ಮಂಗಳೂರು: ಸೋಲಿನ ಬೆನ್ನಲ್ಲೇ ಚುನಾವಣಾ ರಾಜಕೀಯದಿಂದ ರಮಾನಾಥ್ ರೈ ನಿವೃತ್ತಿ..!
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಭೂತಪೂರ್ವ ಜಯ ಸಾಧಿಸಿದೆ. ಆದರೆ ದ.ಕ ಜಿಲ್ಲೆಯ ಮಟ್ಟಿಗೆ ಸಣ್ಣ ಮಟ್ಟಿನ ಹಿನ್ನಡೆ ಆಗಿದೆ. ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ರಾಜ್ಯದ ಜನ ಮತ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ: ರಮಾನಾಥ್ ರೈ
ಮಂಗಳೂರು(ಮೇ.16): ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಈ ಬಾರಿಯೂ ಮತ್ತೆ ಸೋಲು ಕಂಡ ಬಂಟ್ವಾಳದ ಮಾಜಿ ಶಾಸಕ ರಮಾನಾಥ್ ರೈ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಒಂಭತ್ತನೇ ಬಾರಿಯ ವಿಧಾನಸಭಾ ಚುನಾವಣೆ ಸ್ಪರ್ಧೆಯ ಸೋಲಿನ ಬೆನ್ನಲ್ಲೇ ರಮಾನಾಥ್ ರೈ ಈ ನಿರ್ಧಾರಕ್ಕೆ ಬಂದಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಮಾನಾಥ್ ರೈ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಭೂತಪೂರ್ವ ಜಯ ಸಾಧಿಸಿದೆ. ಆದರೆ ದ.ಕ ಜಿಲ್ಲೆಯ ಮಟ್ಟಿಗೆ ಸಣ್ಣ ಮಟ್ಟಿನ ಹಿನ್ನಡೆ ಆಗಿದೆ. ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ರಾಜ್ಯದ ಜನ ಮತ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಹೀಗಾಗಿ ಜಿಲ್ಲೆಯ ಕಾರ್ಯಕರ್ತರು ಎದೆಗುಂದ ಬೇಡಿ. ನಾನು ಇದು ನನ್ನ ಕಡೆಯ ಚುನಾವಣೆ ಅಂತ ಹೇಳಿದ್ದೇನೆ. ಆದರೆ ಸೋತರೂ ಪಕ್ಷದ ಕಾರ್ಯಗಳಲ್ಲಿ ನಾನು ಮುಂಚೂಣಿಯಲ್ಲಿ ಇರ್ತೇನೆ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಅಂತ ತಿಳಿಸಿದ್ದಾರೆ.
ಹಾಸನ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಟ್ಟಿದೆ ಅದನ್ನು ಜನತೆಗೆ ಕೊಡಲಿ, ರೇವಣ್ಣ
ದ.ಕ ಜಿಲ್ಲೆಯಲ್ಲಿ ನಾವು ಸೋತರೂ ಗೆದ್ರೂ ಪಕ್ಷ ಕಟ್ಟಿದ್ದೇವೆ
ಬಿಜೆಪಿ ಸ್ಪಷ್ಟ ಬಹುಮತದಿಂದ ಯಾವತ್ತೂ ಸರ್ಕಾರ ರಚಿಸಲಿಲ್ಲ. ದ.ಕ ಜಿಲ್ಲೆಯಲ್ಲಿ ನಾವು ಸೋತರೂ ಗೆದ್ರೂ ಪಕ್ಷ ಕಟ್ಟಿದ್ದೇವೆ. ರಾಜ್ಯದ ಜನ ಯಾವತ್ತೂ ಬಿಜೆಪಿಗೆ ಬೆಂಬಲ ಕೊಟ್ಟಿಲ್ಲ. ಬಸವಣ್ಣ ಹುಟ್ಟಿದ ನಾಡಲ್ಲಿ ಜಾತ್ಯಾತೀತ ನಿಲುವಿನ ಜನರಿಗೆ ಮಣೆ ಹಾಕ್ತಾರೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಖಂಡಿತಾ ಅಧಿಕಾರಕ್ಕೆ ಬರಲ್ಲ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ. ಜಿಲ್ಲೆಯ ಪಕ್ಷದ ಕಾರ್ಯಕರ್ತರು ಎದೆಗುಂದಬೇಡಿ, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹೋರಾಟ ಮಾಡುವ. ಸರ್ಕಾರ ಪ್ರಮಾಣ ವಚನದ ಬಳಿಕ ಗ್ಯಾರಂಟಿ ಅನುಷ್ಠಾನ ಆಗಲಿದೆ ಅಂತ ಹೇಳಿದ್ದಾರೆ.
ವಿಜಯಪುರದ ಕಾಂಗ್ರೆಸ್ ತ್ರಿಮೂರ್ತಿಗಳಿಗೆ ಸಿಗುತ್ತಾ ಸಂಪುಟದಲ್ಲಿ ಸ್ಥಾನ..!
ಜಿ.ಪಂ ಮತ್ತು ತಾ.ಪಂ ಚುನಾವಣೆ ಕೂಡ ನಮ್ಮ ಮುಂದಿದೆ. ದ.ಕ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಜನಪರ ಕೆಲಸ ಮಾಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಈ ಜಿಲ್ಲೆಗೆ ಉಪಕಾರ ಆಗಿದೆ. ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾದರೂ ಪಕ್ಷ ಬಲಿಷ್ಠವಾಗಿದೆ. ನಾನು ಕೂಡ ಈ ಬಾರಿ ಬಂಟ್ವಾಳದಲ್ಲಿ ಸಣ್ಣ ಅಂತರದಲ್ಲಿ ಸೋತಿದ್ದೇನೆ. ಜಿಲ್ಲೆಯ ಅನೇಕ ಬೇಡಿಕೆ ಈಡೇರಿಸೋ ಕೆಲಸ ನಾನು ಮಾಡ್ತೇನೆ. ನಾನು ಚುನಾವಣಾ ರಾಜಕೀಯಕ್ಕೆ ಸ್ಪರ್ಧೆ ಮಾಡೋದಿಲ್ಲ. ನಮ್ಮ ಪಕ್ಷದಲ್ಲೇ ಕೆಲವು ಅಪಸ್ವರ ಬಂತು, ಹಾಗಾಗಿ ಈ ತೀರ್ಮಾನ. ಕೆಲವರು ಕೆಲವೆಡೆ ನನ್ನ ವಯಸ್ಸಿನ ಬಗ್ಗೆ ಹೇಳಿದ್ದಾರೆ, ಹಾಗಾಗಿ ಈ ನಿರ್ಧಾರ. ವಿಧಾನಪರಿಷತ್ ಎಲ್ಲವೂ ಪ್ರತ್ಯೇಕ, ಅದು ಚುನಾವಣಾ ರಾಜಕೀಯ ಅಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ, ಮುಂದೆಯೂ ಮಾಡ್ತೇನೆ. ಪಕ್ಷದ ತೀರ್ಮಾನದ ವಿರುದ್ಧ ಒಂದು ಸಣ್ಣ ಶಬ್ದ ತೆಗೆದಿಲ್ಲ. ನನ್ನ ಸೋಲಿನ ಅವಲೋಕನ ಮಾಡಿದ್ದೇನೆ, ಮುಂದೆ ಅದನ್ನು ಹೇಳ್ತೀನಿ ಅಂತ ಸ್ಪಷ್ಟಪಡಿಸಿದ್ದಾರೆ.
ಪುತ್ತೂರು ಒಂದನ್ನು ಬಿಟ್ಟರೆ ಬಹುತೇಕ ಕಡೆ ಹೆಚ್ಚಿನ ಅಂತರದಲ್ಲಿ ಕಾಂಗ್ರೆಸ್ ಸೋತಿದೆ. ಭಜರಂಗದಳದವರು ಕಾಂಗ್ರೆಸ್‌ಗೆ ಓಟ್ ಮಾಡೋರಲ್ಲ, ಅದು ಪರಿಣಾಮ ಬೀರಿಲ್ಲ. ಮುಖ್ಯಮಂತ್ರಿ ಆಯ್ಕೆಯನ್ನ ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ, ಅದು ಅಷ್ಟು ದೊಡ್ಡ ವಿಷಯ ಅಲ್ಲ. ನನ್ನ ವಯಸ್ಸು 70, ಅದು ಬಹಳ ದೊಡ್ಡ ವಯಸ್ಸಲ್ಲ. ನಾನು ವೈಯಕ್ತಿಕ ನಿರ್ಧಾರ ಮಾಡಿದ್ದೇನೆ, ಉಳಿದಿದ್ದು ಹೈಕಮಾಂಡ್ ನಿರ್ಧಾರ. ಬಿಜೆಪಿ ಶಿಸ್ತಿನ ಪಾರ್ಟಿ ಅಂತಿದ್ರು, ಆದರೆ ಅವರಲ್ಲಿ ಬಂಡಾಯ ಇದೆ. ನಮ್ಮಲ್ಲಿ ಯುವ ನಾಯಕರಿಗೆ ಅವಕಾಶ ಕೊಡಲಾಗಿದೆ ಅಂತ ಹೇಳಿದ್ದಾರೆ.