ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಶಾಸಕ ಎನ್‌.ವೈ. ಗೋಪಾಲಕೃಷ್ಣ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುದಾನದ ಕೊರತೆ ಮತ್ತು ಸಚಿವರ ನಿರ್ಲಕ್ಷ್ಯದ ಬಗ್ಗೆ ಅವರು ಬಹಿರಂಗವಾಗಿ ಆರೋಪಿಸಿದರು.

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಗಡಿನಾಡ ಉತ್ಸವದಲ್ಲಿ ಕಾಂಗ್ರೆಸ್ ಶಾಸಕ ಎನ್‌.ವೈ. ಗೋಪಾಲಕೃಷ್ಣ ತಮ್ಮ ಸರ್ಕಾರದ ವಿರುದ್ಧವೇ ಅಸಮಧಾನ ಹೊರ ಹಾಕಿದ್ದಾರೆ. ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಗೋಪಾಲಕೃಷ್ಣ, ಗೃಹ ಸಚಿವರ‌ ಎದುರೇ ಸರ್ಕಾರದ ವಿರುದ್ಧ ಅಸಮಧಾನ ಹೊರ ಹಾಕಿದರು. ಅನುದಾನ ಸಿಗಲಾರದೇ ಶಾಸಕರು ಪರದಾಟ ನಡೆಸುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದರು. ಬಯಲುಸೀಮೆ ಪ್ರದೇಶಕ್ಕೆ ನೀಡುವ 40 ಕೋಟಿ‌ ಅನುದಾನಕ್ಕೆ 80-90 ಜನ ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ. ಪ್ರತಿ ವರ್ಷ ನಮಗೆ ಕೇವಲ 30-40 ಲಕ್ಷ‌ ಕೊಡ್ತಾರೆ. ಈ ಲಕ್ಷಗಳಲ್ಲಿ ನಾವು ಏನು ಕೆಲಸ ಮಾಡಲು ಆಗಲ್ಲ ಎಂದು ಹೇಳಿದರು.

ಈ‌ ಬಾರಿ ಬಜೆಟ್‌ನಲ್ಲಿ‌ ಮಧ್ಯ ಕರ್ನಾಟಕಕ್ಕೆ ಅನುದಾನ ಹೆಚ್ಚು ನೀಡುವಂತೆ ಮನವಿ ಮಾಡಿದ್ದೇನೆ. ಅವಕಾಶ ಸಿಕ್ಕರೆ ಸಿಎಂಗೆ ಒಂದು ಮಾತು ಹೇಳಿ. ಹಣ ಕೊಡಿಸಿ ಅನುಕೂಲ‌ ಮಾಡುವಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿಕೊಂಡರು.

ಸಚಿವ ಶಿವರಾಜ್ ತಂಗಡಗಿ ಅವರಿಗೆ ಇಲ್ಲಿಯ ತನಕ 20 ಪತ್ರ‌ ಕೊಟ್ಟಿದ್ದೇನೆ. ಇಲ್ಲಿ‌ ಒಂದು ರಂಗಮಂದಿರ ಮತ್ತು ಕನ್ನಡ ಭವನ ನಿರ್ಮಿಸುವಂತೆ‌ ಕೇಳಿದ್ದೇನೆ. ಸಚಿವರಿಗೆ ಪತ್ರ ಕೊಟ್ಟು,ಮನವಿ ಮಾಡಿ ಎರಡು ವರ್ಷ ಕಳೆದಿದೆ. ನಮ್ಮ‌ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ದುಡ್ಡು ಸಹ ಕೊಡಲಿಲ್ಲ. ನಾನು ಸಚಿವರಿಗೆ ಬಹಳ‌ ಹಣ ಕೇಳಿಲ್ಲ, ಕೇವಲ‌ 20 ಲಕ್ಷ‌ ರೂಪಾಯಿ ಕೇಳಿದ್ದೇನೆ. ಆ ಹಣವನ್ನು ಕೊಟ್ಟರೆ‌ ಅದರೊಂದಿಗೆ ನನ್ನ ಕೋಟಾದ 15 ಲಕ್ಷ‌ ಹಣ ಹಾಕಿ‌‌ ರಂಗಮಂದಿರ ನಿರ್ಮಾಣ‌ ಮಾಡಿಸುವೆ ಎಂದು ಸಚಿವ ಶಿವರಾಜ್‌ ತಂಗಡಗಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

ನೀವು ಸಚಿವ ಶಿವರಾಜ್‌ ತಂಗಡಗಿಗೆ ಹೇಳಿ‌ ಹಣ ಕೊಡಿಸಿದರೆ ಈ ಭವನಕ್ಕೆ ಪರಮೇಶ್ವರ್ ಎಂದು ಹೆಸರಿಡುತ್ತೇವೆ ಎಂದು ಶಾಸಕ ಗೋಪಾಲಕೃಷ್ಣ ಮನವಿ ಸಲ್ಲಿಸುತ್ತಿದ್ದಂತೆ ಗೃಹ ಸಚಿವ ಜಿ ಪರಮೇಶ್ವರ್ ತಲೆ ತಗ್ಗಿಸಿದರು. ಇದಕ್ಕೆ ತಲೆ ಮೇಲೆ ಕೈ ಇಟ್ಕೊಬೇಡಿ ಎಂದು ಗೃಹ ಸಚಿವರ ಕಾಲೆಳೆದರು. ಇದೇ ವೇದಿಕೆಯಲ್ಲಿದ್ದ ಮಾಜಿ ಸಚಿವ ಆಂಜನೇಯ ಮೂಕ ಪ್ರೇಕ್ಷಕರಾದರು.

ಜಿ.ಪರಮೇಶ್ವರ್ ಹೇಳುತ್ತಿದ್ದೇನು?
ಕಾರ್ಯಕ್ರಮದ ಬಳಿಕ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೆಎನ್ ರಾಜಣ್ಣ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ನಾವು ದಲಿತ ಸಮಾವೇಶ ಮಾಡಲು ಹೊರಟಿದ್ದೇವು, ಹೈಕಮಾಂಡ್ ಸೂಚನೆ ಮೇರೆಗೆ ಮುಂದೂಡಲಾಗಿದೆ. ಚುನಾವಣೆ ಪೂರ್ವ ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ ಮಾಡಿದ್ದೇವು. ಸಮಾವೇಶದ ಕೆಲ ನಿರ್ಣಯ ಅನುಷ್ಠಾನ, ಇನ್ನೂ ಕೆಲವು ಆಗಿಲ್ಲ. ಆ ಬಗ್ಗೆ ಚರ್ಚಿಸಲು ಸಮಾವೇಶಕ್ಕೆ ಸಿದ್ಧರಾಗಿದ್ದೆವು. ರಾಜಕೀಯ ಕಾರಣಕ್ಕೆ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಸೂಚಿಸಿತ್ತು. ಆದ್ರೆ ಸದ್ಯದ ದಲಿತ ಸಮಾವೇಶದ ಮಾಹಿತಿ ಇಲ್ಲ. ಇದೇ ವೇಳೆ ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಜಿ.ಪರಮೇಶ್ವರ್, ರಾಜಕೀಯ ಪ್ರಶ್ನೆಗೆ ಉತ್ತರಿಸಲ್ಲ ಎಂದರು.

ಇದನ್ನೂ ಓದಿ: ಶಿಷ್ಟಾಚಾರ ಉಲ್ಲಂಘಿಸಿ ಅರೋಗ್ಯ ಕೇಂದ್ರ ಉದ್ಘಾಟಿಸಿದ ಬಿಜೆಪಿ | Health Minister controversy | Suvarna News

ದಿನೇಶ್ ಗುಂಡೂರಾವ್ ಪ್ರತ್ರಿಕ್ರಿಯೆ
ದಲಿತ ಸಮಾವೇಶಕ್ಕೆ ವಿಚಾರದ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದಲಿತ ಸಮಾವೇಶ ಮಾಡೋದು ಬೇಡ ಎಂದು ಯಾರು ಅಂದಿಲ್ಲ. ಯಾವ ರೀತಿ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆ ದಾವಣಗೆರೆಯಲ್ಲೂ ದೊಡ್ಡ ಸಮಾವೇಶ ಮಾಡಿದ್ದೀವಿ. ಕಾಂಗ್ರೆಸ್ ಯಾವತ್ತೂ ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷ. ಶೋಷಿತ ವರ್ಗದ ಪರ ಧ್ವನಿ ಎತ್ತಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕೆ ಇದೆ. ಬಹಳ ದೊಡ್ಡ ಕಾರ್ಯಕ್ರಮ ಮಾಡಬೇಕು ಅನ್ನೋ ಒಳ್ಳೆ ಉದ್ದೇಶ ಇದೆ. ಆದರೆ ಅದು ಯಾವ ರೂಪದಲ್ಲಿ ಆಗಬೇಕು ಅನ್ನೋದರ ಬಗ್ಗೆ ತೀರ್ಮಾನವಾಗಬೇಕಿದೆ ಎಂದು ಹೇಳಿದರು. 

ದಲಿತ ಸಿಎಂ ಬಗ್ಗೆ ಯಾರು ಮಾತನಾಡುತ್ತಿಲ್ಲ. ಈ ಹಿಂದೆಯೂ ದಲಿತ ಸಿಎಂ ಬಗ್ಗೆ ಚರ್ಚೆ ಇತ್ತು. ಅವತ್ತು ನಮ್ಮ ಸರಕಾರ ರಚನೆಯಾಗಿದ್ರೆ ಖರ್ಗೆ ಸಾಹೇಬ್ರು ಸಿಎಂ ಆಗುತ್ತಿದ್ದರು. ಪರಮೇಶ್ವರ್ ಸಾಹೇಬ್ರಿಗೂ ಸಿಎಂ ಆಗೋ ಅವಕಾಶ ಇತ್ತು . ಚುನಾವಣೆಯಲ್ಲಿ ಅವರು ಗೆಲ್ಲಕಾಗಲಿಲ್ಲ. ಹಿಂದುಳಿದ ವರ್ಗ ಸಣ್ಣ ಸಣ್ಣ ವರ್ಗ ಮುಖ್ಯಮಂತ್ರಿಯಾಗಿರೋದು ಕಾಂಗ್ರೆಸ್ ನಲ್ಲಿ ಮಾತ್ರ, ಬೇರೆ ಪಕ್ಷದಲ್ಲಿ ಒಂದು ಪ್ರಬಲ ವರ್ಗಕ್ಕೆ ಮಾತ್ರ ಸಿಎಂ ಆಗೋ ಅವಕಾಶವಿದೆ ಎಂದು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: 

Scroll to load tweet…