‘ಪೇ-ಸಿಎಂ’ ಪೋಸ್ಟರ್‌ನಲ್ಲಿ ತಪ್ಪಿಲ್ಲ: ಡಿಕೆಶಿ ಸಮರ್ಥನೆ
ಇದು ಶೇ.40 ಕಮಿಶನ್ ಸರ್ಕಾರ ಎಂದು ರೂಪಿಸುವ ಪೋಸ್ಟರ್, ಇದು ಆರೋಗ್ಯಕರ ರಾಜಕೀಯ: ಡಿ.ಕೆ.ಶಿವಕುಮಾರ್
ಬೆಂಗಳೂರು(ಸೆ.22): ಬಿಜೆಪಿ ಸರ್ಕಾರ ಶೇ.40 ಕಮಿಶನ್ ಸರ್ಕಾರ ಎಂಬುದನ್ನು ಜನರಿಗೆ ಮುಟ್ಟಿಸಲು ವ್ಯಂಗ್ಯವಾಗಿ ‘ಪೇ-ಸಿಎಂ’ ಕ್ಯೂಆರ್ ಕೋಡ್ ಇರುವ ಪೋಸ್ಟರ್‌ಗಳನ್ನು ನಗರದಲ್ಲಿ ಅಂಟಿಸಲಾಗಿದೆ. ಇದರಲ್ಲಿ ತಪ್ಪೇನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳನ್ನು ವ್ಯಂಗ್ಯಚಿತ್ರದ ಮೂಲಕ ಕ್ರಿಯಾತ್ಮಕ ರೀತಿಯಲ್ಲಿ ಲೇವಡಿ ಮಾಡುತ್ತಾರೆ. ಭ್ರಷ್ಟಾಚಾರ ವಿಚಾರವಾಗಿ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ವಿವಿಧ ರೀತಿಯಲ್ಲಿ ಪ್ರಶ್ನಿಸಲಾಗಿದೆ. ಜನರಿಗೂ ಈ ವಿಚಾರ ಮುಟ್ಟಿಸಬೇಕಾಗುತ್ತದೆ. ಹೀಗಾಗಿ ಈ ರೀತಿ ಮಾಡಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ಆರೋಗ್ಯಕರ ರಾಜಕೀಯ ಎಂದು ಸ್ಪಷ್ಟಪಡಿಸಿದರು.
‘ಬಿಜೆಪಿ ನಾಯಕರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನಿದ್ರಾಮಯ್ಯ ಎಂದು ಲೇವಡಿ ಮಾಡುತ್ತಿದ್ದರು. ನನ್ನನ್ನು ಕೊತ್ವಾಲ… ರಾಮಚಂದ್ರನ ಶಿಷ್ಯ ಎಂದು ಕರೆಯುತ್ತಾರೆ. ರಾಜಕಾರಣ, ಅಧಿಕಾರದಲ್ಲಿರುವವರು ಇವೆಲ್ಲವನ್ನೂ ಅರಗಿಸಿಕೊಳ್ಳಬೇಕು ಎಂದರು.
Pay CM Posters: ಕಾಂಗ್ರೆಸ್, ಬಿಜೆಪಿ ಪೋಸ್ಟರ್ ಫೈಟ್: ಪೇ ಸಿಎಂಗೆ ಕಮಲ ಪಡೆ ಕೌಂಟರ್
ಬಸವರಾಜ ಬೊಮ್ಮಾಯಿ ಅವರ ಬಗ್ಗೆ ವ್ಯಂಗ್ಯಚಿತ್ರ ರಚಿಸಿದಾಗ ಏಕೆ ದೂರು ನೀಡಲಿಲ್ಲ? ಪೋಸ್ಟರ್ ಅಂಟಿಸಿದ್ದರಲ್ಲಿ ತಪ್ಪೇನು?’ ಎಂದು ಪ್ರಶ್ನಿಸಿದರು.
ಪೇಸಿಎಂ ಪೋಸ್ಟರ್ ತನಿಖೆಗೆ ಪೊಲೀಸ್ ಆಯುಕ್ತ ಆದೇಶ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ನಗರದಲ್ಲಿ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಹಾಕಿದ ಪ್ರಕರಣದ ಬಗ್ಗೆ ಸಿಸಿಬಿ ತನಿಖೆಗೆ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಬುಧವಾರ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಪೋಸ್ಟರ್ ಹಾಕಿದ ಆರೋಪಿಗಳ ಪತ್ತೆಗೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳುವ ಮಾರ್ಗದ ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ಶೇಷಾದ್ರಿಪುರ ಹಾಗೂ ಹೈಗ್ರೌಂಡ್ಸ್ ವ್ಯಾಪ್ತಿಯ ಗೋಡೆಗಳಿಗೆ ‘ಪೇ ಸಿಎಂ’ ಹೆಸರಿನ ಪೋಸ್ಟರ್‌ಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎನ್ನಲಾದ ಕೆಲವರು ಹಾಕಿದ್ದರು. ಈ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮುಖ್ಯಮಂತ್ರಿಗಳಿಗೆ ಭಾರಿ ಮುಜುಗರ ತಂದಿದ್ದವು.
ಕೃಷ್ಣನ ರೂಪದಲ್ಲಿ ಮೋದಿ: ಪ್ರಾಣೇಶ್ ಹೇಳಿಕೆಗೆ ಕಾಂಗ್ರೆಸ್ ಕಿಡಿ
ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಜೆ.ಸಿ.ನಗರ, ಸಂಜಯನಗರ, ಶೇಷಾದ್ರಿಪುರ, ಸದಾಶಿವನಗರ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ ಆರೋಪದ ಮೇರೆಗೆ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿ ಆದೇಶಿಸಿದ್ದಾರೆ.
ಪೋಸ್ಟರ್ ಬಗ್ಗೆ ಅಧಿಕಾರಿಗಳ ಮೇಲೆ ಸಿಎಂ ಗರಂ
ಬೆಂಗಳೂರು: ‘ಪೇ ಸಿಎಂ’ ಪೋಸ್ಟರ್ ಅಭಿಯಾನದಿಂದ ಆಕ್ರೋಶಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಬುಧವಾರ ಮುಂಜಾನೆಯೇ ಪೋಸ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಂಗತಿ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಪೋಸ್ಟರ್ ಅಂಟಿಸಿದವರ ಕಿಡಿಗೇಡಿಗಳನ್ನು ಪತ್ತೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರ ಮೇಲೆ ಮುಖ್ಯಮಂತ್ರಿ ತೀವ್ರ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.