಸುತ್ತಮುತ್ತಲಿನ ಊರುಗಳ ಮಕ್ಕಳಿಗೆ ಸರ್ಕಾರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.