Gujarat Election 2022: ನರೇಂದ್ರ ಮೋದಿ ಸ್ಟೇಡಿಯಂ ಹೆಸರು ಬದಲಾವಣೆ, ಉದ್ಯೋಗ ಭರವಸೆ ನೀಡಿದ ಕಾಂಗ್ರೆಸ್ ಪ್ರಣಾಳಿಕೆ!
ಹಿಮಾಚಲ ಪ್ರದೇಶದಲ್ಲಿ ವಿಧಾಸಭೆಗೆ ಚುನಾವಣೆ ನಡೆಯುವ ದಿನವೇ ಕಾಂಗ್ರೆಸ್ ಪಕ್ಷ, ಗುಜರಾತ್ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜಸ್ಥಾನ ಸಿಎಂ ಅಶೋಕ್ ಗ್ಲೆಹೊಟ್, ಸ್ಥಳೀಯ ನಾಯಕರೊಂದಿಗೆ ಶನಿವಾರ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಅಹಮದಾಬಾದ್ (ನ.12): ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡುವ ಗುರಿಯಲ್ಲಿರುವ ಕಾಂಗ್ರೆಸ್ ಪಕ್ಷ, ಶನಿವಾರ ರಾಜಧಾನಿ ಅಹಮದಾಬಾದ್‌ನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯ ಪ್ರಮುಖ ಘೋಷಣೆಗಳೆಂದರೆ, ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದ ಸ್ಟೇಡಿಯಂನಲ್ಲಿ ಹೆಸರು ಬದಲಾವಣೆ, 300 ಯುನಿಟ್‌ಗಳ ಉಚಿತ ವಿದ್ಯುತ್, ರೈತರಿಗೆ ಸಾಲ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದೆ. ಅದರೊಂದಿಗೆ ಬಲ್ಕಿಸ್ ಬಾನೋ ಗ್ಯಾಂಗ್‌ರೇಪ್‌ನಲ್ಲಿ ಅಪಪಾಧಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಎಲ್ಲರನ್ನೂ ಮತ್ತೆ ಜೈಲಿಗೆ ಕಳಿಸಲಾಗುತ್ತದೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ವಿಶ್ವದ ಅತೀದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನ್ನುವ ಹೆಮ್ಮೆಯ ನರೇಂದ್ರ ಮೋದಿ ಸ್ಟೇಡಿಯಂನ ಹೆಸರನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಆಗಿ ಬದಲಿಸಲಾಗುವುದು ಎಂದಿದೆ.
10 ಲಕ್ಷ ಕೆಲಸ, ನಿರುದ್ಯೋಗಿಗಳಿಗೆ ಭತ್ಯೆ: ಅಧಿಕಾರ ಸಿಕ್ಕ ನಂತರ 10 ಲಕ್ಷ ಸರ್ಕಾರಿ ಉದ್ಯೋಗವನ್ನು ಸೃಷ್ಟಿ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಇದರಲ್ಲಿ ಮಹಿಳೆಯರಿಗೆ ಶೇ.50ರಷ್ಡು ಮೀಸಲಾತಿ ಇರಲಿದೆ ಎಂದು ತಿಳಿಸಿದೆ. ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಭ್ರಷ್ಟಾಚಾರ, ಪದೇ ಪದೇ ಪೇಪರ್ ಸೋರಿಕೆ ತಡೆಯಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ. ಇದರೊಂದಿಗೆ ನಿರುದ್ಯೋಗಿಗಳಿಗೆ ರೂ 3000 ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಲಾಗಿದೆ.
6 ಲಕ್ಷ ಜನರನ್ನು ಕೇಳಿ ಪ್ರಣಾಳಿಕೆ ತಯಾರಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಣಾಳಿಕೆ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್ ಯಾವಾಗಲೂ ಪ್ರಣಾಳಿಕೆಗೆ ಪ್ರಾಮುಖ್ಯತೆ ನೀಡುತ್ತದೆ. ಪ್ರಣಾಳಿಕೆಯನ್ನು ಆದ್ಯತೆಯ ಮೇಲೆ ಇರಿಸಲು ಸೋನಿಯಾ ಗಾಂಧಿ ಕಟ್ಟುನಿಟ್ಟಿನ ಸೂಚನೆಗಳನ್ನು ಹೊಂದಿದ್ದರು. ರಾಹುಲ್ ಗಾಂಧಿ ನೀಡಿದ ಭರವಸೆಗಳನ್ನು ಯಾವುದೇ ಬೆಲೆ ತೆತ್ತಾದರೂ ಈಡೇರಿಸಲಾಗುವುದು ಎಂದು ಹೇಳಿದ್ದಾರೆ. ಗುಜರಾತ್‌ನಲ್ಲಿ ಒಟ್ಟು 6 ಲಕ್ಷ ಜನರನ್ನು ಕೇಳಿ ಪ್ರಣಾಳಿಕೆ ಮಾಡಿದ್ದೇವೆ ಎನ್ನುವ ವಿವರ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಏನಿದೆ?
ರೈತರಿಗೆ: ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುವುದು. ಕೆರೆ ಹಾಗೂ ನೀರಿನ ಹೊಂಡ ನಿರ್ಮಾಣಕ್ಕೆ ಸರಕಾರ ಅನುದಾನ ನೀಡಲಿದೆ. ಕಾಲುವೆಯಿಂದ ಹೊಲಗಳಿಗೆ ಉಚಿತವಾಗಿ ನೀರು ತಲುಪಿಸಲು ವ್ಯವಸ್ಥೆ ಮಾಡಲಾಗುವುದು.
ಪತ್ನಿಗೆ ಬಿಜೆಪಿ ಟಿಕೆಟ್: ಪ್ರಧಾನಿ ಮೋದಿ, ಅಮಿತ್ ಶಾಗೆ ರವೀಂದ್ರ ಜಡೇಜಾ ಧನ್ಯವಾದ
ದಲಿತರು,ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರಿಗೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ನೀಡಲಾಗುವುದು. ನೇಮಕಾತಿ ಪ್ರಕ್ರಿಯೆಯಲ್ಲಿಯೂ ಆದ್ಯತೆ ನೀಡಿ ಅಂತ್ಯೋದಯ ತತ್ವಗಳನ್ನು ಅನುಷ್ಠಾನಗೊಳಿಸಲಾಗುವುದು.
ಪಂಚಾಯತ್ ನೌಕರರಿಗೆ: ಪಂಚಾಯತ್‌ಗಳಿಂದ ಕಿತ್ತುಕೊಂಡ ಅಧಿಕಾರವನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ. ಭ್ರಷ್ಟಾಚಾರ ತಡೆಗಟ್ಟುವಿಕೆ ಮತ್ತು ಮನ್ರೇಗಾ ಅನ್ನು ಸಕಾಲಿಕವಾಗಿ ಪಾವತಿಸಲು ಆದ್ಯತೆ ನೀಡಲಾಗುವುದು.
ಗೃಹಿಣಿಯರಿಗೆ: 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ತನ್ನ ಮುಖ್ಯ ನೋಟ್‌ನಲ್ಲಿ ಹೇಳಿದೆ. ಸಿಲಿಂಡರ್‌ಗೆ ಮಹಿಳೆಯರು 500 ರೂಪಾಯಿ ಮಾತ್ರ ನೀಡಿದರೆ ಸಾಕು, ಉಳಿದ ಹಣವನ್ನು ಸರ್ಕಾರ ಸಬ್ಸಿಡಿ ರೂಪದಲ್ಲಿ ನೀಡಲಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳಿಗೆ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಯೋಜನೆ ರೂಪಿಸಲಾಗುವುದು. ಉನ್ನತ ಶಿಕ್ಷಣ ಶುಲ್ಕವನ್ನು ಶೇ.20ರಷ್ಟು ಕಡಿತಗೊಳಿಸಲಾಗುವುದು. ಇತರೆ ಸೇವಾ ಶುಲ್ಕಗಳನ್ನು ರದ್ದುಪಡಿಸಲಾಗುವುದು.