ಮುಸ್ಲಿಂ ಮೀಸಲು ಮರುಜಾರಿ, ಒಟ್ಟು ಮಿತಿ 75%ಕ್ಕೆ ಹೆಚ್ಚಳ: ಕಾಂಗ್ರೆಸ್‌

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿ ಘೋಷಿಸಿರುವ ಮೀಸಲು ವಿಂಗಡಣೆ ಬದಲಿಸಿ ಒಟ್ಟು ಮೀಸಲಾತಿ ಮಿತಿಯನ್ನು ಶೇ.75ಕ್ಕೆ ಹೆಚ್ಚಳ ಮಾಡಲಾಗುವುದು. ತನ್ಮೂಲಕ ಎಲ್ಲಾ ಅರ್ಹ ಸಮುದಾಯಗಳಿಗೂ ಮೀಸಲಾತಿ ಹೆಚ್ಚಳ ಮಾಡಲಾಗುವುದು ಎಂದು ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

Congress Manifesto Muslim reservation reintroduced total limit increased to 75 Percent gvd

ಬೆಂಗಳೂರು (ಮೇ.03): ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿ ಘೋಷಿಸಿರುವ ಮೀಸಲು ವಿಂಗಡಣೆ ಬದಲಿಸಿ ಒಟ್ಟು ಮೀಸಲಾತಿ ಮಿತಿಯನ್ನು ಶೇ.75ಕ್ಕೆ ಹೆಚ್ಚಳ ಮಾಡಲಾಗುವುದು. ತನ್ಮೂಲಕ ಎಲ್ಲಾ ಅರ್ಹ ಸಮುದಾಯಗಳಿಗೂ ಮೀಸಲಾತಿ ಹೆಚ್ಚಳ ಮಾಡಲಾಗುವುದು ಎಂದು ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅಲ್ಲದೆ, ಮೊದಲ ಅಧಿವೇಶನದಲ್ಲೇ ನ್ಯಾ. ಸದಾಶಿವ ಆಯೋಗದ ವರದಿ ಮಂಡನೆ ಮಾಡಿ ಪರಿಶಿಷ್ಟಜಾತಿಯ ಉಪ ಪಂಗಡಗಳಿಗೆ ಮೀಸಲಾತಿ ನ್ಯಾಯ ಒದಗಿಸಲಾಗುವುದು ಎಂದು ಘೋಷಿಸಿದೆ.

ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಗಂಭೀರ ಚರ್ಚೆಗೊಳಗಾಗಿರುವ ಮೀಸಲಾತಿ ಬಗ್ಗೆ ತನ್ನ ಸ್ಪಷ್ಟನಿಲುವು ಪ್ರಕಟಿಸಿರುವ ಕಾಂಗ್ರೆಸ್‌ ಪಕ್ಷ ಒಟ್ಟು ಮೀಸಲಾತಿ ಮಿತಿಯನ್ನು ಶೇ.50 ರಿಂದ 75ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದೆ. ಎಸ್ಸಿ ಮೀಸಲಾತಿ ಶೇ.15ರಿಂದ ಶೇ.17ಕ್ಕೆ, ಎಸ್ಟಿಮೀಸಲಾತಿ ಶೇ.3ರಿಂದ ಶೇ.7ಕ್ಕೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರ ಈಡೇರಿಸಲು ಮೀಸಲಾತಿ ಮಿತಿ ಶೇ.50 ರಿಂದ 75ಕ್ಕೆ ಹೆಚ್ಚಳ ಮಾಡಲಾಗುವುದು. ಅಲ್ಪಸಂಖ್ಯಾತರ ಮೀಸಲಾತಿ ಶೇ.4ಕ್ಕೆ ಮರು ಸ್ಥಾಪನೆ ಮಾಡಲಾಗುವುದು. ತನ್ಮೂಲಕ ಇವನ್ಯಾರವ ಇವನ್ಯಾರವ ಎನ್ನದಿರಯ್ಯ ಎಂಬ ಬಸವಣ್ಣನವರ ವಚನ ಪಾಲಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.

ಕಾಂಗ್ರೆಸ್‌ನದ್ದು ಬೋಗಸ್‌ ಪ್ರಣಾಳಿಕೆ: ಸಿಎಂ ಬೊಮ್ಮಾಯಿ ಲೇವಡಿ

ಹಾವನೂರು ಆಯೋಗ ವರದಿಯಂತೆ ಅಭಿವೃದ್ಧಿ: ಕಾಂಗ್ರೆಸ್‌ ಸರ್ಕಾರ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಜನಗಣತಿ ವರದಿ ಅನುಷ್ಠಾನಕ್ಕೆ ತರುತ್ತೇವೆ. ಈ ಮೂಲಕ ಎಲ್ಲರಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುತ್ತೇವೆ. ಇನ್ನು ಹಾವನೂರು ಆಯೋಗದ ಪ್ರಕಾರ ಪ್ರವರ್ಗ- 1ರಲ್ಲಿರುವ 58 ಜಾತಿಗಳು ಬುಡಕಟ್ಟು ಸ್ವಭಾವ ಹೊಂದಿವೆ. ಅಲೆಮಾರಿ, ಅರೆ ಅಲೆಮಾರಿ ಜಾತಿಗಳು ಸಹ ಈ ಪ್ರವರ್ಗದಲ್ಲಿವೆ. ಈ ಪ್ರವರ್ಗದಲ್ಲಿರುವ ಜನರು ಶಿಕ್ಷಣ, ಉದ್ಯೋಗ, ಉದ್ಯಮಗಳಲ್ಲಿ ಅತಿ ಕನಿಷ್ಠ ಪಾಲು ಹೊಂದಿದ್ದು ಇವರಿಗೆ ನ್ಯಾಯ ಒದಗಿಸಲು 60 ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದೆ.

ಮೊದಲ ಸಂಪುಟ ಸಭೆಯಲ್ಲೇ ಐದೂ ಗ್ಯಾರಂಟಿಗಳು ಜಾರಿ: ಕಾಂಗ್ರೆಸ್‌ ನೀಡಿರುವ 5 ಗ್ಯಾರಂಟಿಗಳ ಜತೆಗೆ ನಮ್ಮ ಸರ್ಕಾರ ರಚನೆಯಾದ ಬಳಿಕ ನಡೆಯುವ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಅವನ್ನು ಅನುಷ್ಠಾನಗೊಳಿಸಲು ಆದೇಶಿಸುವ 6ನೇ ಗ್ಯಾರಂಟಿಯನ್ನು ನಾನು ನೀಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದ್ದೆವು. ಆದರೆ, ಬಿಜೆಪಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿ ಮಾಡಲು ಪ್ರಾಮಾಣಿಕತೆ ತೋರಿಲ್ಲ. ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಸಮಸ್ಯೆಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಲಿದೆ ಎಂದರು.

ರಾಜ್ಯ ರಾಜಕೀಯಕ್ಕೆ ಬರುವ ಆಸೆ ಇಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನಾವು ಬೊಗಳೆ ಭರವಸೆ, ಟೊಳ್ಳು ಮಾತುಗಳನ್ನಾಡುವುದಿಲ್ಲ. ನಾವು ಅನುಷ್ಠಾನಗೊಳಿಸುವುದನ್ನೇ ಭರವಸೆಯನ್ನಾಗಿ ನೀಡಿದ್ದೇವೆ. ನಾವು ಕೊಟ್ಟಮಾತನ್ನು ಉಳಿಸಿಕೊಳ್ಳುವ ಜನ. ಎಲ್ಲ ವರ್ಗದವರಿಗೂ ಅನುಕೂಲವಾಗುವಂತಹ ಪ್ರಣಾಳಿಕೆಯನ್ನು ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ. ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios