ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೈ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ಜಯಕ್ಕಾಗಿ ಹೊಸ ತಂತ್ರ ರೂಪಿಸುತ್ತಿದ್ದಾರೆ.
ಬೆಂಗಳೂರು (ಫೆ.24): ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿರುವ ನೂರು ಕ್ಷೇತ್ರಗಳಲ್ಲಿ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಪ್ರವಾಸಕ್ಕೆ ಮಾ.3 ರಿಂದ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ಹಿರಿಯ ನಾಯಕರ ಸಭೆಯಲ್ಲಿ, ಮಾ.3 ರಿಂದ 5 ರವರೆಗೆ ಮೊದಲ ಹಂತದ ಪ್ರವಾಸ ಹಮ್ಮಿಕೊಳ್ಳಲು ತೀರ್ಮಾನಿಸಲಾಇಗದೆ. ಮಾ.3 ರಂದು ಚಿಕ್ಕಬಳ್ಳಾಪುರ, ದೇವನಹಳ್ಳಿ ಹಾಗೂ ನೆಲಮಂಗಲದಲ್ಲಿ ಪ್ರಚಾರ ನಡೆಸಲು ನಿರ್ಧರಿಸಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ 2 ಕಿ.ಮೀ. ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ನಡೆದ ಸಭೆಯಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ನಸೀರ್ ಅಹಮದ್, ಎಐಸಿಸಿ ತಮಿಳುನಾಡು ಉಸ್ತುವಾರಿ ದಿನೇಶ್‌ಗುಂಡೂರಾವ್, ಕೃಷ್ಣಬೈರೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಿಎಂ ಕನಸು ಬಿಟ್ಟು ಅಖಾಡಕ್ಕಿಳಿದ ಡಿಕೆಶಿ, ಏನಿದು ಟ್ರಬರ್ ಶೂಟರ್ ಹೊಸ ಹೆಜ್ಜೆ.?
ಈ ವೇಳೆ ನಾಯಕರೆಲ್ಲರೂ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಎರಡೂ ರೀತಿಯಲ್ಲೂ ಪ್ರವಾಸ ಮಾಡಲು ಚರ್ಚಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ 2 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಈ ವೇಳೆ ಜನಮನ್ನಣೆ ಹೊಂದಿರುವ ಹಾಗೂ ಜನರ ನಡುವೆ ಇರುವ ವ್ಯಕ್ತಿಯನ್ನು ಮುಂದಿನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಗೆ ಪರಿಶೀಲಿಸಲು ನಿರ್ಧರಿಸಲಾಗಿದೆ.
ಇದೇ ವೇಳೆ ಕೋಲಾರದ ಕಾಂಗ್ರೆಸ್ ನಾಯಕರಲ್ಲಿ ಉಂಟಾಗಿರುವ ಭಿನ್ನಮತದ ಬಗ್ಗೆಯೂ ಚರ್ಚೆಯಾಗಿದ್ದು, ಸದ್ಯದಲ್ಲೇ ಕೆ.ಎಚ್. ಮುನಿಯಪ್ಪ ಸೇರಿದಂತೆ ಜಿಲ್ಲೆಯ ನಾಯಕರನ್ನು ಕರೆಸಿ ಸಂಧಾನಸಭೆ ನಡೆಸಲು ಸಹ ಇದೇ ವೇಳೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಹೋರಾಟದ ಚರ್ಚೆ- ಡಿಕೆಶಿ: ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಂದಿನ ದಿನಗಳಲ್ಲಿ ಪಕ್ಷದಿಂದ ನಡೆಸಲಿರುವ ಹೋರಾಟದಲ್ಲಿ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರವಾಸದ ಬಗ್ಗೆಯೂ ಚರ್ಚಿಸಲಾಗಿದೆ. ವಿಧಾನಮಂಡಲದ ಅಧಿವೇಶನದ ದಿನಗಳಲ್ಲಿ ಕಲಾಪಕ್ಕೆ ಅಡ್ಡಿಯಾಗದಂತೆ ಪ್ರವಾಸ ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್, ದಿನೇಶ್‌ಗುಂಡೂರಾವ್ ಸೇರಿ ಹಲವು ನಾಯಕರು ಭಾಗವಹಿಸಿ ಸಲಹೆ ನೀಡಿದ್ದಾರೆ ಎಂದರು.
ಸ್ಥಳೀಯರಿಗೆ ಬೆಂಬಲ: ಮೈಸೂರು ಪಾಲಿಕೆ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಮೈಸೂರು ಮೇಯರ್ ಸ್ಥಾನದ ವಿಚಾರವಾಗಿ ಹಿಂದೆ ನಾವು ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದೆವು. ಕಾಂಗ್ರೆಸ್‌ಗೆ ಎರಡು ವರ್ಷ ಹಾಗೂ ಜೆಡಿಎಸ್‌ಗೆ ಮೂರು ವರ್ಷ ಎನ್ನುವ ರೀತಿ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಸ್ಥಳೀಯ ನಾಯಕರಿಗೆ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಿದ್ದೇವೆ. ಅವರು ಯಾವ ನಿರ್ಧಾರಕ್ಕೆ ಬರುತ್ತಾರೋ ಅದಕ್ಕೆ ನಾವು ಬೆಂಬಲ ನೀಡುತ್ತೇವೆ. ಜ್ಯಾತ್ಯಾತೀತ ಪಕ್ಷ ನಮ್ಮ ಜೊತೆ ಇರಬೇಕು ಎಂದು ಬಯಸುತ್ತೇವೆ ಎಂದು ಹೇಳಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 24, 2021, 8:11 AM IST