ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಇದ್ದು, ಯುವಕರು ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೋ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು. 

ದೇವರಹಿಪ್ಪರಗಿ (ಫೆ.24): ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಇದ್ದು, ಯುವಕರು ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೋ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು. ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಶಾಲಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಅನ್ಯಮಾರ್ಗದಿಂದ ಅಧಿಕಾರಕ್ಕೆ ಬಂದು, ಭ್ರಷ್ಟಾಚಾರದಲ್ಲಿ ತೊಡಗಿದೆ. 

ಹೀಗಾಗಿ ವಿಧಾನಸೌಧದ ಗೋಡೆಗಳು ಸಹ ಇಂದು ಲಂಚ.. ಲಂಚ.. ಎಂದು ಬುಸುಗುಡುತ್ತಿವೆ. ಇಂತಹ, ಭ್ರಷ್ಟಸರ್ಕಾರ ನಮಗೆ ಬೇಕೇ? ಎಲ್ಲರೂ ಸಂಕಲ್ಪ ಮಾಡೋಣ ಬಿಜೆಪಿಯನ್ನು ಬುಡಸಮೇತವಾಗಿ ಕಿತ್ತೆಸೆಯುವ ಮೂಲಕ ಕಾಂಗ್ರೆಸ್‌ ಸರ್ಕಾರ ರಚನೆ ಮಾಡೋಣ ಎಂದು ಬಿಜೆಪಿಯನ್ನು ಕುಟುಕಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ 600 ಭರವಸೆಗಳನ್ನು ನೀಡಿತು. ಕೇವಲ 51 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ನಮ್ಮ ಸರ್ಕಾರ 165 ಭರವಸೆ ನೀಡಿ ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಇಂತಹ ಭ್ರಷ್ಟಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಇಲ್ಲ ಎಂದರು.

ಬಾದಾಮಿಯಲ್ಲಿ‌ ಜನರಿಗೆ ದ್ರೋಹ ಮಾಡಿಲ್ಲ: ಬಿಎಸ್‌ವೈಗೆ ತಿರುಗೇಟು ನೀಡಿದ ಸಿದ್ದು

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೊಟ್ಟ ಭರವಸೆ ಈಡೇರಿಕೆ: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆಯ ಮಹಿಳೆಯ ಖಾತೆಗೆ 2 ಸಾವಿರ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪಡಿತರ ತಲಾ 10ಕೆಜಿ ಅಕ್ಕಿ ಮತ್ತು ಪ್ರತಿಯೊಂದು ಮನೆಗೆ 200 ಯೂನಿಚ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ನಮ್ಮ ಸರ್ಕಾರ ಬಂದ ತಕ್ಷಣ ಕೊಟ್ಟಭರವಸೆ ಈಡೇರಿಸುತ್ತೇವೆ. ಇಲ್ಲದಿದ್ದರೆ ಒಂದು ಕ್ಷಣ ನಾವು ಅಧಿಕಾರದಲ್ಲಿ ಮುಂದುವರೆಯುವುದಿಲ್ಲ. ನುಡಿದಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು. ವಿವಿಧ ಪಕ್ಷಗಳನ್ನು ತೊರೆದು ಸಿದ್ದರಾಮಯ್ಯ ನೇತೃತ್ವದಲ್ಲಿ ತಾಲೂಕಿನ 150ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ದೊಂದಿಗೆ ಕೈ ಜೋಡಿಸಿದರು.

ಪಕ್ಷ ಯಾರಿಗೆ ಟಿಕೆಟ್‌ ನೀಡಲಿ ಒಗ್ಗಟ್ಟಿನ ಮಂತ್ರ ಪಠಿಸಿ: ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 10 ಜನ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್‌ ಅಳೆದು-ತೂಗಿ ಟಿಕೆಟ್‌ ಫೈನಲ್‌ ಮಾಡಲಿದೆ. ಯಾವ ಅಭ್ಯರ್ಥಿ ಕಣಕ್ಕೆ ಇಳಿದರೂ ಕಾಂಗ್ರೆಸ್‌ ಮುಖಂಡರು ಒಗ್ಗಟ್ಟಿನಿಂದ ಮಂತ್ರ ಪಠಿಸಬೇಕು. ಜೆಡಿಎಸ್‌ಗೆ ಮತ ನೀಡಿದರೆ ಅದು ಬಿಜೆಪಿಗೆ ಹೋಗುತ್ತೆ ಎಂದು ಕ್ಷೇತ್ರದ ಪ್ರತಿ ಗ್ರಾಮದ ಮತದಾರನಿಗೆ ತಿಳಿಸಿ ಹೇಳಬೇಕು. ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರುವ ದೃಷ್ಟಿಯಿಂದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುತ್ತೇವೆ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ದೇಶ ಕಟ್ಟಿದ್ದು ಕಾಂಗ್ರೆಸ್‌. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್‌. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಜನತೆ ಸಂಕಷ್ಟದಲ್ಲಿ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಬೆಲೆಗಳು ಗಗಕ್ಕೇರಿವೆ, ದುಡಿದು ತಿನ್ನಲು ಉದ್ಯೋಗವಿಲ್ಲ. ಎಂಟು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ಮುಂದಿನ ದಿನಗಳಲ್ಲಿ ಚುನಾವಣೆ ಮೂಲಕ ಬಿಜೆಪಿಗೆ ಉತ್ತರ ನೀಡಬೇಕು. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಬಿಜೆಪಿಗರು ಭರವಸೆ ನೀಡಿದ್ದರು, ಇಂದು ತರಕಾರಿಯನ್ನು ಬಂಡವಾಳ ಶಾಹಿಗಳ ಪರವಾಗಿದೆ. ಆದಾಯ ಯಾರಿಗೆ ದ್ವಿಗುಣವಾಗಿದೆ ಎಂದು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಇಂಧನ, ತೈಲ ಬೆಲೆಗಳು ಒಂದರಕ್ಕಿಂತ ಒಂದು ಆಕಾಶಕ್ಕೆರುತ್ತಿವೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳಲ್ಲಿ ಆಗಿವೆ. ಬೂದಿಹಾಳ ಪಿರಾಪೂರ ಯೋಜನೆ ಸಹ ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಆಗಿದೆ. ಮತದಾರರು ಆಶೀರ್ವಾದ ಮಾಡಿ, 130 ಅಭ್ಯರ್ಥಿಗಳನ್ನು ಗೆಲ್ಲಿಸಿ, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ಮಾಜಿ ಸಚಿವ ಜಮ್ಮೀರ್‌ ಅಹ್ಮದ್‌ ಖಾನ್‌ ಮಾತನಾಡಿ, ಜೆಡಿಎಸ್‌ ಪಕ್ಷ ಜಾತ್ಯಾತೀತ ಪಕ್ಷ ಅಲ್ಲ, ಎಲ್ಲಾ ಸಮಾಜದ ಭಾಂದವರನ್ನು ಒಗ್ಗಡಿಸಿಕೊಂಡು ಹೋಗುವ ಪಕ್ಷ ಕಾಂಗ್ರೆಸ್‌ ಪಕ್ಷ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿದ್ದು ಕಾಂಗ್ರೆಸ್‌ ಸರ್ಕಾರ, ಬಡವರಿಗಾಗಿ ಹಲವಾರು ಭಾಗ್ಯಗಳನ್ನು ನೀಡಿದೆ. 

ಟಿಪ್ಪು ಜಯಂತಿ ಮಾಡಿದ್ದು ಸಿದ್ದರಾಮಯ್ಯ, ಮುಂದೆ ಟಿಪ್ಪು ಸುಲ್ತಾನ… ಜಯಂತಿ ಅದ್ದೂರಿಯಾಗಿ ಮಾಡುತ್ತೇವೆ, ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸಿ ಎಂದು ಕರೆ ನೀಡಿದರು. ಬಸವನ ಬಾಗೇವಾಡಿ ಶಾಸಕರಾದ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ವಿಪ ಸದಸ್ಯ ಪ್ರಕಾಶ್‌ ರಾಠೋಡ, ಮಾಜಿ ಸಚಿವ ಎಚ್‌.ಸಿ.ಮಹದೇವ ಪ್ರಸಾದ್‌ ಮಾತನಾಡಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಮನವಿ ಮಾಡಿದರು. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ಕೆಪಿಸಿಸಿ ಸದಸ್ಯರಾದ ಬಿ.ಎಸ್‌.ಪಾಟೀಲ ಯಾಳಗಿ ಕಾರ್ಯಕ್ರಮದಲ್ಲಿ ಮುಖಂಡರನ್ನು ಸ್ವಾಗತಿಸಿದರು.ಮಾಜಿ ಶಾಸಕ ಶರಣಪ್ಪ ಸುಣಗಾರ ಪ್ರಸ್ತಾವಿಕವಾಗಿ ಮಾತನಾಡಿದರು.

ಕಣ್ಣೀರಿಗೆ ಕರಗದೇ ಅಭಿವೃದ್ಧಿಗೆ ಮತ ನೀಡಿ: ಸಿ.ಪಿ.ಯೋಗೇಶ್ವರ್‌

ಈ ವೇಳೆ ಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌, ಜಿಲ್ಲಾಧ್ಯಕ್ಷ ರಾಜು ಆಲಗೂರ, ಆನಂದಗೌಡ ದೊಡ್ಡಮನಿ, ಡಾ ಪ್ರಭುಗೌಡ ಲಿಂಗದಳ್ಳಿ ಚಬನೂರ, ಮಲ್ಲನಗೌಡ ಬಿರಾದಾರ ಕೆಸರಟ್ಟಿ, ಡಾ.ನಂದಕುಮಾರ ಭೈರಿ, ಬಾಪುಗೌಡ ಪಾಟೀಲ, ಸುಜಾತ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಬಶೀರ್‌ ಅಹ್ಮದ್‌ ಬೇಪಾರಿ, ಬಾಳಾಸಾಹೇಬಗೌಡ ಪಾಟೀಲ, ನಿಂಗನಗೌಡ ಪಾಟೀಲ, ಸರಿತಾ ನಾಯಕ್‌, ರಮೀಜಾ ನದಾಫ್‌, ಪ್ರಕಾಶ ಗುಡಿಮನಿ, ಗುರುರಾಜ ಆಕಳವಾಡಿ, ಮುರ್ತುಜಾ ತಾಂಬೋಳಿ, ಮುರ್ನೀ ಬಿಜಾಪುರ ಸೇರಿದಂತೆ ಪ ಪಂ ಸದಸ್ಯರು, ಮಾಜಿ ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇತರರು ಇದ್ದರು.