ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಿದ ಪ್ರಧಾನಿ: ನೆಟ್ಟಾಡಿಸೋಜಾ

ಮೈಸೂರು(ಸೆ.22): ಗೃಹ ಬಳಕೆಯ ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನು ಸಂಕಟಕ್ಕೆ ದೂಡಿದ್ದಾರೆ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೆಟ್ಟಾಡಿಸೋಜಾ ಆರೋಪಿಸಿದರು. ಮೈಸೂರಿನ ಇಂದಿರಾ ಕಾಂಗ್ರೆಸ್‌ ಭವನದಲ್ಲಿ ನಗರ ಮತ್ತು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕಗಳ ಸಹಯೋಗದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉಚಿತ ಸ್ತ್ರೀ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಮೋಸ ಮಾಡಿದೆ. 2014ರಲ್ಲಿ ನೀಡಿ ವಾಗ್ದಾನಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ರಾಜ್ಯದ ಬಿಜೆಪಿ ಸರ್ಕಾರವು ಶೇ. 40 ಕಮಿಷನ್‌ ಸರ್ಕಾರವಾಗಿದೆ ಎಂದು ದೂರಿದರು.

ಮಹಿಳೆಯರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌, ಪಾರ್ಸಿ ಇತ್ಯಾದಿ ಧರ್ಮಗಳನ್ನು ಮೀರಿದ್ದಾರೆ. ಮಹಿಳೆಯದೇ ಒಂದು ಜಾತಿ ಮತ್ತು ಧರ್ಮ. ಮಹಿಳೆಯರು ಸಂಕೋಲೆಗಳನ್ನು ಮೀರುತ್ತ, ಅವಕಾಶಗಳನ್ನು ಬಳಸಿಕೊಂಡು ಸೀಮಾತೀತವಾಗಿ ಬೆಳೆಯುತ್ತಿದ್ದಾರೆ. ರಾಜಕೀಯ ಪಕ್ಷವೊಂದು ಮಹಿಳೆಯರಿಗಾಗಿ ಸಹಾಯವಾಣಿ ಆರಂಭಿಸಿರುವುದು ದೇಶದಲ್ಲೇ ಮೊದಲು. ಇದು ಐತಿಹಾಸಿಕವಾದ ಸಂಗತಿ. ಭವಿಷ್ಯದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಕುಟುಂಬ ರಾಜ​ಕಾ​ರಣ, ಗುಂಪು​ಗಾ​ರಿಕೆಯಿಂದ ಬೇಸತ್ತು ಜೆಡಿ​ಎಸ್‌ ತೊರೆ​ದೆ: ಸಿಂಗ​ರಾಜ​ಪುರ ರಾಜಣ್ಣ

ಮಹಿಳೆಯರ ಸಮಸ್ಯೆಗಳಿಗೆ ಸ್ಪಂದನೆ

ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್‌ ಮಾತನಾಡಿ, 18002030589 ಉಚಿತ ಸಹಾಯವಾಣಿಗೆ ಕರೆ ಮಾಡಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಸಾಮಾಜಿಕ ಸಮಸ್ಯೆ, ನೆರೆಹೊರೆಯವರಿಂದ ಕಿರುಕುಳ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ತಿಳಿಸಬಹುದು. ಪರಿಹಾರಕ್ಕೆ ಮಹಿಳಾ ಕಾಂಗ್ರೆಸ್‌ ಪ್ರಯತ್ನಿಸುವುದು. ಈ ಸಂಖ್ಯೆಯನ್ನು ಕಾಂಗ್ರೆಸ್‌ ಕಾರ್ಯಕರ್ತೆಯರು ಮನೆ ಮನೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತೆ ಪಾದಯಾತ್ರೆಗೆ ಹೆಚ್ಚು ಮಹಿಳೆಯರು ಭಾಗವಹಿಸಬೇಕು. ಮೈಸೂರಿನಲ್ಲಿ ಲಕ್ಷಾಂತರ ಮಹಿಳೆಯರು ಹೆಜ್ಜೆ ಹಾಕಬೇಕು ಎಂದು ಅವರು ಕರೆ ನೀಡಿದರು.

ಮಹಿಳೆಯರು ದುಡಿಯಬೇಕು

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಮಾತನಾಡಿ, ವಿದೇಶಗಳಿಗೆ ಹೋಲಿಕೆ ಮಾಡಿದರೆ ಪುರುಷರು, ಮಹಿಳೆಯರು ಸಮಾನವಾಗಿ ದುಡಿಯುವುದು ಕಡಿಮೆ. ಭಾರತದಲ್ಲಿ ಗೃಹಿಣಿಯರ ಸಂಖ್ಯೆ ಹೆಚ್ಚು. ಮಹಿಳೆಯರು ದುಡಿದರೆ ರಾಷ್ಟ್ರದ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರು.

ಮಹಿಳೆಯರು ಯಾವಾಗಲೂ ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕು. ಕಾನೂನು ಮಂತ್ರಿಯಾಗಿ ಹಿಂದೂ ಕೋಡ್‌ ಬಿಲ್‌ ಮಂಡಿಸಿದರು. ಇದಕ್ಕೆ ನೆಹರೂ ಸಮ್ಮತಿ ಇತ್ತು. ಆರ್‌ಎಸ್‌ಎಸ್‌, ಹಿಂದೂಪರ ಸಂಘಟನೆಗಳು ವಿರೋಧಿಸಿದರು. ಬಿಲ್‌ ಮಂಡನೆಯಾಗದಿದ್ದಾಗ ಡಾ. ಅಂಬೇಡ್ಕರ್‌ ಮನನೊಂದು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಎಂದು ಅವರು ಹೇಳಿದರು.

ರಾಹುಲ್‌ ಗಾಂಧಿ ಪಾದಯಾತ್ರೆ ಮೈಸೂರಿಗೆ ಬಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು. ಈಗಾಗಲೇ 5 ಜಿಲ್ಲೆಯ ಜನರು ಎಲ್ಲಿಗೆ ಬರಬೇಕೆಂದು ತಿಳಿಸಲಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ರಾಹುಲ್‌ ಗಾಂಧಿ ಅವರಿಗೆ ಆರತಿ ಮಾಡಿ ಸ್ವಾಗತಿಸಬೇಕು ಎಂದರು.

‘ಪೇ-ಸಿಎಂ’ ಪೋಸ್ಟರ್‌ನಲ್ಲಿ ತಪ್ಪಿಲ್ಲ: ಡಿಕೆಶಿ ಸಮರ್ಥನೆ

ಕೆಪಿಸಿಸಿ ಉಪಾಧ್ಯಕ್ಷ ಸುಧೀಂದ್ರ, ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ನಗರಾಧ್ಯಕ್ಷೆ ಪುಷ್ಪಾಲತಾ ಚಿಕ್ಕಣ್ಣ, ಮುಖಂಡರಾದ ಡಾ. ಸೀಮಾ, ಪುಷ್ಪವಲ್ಲಿ, ಮಂಜುಳಾ ಮಂಜುನಾಥ್‌ ಮೊದಲಾದವರು ಇದ್ದರು.

ಮೊದಲಿಂದಲೂ ಕಾಂಗ್ರೆಸ್‌ ಪಕ್ಷ ಮಹಿಳೆಯರ ಪರವಾಗಿದ್ದು, ಸ್ಥಾನಮಾನ ಕೊಟ್ಟಿದೆ. ಇಂದಿರಾ ಗಾಂಧಿ 12 ವರ್ಷ ಪ್ರಧಾನಿಯಾಗಿದ್ದರು. ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯಲ್ಲಿ ಮಹಿಳಾ ಪ್ರಧಾನಿಯನ್ನು ಕಾಣಲು ಸಾಧ್ಯವೇ? ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥರಾಗಬಹುದೇ? ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ತಿಳಿಸಿದ್ದಾರೆ.