‘ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆಂಬ ಒತ್ತಾಯವಿದೆ’ ಎಂದು ಹೇಳಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಅವರನ್ನು ಮೂರ್ಖರು ಎನ್ನಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಆ.22): ‘ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆಂಬ ಒತ್ತಾಯವಿದೆ’ ಎಂದು ಹೇಳಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಅವರನ್ನು ಮೂರ್ಖರು ಎನ್ನಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ‘ಸಮಾಜವಾದಿ ವೇದಿಕೆ’ ಭಾನುವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಶಾಂತವೇರಿ ಗೋಪಾಲಗೌಡ ಹಾಗೂ ಮಧುಲಿಮಯೆ ಜನ್ಮ ಶತಮಾನೋತ್ಸವ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕದ ಏಕೀಕರಣಕ್ಕೆ ಸಾಕಷ್ಟು ಹೋರಾಟಗಳಾಗಿವೆ. ಶಾಂತವೇರಿ ಗೋಪಾಲಗೌಡರು ಈ ಹೋರಾಟಕ್ಕೆ ಸೇತುವೆ ಆಗಿ ಕೆಲಸ ಮಾಡಿದ್ದರು. ಈ ಹೋರಾಟದ ಅರಿವು ಇಲ್ಲದವರು ಸುಮ್ಮನೆ ಏನೇನೋ ಮಾತನಾಡುತ್ತಾರೆ. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಹೇಳಿಕೆ ನೀಡಿರುವ ತೆಲಂಗಾಣ ಮುಖ್ಯಮಂತ್ರಿಯನ್ನು ಮೂರ್ಖರು ಎನ್ನಬೇಕು ಎಂದರು.

ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ರಾಜಕೀಯಕ್ಕಾಗಿ ಪ್ರತ್ಯೇಕ ರಾಜ್ಯ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಹೇಳಿಕೆ ನೀಡುವ ಸಚಿವ ಉಮೇಶ್‌ ಕತ್ತಿ ಅವರು ರಾಜಕೀಯಕ್ಕಾಗಿ ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಇಂತಹ ಹೇಳಿಕೆ ನೀಡುವ ಮುನ್ನ ಇತಿಹಾಸ ತಿಳಿದಿರಬೇಕು. ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಹೋರಾಟಗಳ ಬಗ್ಗೆ ಅರಿವಿರಬೇಕು ಎಂದು ಕಿವಿ ಮಾತು ಹೇಳಿದರು.

ಲಾಠಿ ಏಟು ತಿಂದು ರಾಜಕೀಯ: ತಮ್ಮ ರಾಜಕೀಯ ಪ್ರವೇಶದ ಸನ್ನಿವೇಶವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, ತಾವು ಕಾನೂನು ಪದವಿ ವ್ಯಾಸಂಗ ಮಾಡುವಾಗ ಲೋಹಿಯಾ ಅವರ ಸಮಾಜವಾದಿ ಪಕ್ಷಕ್ಕೆ ಸೇರಿದ್ದೆ. ಆಗ ರೈತ ಮುಖಂಡ ಪ್ರೊ.ನಂಜುಂಡಸ್ವಾಮಿ ಅವರ ಸಂಪರ್ಕ ಬೆಳೆಯಿತು. ಅವರು ನನಗೆ ರಾಜಕೀಯ ಪಾಠ ಹೇಳುತ್ತಿದ್ದರು. ವೀರೇಂದ್ರ ಪಾಟೀಲ್‌ ಆಗ ಮುಖ್ಯಮಂತ್ರಿ ಆಗಿದ್ದರು. ಸರ್ಕಾರದ ವಿರುದ್ಧ ಒಂದು ಚಳವಳಿ ರೂಪಿಸಿದ್ದರು. ನಾನು, ದೇವನೂರು ಮಹಾದೇವ ಚಳವಳಿಯಲ್ಲಿ ಭಾಗಿಯಾಗಿದ್ದೆವು. 

ರಾಮಸ್ವಾಮಿ ಸರ್ಕಲ್‌ನಲ್ಲಿ ಪೊಲೀಸರು ಚಳವಳಿದಾರರ ಮೇಲೆ ಲಾಠಿ ಬೀಸಿದರು. ಅದೇ ನನಗೆ ಬಿದ್ದ ಮೊದಲ ಲಾಠಿ ಏಟು. ಪೆಟ್ಟು ತಿಂದ ಮೇಲೆ ನಾನು ರಾಜಕೀಯಕ್ಕೆ ಬಂದೆ ಎಂದರು. ಸಿಗರೇಟು ಸೇದಲು ಆರಂಭಿಸಿದ್ದನ್ನು ಸಹ ಹೇಳಿದ ಸಿದ್ದರಾಮಯ್ಯ ಅವರು, ನಂಜುಂಡಸ್ವಾಮಿ ಅವರು ಚಾರ್‌ಮಿನಾರ್‌ ಸಿಗೇಟು ಸೇದುತ್ತಿದ್ದರು. ಚಾರ್‌ಮಿನಾರ್‌ ಯಾಕೆ ಸೇದುತ್ತೀರಿ ಎಂದು ಕೇಳಿದ್ದಕ್ಕೆ ಅದು ಸ್ಟ್ರಾಂಗು, ಸ್ಟ್ರಾಂಗ್‌ ಸಿಗರೇಟು ಸೇರಿದರೇ ನಾವು ಸ್ಟ್ರಾಂಗ್‌ ಆಗಿ ಇರುತ್ತೇವೆ ಎಂದು ಹೇಳುತ್ತಿದ್ದರು. ನನಗೂ ಸಿಗರೇಟು ಸೇದಿಸೋರು ಎಂದರು.

ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ ಹೊತ್ತಿರುವ ಜವಾಬ್ದಾರಿ ಕಾನೂನು-ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪಡೆ ಪೋಷಣೆ ಮಾಡುವುದೋ? ರಾಜ್ಯ ಬಿಜೆಪಿಯ ಗೂಂಡಾ ಪಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ? ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ ಎಂದರ್ಥವಲ್ಲವೇ ಎಂದು ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ. 

26ರಂದು ಸಿದ್ದರಾಮಯ್ಯ ಕೊಡಗಿಗೆ ಬರಲಿ ನೋಡೋಣ: ಬೋಪಯ್ಯ

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಸಿದ್ದರಾಮಯ್ಯ ಅವರ ರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅತಿವೃಷ್ಟಿಹಾನಿ ವೀಕ್ಷಣೆಗೆ ತೆರಳಿದ್ದ ವಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ರಕ್ಷಣೆ ಈ ಸರ್ಕಾರದಿಂದ ಸಾಧ್ಯವೇ? ಗೃಹಸಚಿವರು ಇನ್ನೂ ಹುದ್ದೆಯಲ್ಲಿರಲು ಅರ್ಹರೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.