ಕುಟುಂಬ ರಾಜಕಾರಣ, ಗುಂಪುಗಾರಿಕೆಯಿಂದ ಬೇಸತ್ತು ಜೆಡಿಎಸ್ ತೊರೆದೆ: ಸಿಂಗರಾಜಪುರ ರಾಜಣ್ಣ
ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಹಿರಿಯ ನಾಯಕರ ಮಾತಿಗೆ ಮರ್ಯಾದೆ ಇಲ್ಲದಂತಾಗಿದೆ. ಕುಮಾರಸ್ವಾಮಿಯವರೇ ಬಣ ರಾಜಕಾರಣ ಪ್ರೋತ್ಸಾಹಿಸುತ್ತಿರುವುದರಿಂದ ಕಾರ್ಯಕರ್ತರೆ ಕಿತ್ತಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ: ರಾಜಣ್ಣ
ರಾಮನಗರ(ಸೆ.22): ಮಾಜಿ ಸಿಎಂ ಕುಮಾರಸ್ವಾಮಿಯವರ ಕುಟುಂಬ ರಾಜಕಾರಣ ಹಾಗೂ ಪಕ್ಷದೊಳಗಿನ ಗುಂಪುಗಾರಿಕೆಯಿಂದ ಬೇಸತ್ತು ತಾವು ಜೆಡಿಎಸ್ ಪಕ್ಷ ತೊರೆಯುತ್ತಿರುವುದಾಗಿ ಹಿರಿಯ ಮುಖಂಡ ಲಿಂಗರಾಜೇಗೌಡ (ಸಿಂಗರಾಜಪುರ ರಾಜಣ್ಣ ) ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಹಿರಿಯ ನಾಯಕರ ಮಾತಿಗೆ ಮರ್ಯಾದೆ ಇಲ್ಲದಂತಾಗಿದೆ. ಕುಮಾರಸ್ವಾಮಿಯವರೇ ಬಣ ರಾಜಕಾರಣ ಪ್ರೋತ್ಸಾಹಿಸುತ್ತಿರುವುದರಿಂದ ಕಾರ್ಯಕರ್ತರೆ ಕಿತ್ತಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೆಲ್ಲವನ್ನು ನೋಡಿಕೊಂಡು ಪಕ್ಷದಲ್ಲಿ ಇರಲು ಮನಸ್ಸು ಒಪ್ಪುತ್ತಿಲ್ಲ. ಆದ್ದರಿಂದ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷವನ್ನು ತೊರೆಯುತ್ತಿದ್ದು, ಶೀಘ್ರದಲ್ಲಿ ತಮ್ಮ ರಾಜಕೀಯ ನಿರ್ಧಾರ ತಿಳಿಸುವುದಾಗಿ ಹೇಳಿದರು.
1985ರಿಂದ ಜಿಲ್ಲೆಯಲ್ಲಿ ದೇವೇಗೌಡರವರ ಕೈ ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ. ಅವರು ಶಾಸಕರಾಗಿ ಪ್ರಧಾನಿ ಹುದ್ದೆ ಅಲಂಕರಿಸಿದರು. ಇದೆಲ್ಲ ಜೆಡಿಎಸ್ ಕಾರ್ಯಕರ್ತರ ಪರಿಶ್ರಮದ ಫಲ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಪರವಾಗಿಯೂ ಕಾರ್ಯಕರ್ತರು 40 ವರ್ಷಗಳಿಂದ ದುಡಿಯುತ್ತಲೇ ಇದ್ದರೂ ಯಾವ ಕಾರ್ಯಕರ್ತರಿಗೂ ಅಧಿಕಾರ ನೀಡಿಲ್ಲ.
ಕರ್ನಾಟಕ ಅಭಿವೃದ್ಧಿಪಡಿಸುತ್ತೇನೆ ನಮಗೊಂದು ಸಲ ಅವಕಾಶ ನೀಡಿ: ಕುಮಾರಸ್ವಾಮಿ
ಮಗ, ಮೊಮ್ಮಕ್ಕಳಿಗೂ ದುಡಿಯಬೇಕೇ?:
ಎಲ್ಲ ಅಧಿಕಾರ ತಮ್ಮ ಕುಟುಂಬಕ್ಕೆ ಬೇಕು ಎಂಬ ಭಾವನೆಯಲ್ಲಿ ಕುಟುಂಬ ರಾಜಕಾರಣವನ್ನು ಮಾಡುತ್ತಿದ್ದಾರೆ. ಅಪ್ಪ , ಮಗ ಹಾಗೂ ಸೊಸೆಗಾಗಿ ಕಾರ್ಯಕರ್ತರು ದುಡಿದಿದ್ದಾಗಿದೆ. ಈಗ ಅವರ ಮಗ ಹಾಗೂ ಮೊಮ್ಮಕ್ಕಳಿಗೂ ದುಡಿಯಬೇಕಾಗಿದೆ. ಕುಮಾರಸ್ವಾಮಿರವರ ಈ ಧೋರಣೆ ನನ್ನಂತಹ ಅನೇಕ ಮುಖಂಡರಿಗೆ ಬೇಸರ ತರಿಸಿದೆ ಎಂದು ರಾಜಣ್ಣ ಅಸಮಾಧಾನ ಹೊರ ಹಾಕಿದರು.
ಕಾರ್ಯಕರ್ತರು ಕೂಲಿ ಆಳುಗಳು:
16 ತಿಂಗಳು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಸೇರಿದಂತೆ ನಿಗಮ ಮಂಡಳಿ ಅಧ್ಯಕ್ಷ - ನಿರ್ದೇಶಕ ಸ್ಥಾನಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಿಲ್ಲ. ದಲಿತರು, ಹಿಂದುಳಿದ ವರ್ಗ ಹಾಗೂ ಇತರೆ ಜಾತಿಗಳಿಗೂ ಪ್ರಾತಿನಿಧ್ಯ ನೀಡಿ ಪಕ್ಷ ಬಲಪಡಿಸಲು ಸಹಕರಿಸುವಂತೆ ಮಾಡಿದ ಮನವಿಗೂ ಸೊಪ್ಪು ಹಾಕಲಿಲ್ಲ. ಅವರಿಗೆ ಮಾತ್ರ ಅಧಿಕಾರ ಬೇಕು, ಕಾರ್ಯಕರ್ತರು ಕೂಲಿ ಆಳುಗಳಂತೆ ಕೆಲಸ ಮಾಡಿಕೊಂಡಿರಬೇಕು ಎಂದು ಕುಮಾರಸ್ವಾಮಿ ವಿರುದ್ಧ ಕಿರಿಕಾರಿದರು.
ಎಚ್ಡಿಕೆಗೆ ತೆರಿಗೆ ರೀತಿಯಲ್ಲಿ ಹಣ:
ಕ್ಷೇತ್ರದಲ್ಲಿ ಗೋವಿಂದಹಳ್ಳಿ ನಾಗರಾಜು ಹೊರತು ಪಡಿಸಿದರೆ ಬೇರೆ ಗುತ್ತಿಗೆದಾರನಿಗೆ ಕೆಲಸ ನೀಡಿಲ್ಲ. ಹೊರಗಿನ ಗುತ್ತಿಗೆದಾರರಿಗೆ ಮಣೆ ಹಾಕುವ ಮೂಲಕ ಸಣ್ಣಪುಟ್ಟಗುತ್ತಿಗೆದಾರರು ಕೆಲಸ ಇಲ್ಲದೆ ಮನೆ ಸೇರುವಂತಾಗಿದೆ. ಕಮಿಷನ್ ರೀತಿಯಲ್ಲಿ ಹಣ ಪಡೆಯದಿದ್ದರೂ ಬೇರೆ ತೆರಿಗೆ ರೂಪದಲ್ಲಿ ಕುಮಾರಸ್ವಾಮಿ ಹಣ ಪಡೆದಿದ್ದಾರೆ ಎಂದು ರಾಜಣ್ಣ ಆರೋಪ ಮಾಡಿದರು.
ಕುಮಾರಸ್ವಾಮಿ ಪಿಎ, ಗನ್ಮ್ಯಾನ್ಗಳಿಗೆ ಲಂಚ ಕೊಡ್ಬೇಕು
ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಬೇಕಾದರೆ ಅವರ ಆಪ್ತ ಸಹಾಯಕರು ಮತ್ತು ಗನ್ಮ್ಯಾನ್ಗಳಿಗೆ ಲಂಚ ಕೊಡಬೇಕು ಎಂದು ಸಿಂಗರಾಜಪುರ ರಾಜಣ್ಣ ಆರೋಪಿಸಿದರು.
ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ರಾಜ್ಯ ರಾಜಕಾರಣದಲ್ಲಿ ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ನೇರವಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಆಪ್ತ ಸಹಾಯಕರು - ಗನ್ಮ್ಯಾನ್ಗಳು ಅವಕಾಶ ನೀಡಲ್ಲ. ಅವರಿಗೆ ಸ್ವಲ್ಪ ಹಣ ನೀಡಿದರಷ್ಟೇ ಕುಮಾರಸ್ವಾಮಿರವರ ಬಳಿಗೆ ನೇರವಾಗಿ ಕರೆದುಕೊಂಡು ಹೋಗುತ್ತಾರೆ ಎಂದು ಟೀಕಿಸಿದರು.
ಈಗ ಜಲಧಾರೆ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬ ರಾಜಕಾರಣ, ಅನುಕೂಲಸಿಂಧು ಧೋರಣೆ, ಜನವಿರೋಧಿ ನಿಲುವು ಅರಿತು ಜನರು ಜೆಡಿಎಸ್ಅನ್ನು ತಿರಸ್ಕರಿಸುತ್ತಿದ್ದಾರೆ. ಈ ತಪ್ಪನ್ನು ಮುಚ್ಚಿಕೊಳ್ಳಲು ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ ಅಂತ ಸಿಂಗರಾಜಪುರ ರಾಜಣ್ಣ ತಿಳಿಸಿದ್ದಾರೆ.