Asianet Suvarna News Asianet Suvarna News

ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಗುರುವಾರ ಕೊಡಗಿನಲ್ಲಿ ಮೊಟ್ಟೆಎಸೆದು ಕಪ್ಪು ಬಟ್ಟೆಪ್ರದರ್ಶಿಸಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಾದ್ಯಂತ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

congress protests across karnataka condemning egg pelting on siddaramaiah gvd
Author
Bangalore, First Published Aug 20, 2022, 4:45 AM IST

ಬೆಂಗಳೂರು (ಆ.20): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಗುರುವಾರ ಕೊಡಗಿನಲ್ಲಿ ಮೊಟ್ಟೆಎಸೆದು ಕಪ್ಪು ಬಟ್ಟೆಪ್ರದರ್ಶಿಸಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಾದ್ಯಂತ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಸರ್ಕಾರ ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಜೊತೆಗೆ ಪೊಲೀಸರ ವೈಫಲ್ಯವೇ ಘಟನೆಗೆ ಕಾರಣವಾಗಿದ್ದು, ಕೊಡಗು ಎಸ್ಪಿ ಮತ್ತು ಇನ್ನಿತರ ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಮೊಟ್ಟೆ ದಾಳಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಸರ್ಕಾರ ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಟೈರ್‌ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದ ಕಾಂಗ್ರೆಸ್ ಕಾರ್ಯಕರ್ತರು; ಪೊಲೀಸರಿಗೂ ಡೋಂಟ್ ಕೇರ್!

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆದಿದ್ದು, ಆರ್‌ಎಸ್‌ಎಸ್‌ ಹಾಗೂ ನಾಥೂರಾಮ್‌ ಗೋಡ್ಸೆ, ವಿ.ಡಿ.ಸಾರ್ವರ್ಕರ್‌ ವಿರುದ್ಧ ಮಾತನಾಡುವುದನ್ನು ಮುಂದುವರೆಸುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಸವಾಲು ಎಸೆದಿದ್ದಾರೆ. ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ ಇದ್ದರು.

ಪೊಲೀಸರೊಂದಿಗೆ ಚಕಮಕಿ: ಘಟನೆ ನಡೆದ ಕೊಡಗಿನ ವಿವಿಧೆಡೆಯೂ ಕೊಡಗು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಡಿಕೇರಿ ಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಲ್ಲದೆ ಎಸ್ಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಬ್ಯಾರಿಕೇಡ್‌ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಅದೇ ರೀತಿಯಲ್ಲಿ ಹಾವೇರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಸಹ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಹಾಸನದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೇಯಿಸಿದ ಮೊಟ್ಟೆಗಳನ್ನು ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಟೈರ್‌ಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ಸಾವರ್ಕರ್‌ ಭಾವಚಿತ್ರಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡದಲ್ಲಿ ಸಾವರ್ಕರ್‌ ಪ್ರತಿಕೃತಿಗಳನ್ನು ಸುಡಲಾಯಿತು. ಹೊಸಪೇಟೆ ಮತ್ತು ಮಂಡ್ಯಗಳಲ್ಲಿ ಬಿಜೆಪಿ ಮುಖಂಡರ ಬ್ಯಾನರ್‌ ಮೇಲೆ ಸಗಣಿ, ಮೊಟ್ಟೆಎರಚಲಾಯಿತು.

ಧರ್ಮ ಒಡೆಯಲು ಹೋಗಿ ತಪ್ಪು ಮಾಡಿದೆ, ರಂಭಾಪುರಿ ಶ್ರೀ ಎದುರು ಸಿದ್ಧು ಪಶ್ಚಾತ್ತಾಪದ ಮಾತು!

ಚಾಮರಾಜನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಕೊಪ್ಪಳ, ಗದಗ, ಲಕ್ಷ್ಮೇಶ್ವರ, ಗಂಗಾವತಿ, ನವಲಗುಂದ, ಹಾವೇರಿ, ಶಿರಹಟ್ಟಿ, ಮುಂಡರಗಿ, ಚಿತ್ರದುರ್ಗ, ಹಾಸನ, ಸಕಲೇಶಪುರ, ಜಾವಗಲ್‌, ಕೋಲಾರ, ಬಂಗಾರಪೇಟೆ, ಭಾರತೀಪುರ, ಮಳವಳ್ಳಿಗಳಲ್ಲಿ ಸಹ ಪ್ರತಿಭಟನೆಗಳು ನಡೆದವು.

Follow Us:
Download App:
  • android
  • ios