ಬೆಂಗಳೂರಿನ ಮಡಿವಾಳದ ಲಾಡ್ಜ್‌ನಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಬೇರೆಯವರ ಹೆಸರಲ್ಲಿ ಬುಕ್ ಆಗಿದ್ದ ರೂಂನಲ್ಲಿದ್ದ ಈತನ ಜೊತೆಗಿದ್ದ ವ್ಯಕ್ತಿ ಪರಾರಿಯಾಗಿದ್ದು, ಬಾಯಲ್ಲಿ ರಕ್ತ ಕಂಡುಬಂದಿರುವುದು ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

ಬೆಂಗಳೂರು (ಮೇ.21): ನಗರದ ಮಡಿವಾಳದ ಮಾರುತಿ ನಗರದಲ್ಲಿರುವ ಖಾಸಗಿ ಲಾಡ್ಜ್ ಒಂದರಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತನನ್ನು ತಮಿಳುನಾಡಿನ ಪುಳಿಯಂಪಟ್ಟಿ ನಿವಾಸಿ ಮುರಳಿ ಅಲಿಯಾಸ್ ಮಧು (38) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಲಾಡ್ಜ್‌ನ ರೂಂ ಒಂದರಲ್ಲಿ ಹಾಸಿಗೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದಾತ ಬಳಿಕ ಮೃತಪಟ್ಟಿದ್ದಾನೆ.

ಪೊಲೀಸರ ತನಿಖೆಯಲ್ಲಿ ಬೆಚ್ಚಿಬಿಳಿಸುವ ಮಾಹಿತಿ!

ಪೊಲೀಸರ ತನಿಖೆಯಲ್ಲಿ ಇನ್ನೂ ಕುತೂಹಲಕಾರಿ ಮಾಹಿತಿ ಹೊರಬಂದಿದೆ. ಲಾಡ್ಜ್‌ನಲ್ಲಿ ರೂಂ ಅನ್ನು ಬೇರೆ ವ್ಯಕ್ತಿಯ ಹೆಸರಲ್ಲಿ ಬುಕ್ ಮಾಡಲಾಗಿತ್ತು. ಆದರೆ, ಎಂಟ್ರಿ ದಾಖಲೆ ಇಲ್ಲದೇ ಮುರಳಿಯೂ ಅದೇ ರೂಂಗೆ ಬಂದಿದ್ದ ಎನ್ನಲಾಗಿದೆ. ಇನ್ನಷ್ಟು ಶಾಕ್ ಕೊಟ್ಟ ಸಂಗತಿ ಏನೆಂದರೆ, ಮುರಳಿ ಸಾವಿನ ಬಳಿಕ ಅವನ ಜೊತೆಯಲ್ಲಿದ್ದ ವ್ಯಕ್ತಿ ಅಲ್ಲಿಂದಲೇ ಎಸ್ಕೇಪ್ ಆಗಿದ್ದಾನೆ. ಇದರಿಂದ ಪ್ರಕರಣ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಬಾಯಲ್ಲಿ ರಕ್ತ ಡ್ರಗ್ಸ್‌ನಿಂದ ಸಾವಾಯಿತೇ? ಕೊಲೆಯೇ?

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಮುರಳಿಯ ಬಾಯಲ್ಲಿ ರಕ್ತ ಕಂಡುಬಂದಿದೆ. ಡ್ರಗ್ಸ್ ಸೇವನೆಯಿಂದ ಸಾವಾಯಿತೇ? ಅಥವಾ ಆರೋಗ್ಯ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡನೇ? ಎಂಬ ಹಲವು ಅನುಮಾನಗಳು ಮೂಡಿವೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತನ ಪೋಷಕರಿಗೂ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ವ್ಯಕ್ತಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.