ಬಿಜೆಪಿ ಮುಖಂಡರ ಸವಾಲು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊರಕೆ, ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ಪಕ್ಷಗಳ ನಡುವೆ ಘೋಷಣೆಗಳ ಸಮರ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ದಾವಣಗೆರೆ (ಮಾ.29): ತಾಕತ್ತಿದ್ದರೆ ದಾವಣಗೆರೆಗೆ ಬಾ ಎಂಬ ಬಿಜೆಪಿ ಮುಖಂಡ ಬಿ.ಜಿ.ಅಜಯಕುಮಾರ್‌ ಸವಾಲನ್ನು ಸ್ವೀಕರಿಸಿ ಶನಿವಾರ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ್‌ ಅವರು ತಮ್ಮ ಪಕ್ಷದ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ಪ್ರಚಾರ ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ಧ ಕಿಡಿಕಾರಿದ್ದು, ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊರಕೆ ಹಿಡಿದು ಚಪ್ಪಲಿ ತೋರಿಸಿದ ಬಿಜೆಪಿ

ನಗರದ ಕೆ.ಬಿ.ಬಡಾವಣೆಯಲ್ಲಿ ಶನಿವಾರ ಬಿಎಂಡಬ್ಲ್ಯು ಕಾರಿನ ಮೇಲೆ ನಿಂತ ಪ್ರದೀಪ ಈಶ್ವರ ಕಾಂಗ್ರೆಸ್ ಬಾವುಟ ಹಿಡಿದು, ತೊಡೆತಟ್ಟುತ್ತಾ, ತಲೆಗೂದಲನ್ನು ಸವರಿಕೊಂಡು ಬಿಜೆಪಿಗರನ್ನು ಕೆಣಕಿದರು. ಈ ವೇಳೆ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಕೈಯಲ್ಲಿ ಪೊರಕೆ ಹಿಡಿದು ತೋರಿಸಿ ಆಕ್ರೋಶ ಹೊರಹಾಕಿದರು.

ಬಿಜೆಪಿ-ಕಾಂಗ್ರೆಸ್ ಮುಖಾಮುಖಿ:ರಣರಂಗ

ಬಡಾವಣೆಯ ಬಿಜೆಪಿ ಕಚೇರಿ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಗುಂಪುಗಳು ಮುಖಾಮುಖಿಯಾಗಿ, ಪರಸ್ಪರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಕಾರಿನ ಮೇಲೆ ನಿಂತಿದ್ದ ಶಾಸಕನಿಗೆ ಬಿಜೆಪಿಯವರು ನಿಂದಿಸಿದರು. ಎರಡೂ ಕಡೆಯವರು ಪರಸ್ಪರರ ಕೈ-ಕೈ ಮಿಲಾಯಿಸುವಂತೆ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹರಸಾಹಸ ಸಮಾಧಾನ ಪಡಿಸಿದರು.